Wednesday, November 13, 2024

ಮೊಂಟೆ-ಕಾರ್ಲೋ ಮಾಸ್ಟರ್ಸ್‌: ಕ್ವಾ. ಫೈನಲ್‌ಗೆ ನಡಾಲ್‌, ಜೊಕೊವಿಚ್‌

ಪ್ಯಾರಿಸ್‌: ವಿಶ್ವ ಶ್ರೇಷ್ಠ ಟೆನಿಸ್‌ ತಾರೆಗಳಾದ ನೊವಾಕ್‌ ಜೊಕೊವಿಚ್‌ ಹಾಗೂ ರಾಫೆಲ್‌ ನಡಾಲ್‌ ಅವರು ಎಟಿಪಿ ಮೊಂಟ್‌-ಕಾರ್ಲೋ ಮಾಸ್ಟರ್ಸ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಜೊಕೊವಿಚ್‌ 6-3, 6-0 ನೇರ ಸೆಟ್‌ಗಳ ಅಂತರದಲ್ಲಿ ಅಮೆರಿಕದ ಟೇಲರ್‌ ಫ್ರಿಟ್ಜ್‌ ಅವರ ವಿರುದ್ಧ ಜಯ ದಾಖಲಿಸಿ 9ನೇ ಬಾರಿ ಪ್ರಸಕ್ತ ಟೂರ್ನಿಯ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದರು.

68 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವ ಅಗ್ರ ಶ್ರೇಯಾಂಕಿತ ಆಟಗಾರ 10ರಲ್ಲಿ ಆರು ಬ್ರೇಕಿಂಗ್‌ ಪಾಯಿಂಟ್‌ಗಳನ್ನಾಗಿ ಪರಿವರ್ತಿಸಿದರು. ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ 10 ನೇ ಸ್ಥಾನದ ಡೆನಿಲ್‌ ಮೆಡ್ವೆಡೆವ್‌ ಅವರ ವಿರುದ್ಧ ಸೆಮಿಫೈನಲ್‌ಗೆ ಕಾದಾಟ ನಡೆಸಲಿದ್ದಾರೆ.
ಮೆಡ್ವೆಡವ್‌ ಅವರು ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ  ಗ್ರೀಕ್‌ನ ಸ್ಟೆಫಾನೋಸ್‌ ಸಿಟ್ಸಿಪಸ್‌ ವಿರುದ್ಧ 6-2, 1-6, 6-4 ಅಂತರದಲ್ಲಿ ಜಯ ಸಾಧಿಸಿದ್ದರು. ಆ ಮೂಲಕ ಮೆಡ್ವೆಡೆವ್‌ ಅವರ ಪಾಲಿಗೆ ಮಾಸ್ಟರ್ಸ್‌ 1000 ಮೊದಲ ಕ್ವಾರ್ಟರ್‌ ಫೈನಲ್‌ ಇದಾಗಿದೆ.
” ಡೆನಿಲ್‌ ಮೆಡ್ವಡೆವ್‌ ಅವರ ವಿರುದ್ಧ ಮಣ್ಣಿನ ಅಂಗಳದಲ್ಲಿ ಎಂದೂ ಎದುರಿಸಿಲ್ಲ. ಆದರೆ, ಅವರ ಆಟ ಗಮನಸಿದ್ದು, ಅವರೊಂದಿಗೆ ಹಲವು ಬಾರಿ ಅಭ್ಯಾಸ ನಡೆಸಿದ್ದೇನೆ. ಅವರ ವಿರುದ್ಧ ಸೆಣಸಲು ಸಿದ್ಧನಿದ್ದೇನೆ.” ಎಂದು ಪಂದ್ಯದ ಬಳಿಕ ಜೊಕೊವಿಚ್‌ ಹೇಳಿದರು.

ಮತ್ತೊಂದು ಪ್ರೀ ಕ್ವಾರ್ಟರ್‌ ಪೈನಲ್‌ ಪಂದ್ಯದಲ್ಲಿ 11 ಬಾರಿ ಚಾಂಪಿಯನ್‌ ರಾಫೆಲ್‌ ನಡಾಲ್‌ ಅವರು ಬಲ್ಗೇರಿಯಾದ ಗ್ರಿಗೋರ್‌ ಡಿಮಿಟ್ರೋವ್‌ ಅವರ ವಿರುದ್ಧ 6-4, 6-1 ನೇರ ಸೆಟ್‌ಗಳಿಂದ ಗೆದ್ದು 15 ನೇ ಬಾರಿ ಮೊಂಟ್‌-ಕಾರ್ಲೋ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್‌ ಫೈನಲ್ ತಲುಪಿದರು.

” ನನ್ನ ಪ್ರದರ್ಶನದ ಹಾದಿಯ ಬಗ್ಗೆ ಸಂತಸವಿದೆ. ಮೊದಲ ಎರಡು ಸುತ್ತಿನ ಪಂದ್ಯಗಳಿಗಿಂತ ಈ ಕಾದಾಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. ಹಾಗಾಗಿ, ಪ್ರಸಕ್ತ ಆವೃತ್ತಿಯಲ್ಲಿ ಮಣ್ಣಿನ ಅಂಗಳದಲ್ಲಿ ಉತ್ತಮ ಆರಂಭ ಪಡೆದಿದ್ದೇನೆ. ಇಂದಿನ ಜಯ ಮುಂದಿನ ಪಂದ್ಯಕ್ಕೆ ನೆರವಾಗಬಹುದು”. ಎಂದು ಪಂದ್ಯದ ಬಳಿಕ ನಡಾಲ್‌ ವಿಶ್ವಾಸ ವ್ಯಕ್ತಪಡಿಸಿದರು.
ರಾಪೆಲ್‌ ನಡಾಲ್‌ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ  ಗ್ವಿಡೊ ಪೆಲ್ಲಾ ವಿರುದ್ಧ ನಾಳೆ ಸೆಣಸಲಿದ್ದಾರೆ.

ಮತ್ತೊಂದು ಪುರುಷರ ಸಿಂಗಲ್ಸ್‌ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇಟಲಿಯ ಲೊರೆಂಜೊ ಸೊನೆಗೊ ಅವರು ಬ್ರಿಟನ್‌ನ  ಕ್ಯಾಮರೋನ್‌ ನೊರಿ ಅವರ ವಿರುದ್ಧ 6-2, 7-5 ಅಂತರದಲ್ಲಿ ಜಯಸಿ ವೃತ್ತಿ ಜೀವನದಲ್ಲಿ ಮೊದಲ ಬಾರಿ ಮೊಂಟ್‌-ಕಾರ್ಲೋ ಮಾಸ್ಟರ್ಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ಮತ್ತೊಬ್ಬ ಇಟಲಿಯ ಆಟಗಾರ ಫ್ಯಾಬಿಯೊ ಫೊಗ್ನಿನಿ ಅವರು ಅಲೆಕ್ಸಾಂಡರ್‌ ಜ್ವೆರೆವ್‌ ಅವರ ವಿರುದ್ಧ 7-6 (6), 6-1 ಅಂತರದಲ್ಲಿ ಜಯಿಸಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಡೊಮಿನಿಚ್‌ ಥೀಮ್‌ ಅವರು ಸರ್ಬಿಯಾದ ಡುಸನ್‌ ಲ್ಯಾಜೊವಿಚ್‌ ವಿರುದ್ಧ 3-6, 3-6 ಅಂತರದಲ್ಲಿ ಸೋತು ಆಘಾತ ಅನುಭವಿಸಿದರು.

Related Articles