Tuesday, January 14, 2025

ಕಂಬಳ ಕ್ರೀಡೆ ಯುವ ಸಬಲೀಕರಣ, ಕ್ರೀಡಾ ಇಲಾಖೆಗೆ ಸೇರ್ಪಡೆಯಾಗಲಿ

ಉಡುಪಿ: ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಈಗ ಕಂಬಳದ ಋತು. ಈ ಜಾನಪದ ಕ್ರೀಡೆಗೆ ಶತಮಾನಗಳ ಇತಿಹಾಸವಿದೆ. ನವೆಂಬರ್‌ನಿಂದ ಏಪ್ರಿಲ್‌ ವರೆಗೆ ಸುಮಾರು 58ಕ್ಕೂ ಹೆಚ್ಚು ಕಂಬಳಗಳು ನಡೆಲಿದ್ದು ಈಗಾಗಲೇ ನಾಲ್ಕೈದು ಕಂಬಳ ಮುಗಿದಿದೆ. ಕರಾವಳಿಯ ಈ ಜಾನಪದ ಕ್ರೀಡೆಗೆ ಮತ್ತಷ್ಟು ಉತ್ತೇಜನ ಸಿಗಬೇಕಾಗಿದೆ. ಈ ದೃಷ್ಟಿಯಿಂದ ಈ ಜಾನಪದ ಕ್ರೀಡೆಯನ್ನು ರಾಜ್ಯ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರ್ಪಡೆಗೊಳಿಸುವುದು ಸೂಕ್ತವೆನಿಸಿದೆ. Traditional Sports kambala should add to the Youth Empowerment and Sports Department Karnataka Government.

ಇಂಡೋನೇಷ್ಯ, ಥಾಯ್ಲೆಂಡ್‌ ಹಾಗೂ ಕಾಂಬೋಡಿಯಾ ದೇಶಗಳಲ್ಲೂ ಜನಪ್ರಿಯಗೊಂಡಿರುವ ಈ ಕೋಣನ ಓಟಕ್ಕೆ ಆಯಾ ದೇಶದಲ್ಲಿ ಬೇರೆ ಹೆಸರಿದ್ದರೂ ಅಲ್ಲಿ ಇದು ದೇಶೀಯ ಕ್ರೀಡೆಯಾಗಿ ಸರಕಾರ ಪ್ರೋತ್ಸಾಹ ನೀಡುತ್ತಿದೆ. ಕರಾವಳಿಯಲ್ಲಿ ಕಂಬಳ ಸಮಿತಿ ಇದ್ದು ಈ ಸಮಿತಿ ಈ ನಿಟ್ಟಿನಲ್ಲಿ ಸರಕಾರವನ್ನು ಒತ್ತಾಯಿಸಬೇಕಾದ ಅನಿವಾರ್ಯತೆ ಇದೆ.

ಈ ಕಂಬಳ ಸಮಿತಿಯನ್ನು ರಾಜ್ಯ ಮಟ್ಟದಲ್ಲಿ ನೋದಾಯಿಸಿ, ಕ್ರೀಡಾ ಇಲಾಖೆಗೆ ಈ ಕ್ರೀಡೆಯ ಇತಿಹಾಸವನ್ನು ತಿಳಿಸುವ ವರದಿಯೊಂದನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮೂರು ಜಿಲ್ಲೆಗಳ ಕಂಬಳ ಸಮಿತಿಯ ಪ್ರಮುಖರು ಸಭೆ ಸೇರಿ ಚರ್ಚಿಸುವ ಅಗತ್ಯವಿದೆ. ಕೃಷಿಯಲ್ಲಿ ಈಗ ತಂತ್ರಜ್ಞಾನ ಪ್ರಮುಖ ಪಾತ್ರವಹಿಸುತ್ತಿದ್ದು ಕೋಣಗಳ ಬಳಕೆ ಕಡಿಮೆಯಾಗುತ್ತಿದೆ. ಕರಾವಳಿಯ ಈ ಕ್ರೀಡೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಇದಕ್ಕೊಂದು ಸಾಂಘಿಕ ಸ್ವರೂಪ ನೀಡಬೇಕಿದೆ.

ಕೇಂದ್ರ ಸರಕಾರ ನಮ್ಮ ಹಲವಾರು ದೇಶೀಯ ಹಾಗೂ ಜಾನಪದ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ಅವುಗಳನ್ನು ಖೇಲೋ ಇಂಡಿಯಾ ಯೋಜನೆಯಲ್ಲಿ ಬಳಸಿಕೊಂಡು ಉತ್ತೇಜ ನೀಡುತ್ತಿದೆ. ಕಂಬಳದ ಕೋಣಗಳ ಹಿಂದೆ ಓಡುವವರು ಒಬ್ಬ ಕ್ರೀಡಾಪಟುವಿನಂತೆ ನಿರಂತರವಾಗಿ ಅಭ್ಯಾಸ ಮಾಡುತ್ತಿರುತ್ತಾರೆ. ಇವರ ಜೊತೆಯಲ್ಲಿ ಕೋಣಗಳನ್ನು ಕಂಬಳಕ್ಕೆ ಸಜ್ಜುಗೊಳಿಸಲು ಸಾಕಷ್ಟು ಹಣದ ಅಗತ್ಯವೂ ಇರುತ್ತದೆ. ಈ ಕಂಬಳವನ್ನು ಆಯೋಜಿಸವವರಿಗೆ ಸರಕಾರದಿಂದ ಹಣಕಾಸಿನ ನೆರವು ಸಿಕ್ಕರೆ ಇನ್ನೂ ಉತ್ತಮವಾಗಿ, ವೃತ್ತಿಪರವಾಗಿ ಕಂಬಳವನ್ನು ಆಯೋಜಿಸಬಹುದು.

ಕ್ರೀಡಾ ಪ್ರವಾಸೋದ್ಯಮಕ್ಕೆ ಒತ್ತು: ಈ ಮೂರು ಜಿಲ್ಲೆಗಳಲ್ಲಿ ಕಂಬಳ ನಡೆಯುವುದು ನವೆಂಬರ್‌ನಿಂದ ಏಪ್ರಿಲ್‌ ಕೊನೆಯವಾರದ ವರೆಗೆ. ಈ ಸಂದರ್ಭದಲ್ಲಿ ಕರಾವಳಿಯಲ್ಲಿ ಜಾತ್ರೆ, ರಥೋತ್ಸವಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಇಂಥ ಸಂದರ್ಭದಲ್ಲಿ ಬೇರೆ ಜಿಲ್ಲೆಗಳಿಂದ ಜನರು ಪ್ರವಾಸಕ್ಕಾಗಿ ಬಂದು ಕಂಬಳದ ಜೊತೆಯಲ್ಲಿ ಇಲ್ಲಿ ಜಾತ್ರೆಗಳನ್ನು ನೋಡಿಕೊಂಡು, ಪುಣ್ಯ ಕ್ಷೇತ್ರಗಳ ಸಂದರ್ಶನವನ್ನೂ ಮಾಡಿದಂತಾಗುತ್ತದೆ.

ಕಂಬಳ ಓಟಗಾರ ಶ್ರೀನಿವಾಸ ಗೌಡರನ್ನು ರಾಜ್ಯ ಸರಕಾರ ಗುರುತಿಸಿದ್ದು ಕ್ರೀಡಾಮನೋಭಾವದಿಂದಲೇ. ಕ್ರೀಡಾ ರತ್ನ ಪ್ರಶಸ್ತಿಗಳನ್ನು ನೀಡುವಾಗ ಕಂಬಳದ ಸಾಧಕರನ್ನು, ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ಕಂಬಳದ ಪೋಷಕರನ್ನು ಗುರುತಿಸುವ ಉತ್ತಮ ಕಾರ್ಯ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಕಂಬಳ ಸಮಿತಿಯವರು ಒಂದಾಗ ಕಂಬಳವನ್ನು ಕ್ರೀಡಾ ಇಲಾಖೆಯ ವ್ಯಾಪ್ತಿಗೆ ಸೇರಿಸಿದರೆ ಮುಂದಿನ ಪೀಳಿಗೆಗೆ ಈ ಕ್ರೀಡೆಯನ್ನು ಜೀವಂತವಾಗಿರಿಸಿಕೊಂಡು ಹೋಗಲು ಸಹಾಯವಾಗುತ್ತದೆ.

ಕಳೆದ ವರ್ಷ ಬೆಂಗಳೂರಿನ ಕಂಬಳ ನಡೆದದ್ದು ಒಂದು ಗ್ರಾಮೀಣ ಕ್ರೀಡೆಗೆ ಯಾವ ರೀತಿಯಲ್ಲಿ ಆಧುನಿಕ ಸ್ಪರ್ಷ ನೀಡಬಹುದು ಎಂಬುದು ಸಾಬೀತಾಗಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ನಗರ ಕಂಬಳ ಗಮನ ಸೆಳೆದಿದೆ. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಾವು ಇಂಥ ಗ್ರಾಮೀಣ ಕ್ರೀಡೆಯನ್ನು ಉಳಿಸಿಕೊಂಡು ಹೋಗದಿದ್ದರೆ ಅದು ಒಂದು ದಿನ ನಶಿಸಿ ಹೋಗುವ ಸಾಧ್ಯತೆ ಹೆಚ್ಚಿದೆ.

ಕಂಬಳ ಋತು ಆರಂಭವಾಗಿರುವ ಇಂಥ ಶುಭ ಸಂದರ್ಭದಲ್ಲಿ ಪ್ರಜ್ಞಾವಂತರು ಈ ಬಗ್ಗೆ ಯೋಚಿಸಿ ಒಂದು ಯೋಜನೆಯನ್ನು ರೂಪಿಸಿ ಸರಕಾರದ ಮುಂದಿಡಬೇಕಾದ ಅನಿವಾರ್ಯತೆ ಇದೆ.

Related Articles