Saturday, July 27, 2024

ಸೆರೆನಾ ನೀನು ಮಾಡಿದ್ದು ಸರೀನಾ?

ಏಜೆನ್ಸೀಸ್ ನ್ಯೂಯಾರ್ಕ್

ಮನೆಯಂಗಣದಲ್ಲಿ ನಾನೇ ಗೆಲ್ಲಬೇಕು… ದಾಖಲೆಗಳನ್ನು ಮುರಿಯಬೇಕು….ಮುಂದಿನ ಬಾರಿ ಸ್ಪರ್ಧಿಸುತ್ತೇನೋ ಇಲ್ಲವೋ ಗೊತ್ತಿಲ್ಲ… ನಾನೇನೇ ಮಾಡಿದರೂ ಮನೆಯಂಗಣದಲ್ಲಿ ನನ್ನನ್ನು ಕ್ಷಮಿಸುತ್ತಾರೆ… ಎಂದೆಲ್ಲ ಲೆಕ್ಕಾಚಾರ ಹಾಕಿಕೊಂಡಿದ್ದ ಜಗತ್ತಿನ ಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ದಂಡ ತೆತ್ತು ಸೋಲನುಭವಿಸಬೇಕಾಯಿತು. ಎಲ್ಲರೂ… ಎಲ್ಲರನ್ನೂ… ಎಲ್ಲ ಸಂದ ರ್ಭರ್ಗಳಲ್ಲೂ ಒಪ್ಪಿಕೊಳ್ಳೊಲ್ಲ ಎಂಬುದಕ್ಕೆ ಯುಎಸ್ ಓಪನ್ ಫೈನಲ್ ಸಾಕ್ಷಿಯಾಯಿತು.

ತನ್ನ ನೈಜ ಆಟವಾಡಿ ಗೆದ್ದರೂ,ನವೋಮಿ ಒಸಾಕ ಕಣ್ಣೀರಿನೊಂದಿಗೆ ಪ್ರಶಸ್ತಿ ಸ್ವೀಕರಿಸಬೇಕಾಯಿತು. ಇದು ಈ ಬಾರಿಯ ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳಾ ಫೈನಲ್‌ನಲ್ಲಿ ಕಂಡು ಬಂದ ದೃಶ್ಯ.

ಸೋಲುತ್ತಿರುವುದನ್ನು ಖಚಿತಪಡಿಸಿಕೊಂಡ ಸೆರೆನಾ ವಿಲಿಯಮ್ಸ್ ಅಂಪೈರ್ ಅವರ ತೀರ್ಮಾನಕ್ಕೆ ವಿರೋಧ  ವ್ಯಕ್ತಪಡಿಸಿದರು. ಅವರನ್ನು ಸುಳ್ಳುಗಾರ ಎಂದು ನಿಂದಿಸಿದರು. ರಾಕೆಟ್ ಪುಡಿ ಮಾಡಿದರು…ಇದೆಲ್ಲ ಟೆನಿಸ್‌ನ ನಿಯಮಕ್ಕೆ ವಿರುದ್ಧವಾದದುದು. ಆ ಕಾರಣ ಒಂದು ಗೇಮ್ ಅಂಕವನ್ನು ಎದುರಾಳಿಗೆ ನೀಡುವ ಮೂಲಕ ಸೆರೆನಾಗೆ ಶಿಕ್ಷೆ ವಿಧಿಸಲಾಯಿತು. ತಮ್ಮ ಮನೆಯಂಗಣದ ಹುಡುಗಿ ಮಾಡಿದ್ದೇ ಸರಿ ಎಂದು ಅಮೆರಿಕದ ಟೆನಿಸ್ ಅಭಿಮಾನಿಗಳು ಕೇಕೆ ಹಾಕಿದರು. ಆದರೆ ಒಸಾಕ 6-2, 6-4 ಅಂತರದಲ್ಲಿ ಸೆರೆನಾ ಅವರನ್ನು ಹೊಸಕಿ ಹಾಕಿ ಮೊದಲ ಬಾರಿಗೆ ಜಪಾನ್ ಪರ ಗ್ರ್ಯಾನ್ ಸ್ಲಾಮ್ ಗೆದ್ದರು.

36  ವರ್ಷದ ಆಟಗಾರ್ತಿಯ ವಿರುದ್ಧ 20 ವರ್ಷದ ಆಟಗಾರ್ತಿ ಗೆಲ್ಲುವುದು ಅಮೆರಿಕದ ಚಾಂಪಿಯನ್‌ಗೆ ಸರಿಗಾಣಲಿಲ್ಲ. ಆಕೆಯ ಕೋಚ್ ಅಂಗಣದ ಹೊರಗಡೆಯಿಂದ ಸಲಹೆ ನೀಡುತ್ತಿರುವುದು ಆಟದ ನಿಯಮಕ್ಕೆ ವಿರುದ್ಧವಾಗಿತ್ತು. 24ನೇ ಪ್ರಶಸ್ತಿ ಗೆದ್ದು ದಾಖಲೆಯನ್ನು ಸರಿಗಟ್ಟಬೇಕೆಂಬ ಸೆರೆನಾ ಅವರ ಹಂಬಲ ಸಿಟ್ಟಿನಲ್ಲೇ ಕರಗಿಹೋಯಿತು. ಪ್ರಶಸ್ತಿ ಪ್ರದಾನದ ವೇಳೆ ಮತ್ತೆ  ಈ ಅಂಗಣದಲ್ಲಿ ಆಡುವೆ ಎಂಬ ಆಶಯವನ್ನು ಸೆರೆನಾ ವ್ಯಕ್ತಪಡಿಸಿದರು. 2009ರಲ್ಲಿ ಕಿಮ್ ಕ್ಲೈಸ್ಟರ್ ವಿರುದ್ಧದ ಸೆಮಿ ಫೈನಲ್ ಹಾಗೂ 2011ರಲ್ಲಿ ಸ್ಯಾಮ್ ಸ್ಟಾಸರ್ ವಿರುದ್ಧದ ಫೈನಲ್‌ನಲ್ಲೂ ಇದೇ ರೀತಿ ರಂಪಾಟ ಮಾಡಿದ್ದರು.

ಅಂಪೈರ್ ಕಾರ್ಲೋಸ್ ರಮೋಸ್ ವಿರುದ್ಧ ಸೆರೆನಾ ವಿಲಿಯಮ್ಸ್ ಮಾಡಿದ ವಿವಾದ ಯುಎಸ್ ಓಪನ್ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ಗ್ರ್ಯಾನ್ ಸ್ಲಾಮ್ ಪಂದ್ಯಗಳು ನಡೆಯುವಾಗ ಕೋಚ್‌ಗಳಿಂದ ಸಲಹೆ ಪಡೆಯುವುದು ಅಥವಾ ಕೋಚ್‌ಗಳು ಸಲಹೆ ನೀಡುವುದು ನಿಷೇಧ. ಆದರೆ ಸೆರೆನಾ ಒಬ್ಬ ಚಾಂಪಿಯನ್ ಆಟಗಾರ್ತಿಯಾಗಿ ಈ ರೀತಿ ಮಾಡಿದ್ದಕ್ಕೆ ಎದುರಾಳಿಗೆ ಅಂಕ ನೀಡುವ ಮೂಲಕ ದಂಡ ತೆರಬೇಕಾಯಿತು.

ತಾನು ಯಾವುದೇ ರೀತಿಯ ಮೋಸದಾಟ ಆಡಿಲ್ಲ ಎಂದು ಸೆರೆನಾ ಪಂದ್ಯದ ವೇಳೆಯೇ ವಾದ ಮಂಡಿಸಿದರು. ಆದರೆ ಇಎಸ್ಪಿಎನ್‌ಗೆ ನೀಡಿದ ಸಂದರ್ಶನದಲ್ಲಿ ಸೆರೆನಾ ಅವರ ಕೋಚ್ ಪ್ಯಾಟ್ರಿಕ್ ಮೌರಾಟಾಗ್ಲೋ ತಾವು ಮಾಡಿದ್ದು ತಪ್ಪು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಎರಡನೇ ಸೆಟ್‌ನಲ್ಲಿ ಸೆರೆನಾ ರಾಕೆಟ್ ಅನ್ನು ನೆಲ್ಲಕ್ಕೆ ಕುಟ್ಟಿ ಧ್ವಂಸ ಮಾಡಿದರು. ಇದು ಆಟದಲ್ಲಿ ಎರಡನೇ ಬಾರಿ ನಿಯಮ ಉಲ್ಲಂಘನೆಯಾಗಿತ್ತು. ಇದರಿಂದ ಸೆರೆನಾ ಅಂಕ ಕಳೆದುಕೊಳ್ಳಬೇಕಾಯಿತು. ಇದರಿಂದ ಸಿಟ್ಟಿಗೆದ್ದ ಸೆರೆನಾ ಅಂಪೈರ್ ಅನ್ನು ಕಳ್ಳ ಎಂದು ನಿಂದಿಸಿದರು. ಇದರಿಂದ ಅಂಪೈರ್ ಅಂಕವನ್ನು ಎದುರಾಳಿ ನೀಡಿದ ಪರಿಣಾಮ ಸೆರೆನಾ ಗೇಮ್ ಕಳೆದುಕೊಳ್ಳಬೇಕಾಯಿತು.

Related Articles