Thursday, December 12, 2024

ಫ್ಯಾಬಿಯೊ ಫೊಗ್ನಿನಿಗೆ ಮೊಂಟೆ-ಕಾರ್ಲೋ ಮಾಸ್ಟರ್ಸ್‌ ಕಿರೀಟ

ಪ್ಯಾರಿಸ್‌:  ಅದ್ಭುತ ಪ್ರದರ್ಶನ ತೋರಿದ ಇಟಲಿಯ ಫ್ಯಾಬಿಯೊ ಫೊಗ್ನಿನಿ ಅವರು ಸರ್ಬಿಯಾದ ದುಸಾನ್‌ ಲಾಜೋವಿಚ್‌ ಅವರ ವಿರುದ್ಧ 6-3, 6-4 ಅಂತರದಲ್ಲಿ ನೇರ ಸೆಟ್‌ಗಳಿಂದ ಗೆದ್ದು ಮೊಂಟೆ-ಕಾರ್ಲೊ ಮಾಸ್ಟರ್ಸ್‌ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಇದರೊಂದಿಗೆ ಮಾಸ್ಟರ್ಸ್ 1000 ಟೂರ್ನಿ ಗೆದ್ದ ಮೊದಲ ಇಟಲಿಯ ಟೆನಿಸ್‌ ಆಟಗಾರ ಎಂಬ ಕಿರ್ತಿಗೆ ಫೊಗ್ನಿನಿ ಭಾನುವಾರ ಪಾತ್ರರಾದರು. ಟೂರ್ನಿಯ ಚಾಂಪಿಯನ್‌ ಆಗುವ ಮೂಲಕ ಫೊಗ್ನಿನಿ ವಿಶ್ವ ಟೆನಿಸ್‌ ಶ್ರೇಯಾಂಕದಲ್ಲಿ ವೃತ್ತಿ ಜೀವನದ 12ನೇ ಸ್ಥಾನಕ್ಕೇರಿದರು. ಇದಕ್ಕೂ ಮುನ್ನ ಸೆಮಿಫೈನಲ್ಸ್ ಪಂದ್ಯದಲ್ಲಿ ಫ್ಯಾಬಿಯೊ ಅವರು ಸ್ಪೇನ್‌ ಟೆನಿಸ್‌ ತಾರೆ ರಫೆಲ್‌ ನಡಾಲ್ ಅವರಿಗೆ ಆಘಾತ ನೀಡಿದ್ದರು. ಇದೀಗ ಪ್ರಶಸ್ತಿ ಸುತ್ತಿನಲ್ಲಿ ಸರ್ಬಿಯಾದ ಲಾಜೋವಿಚ್‌ ಅವರನ್ನು ನೇರ ಸೆಟ್‌ಗಳಿಮದ ಮಣಿಸಿ ಚೊಚ್ಚಲ ಪ್ರಶಸ್ತಿ ತನ್ನದಾಗಿಸಿಕೊಂಡರು.

ಭಾನುವಾರ ನಡೆದ ಫೈನಲ್‌ ಪಂದ್ಯಹೊರತುಪಡಿಸಿ ಕಳೆದ ವಾರದಲ್ಲಿ ರನ್ನರ್‌ ಅಪ್‌ ಆದ ಲಾಜೋವಿಚ್‌ ಒಂದೂ ಸೆಟ್‌ನಲ್ಲೂ ಸೋಲು ಅನುಭವಿಸಿರಲಿಲ್ಲ. ಆದರೆ, ನಿನ್ನೆಯ ಫೈನಲ್‌ ಪಂದ್ಯದಲ್ಲಿ ಫೊಗ್ನಿನಿ ಅವರ ವಿರುದ್ಧ ತಂತ್ರ ರೂಪಿಸುವಲ್ಲಿ ಸರ್ಬಿಯಾ ಆಟಗಾರ ವಿಫಲರಾದರು.
ಚಾಂಪಿಯನ್‌ ಫೊಗ್ನಿನಿ ಆರಂಭದಲ್ಲಿ ಹಲವು ತಪ್ಪುಗಳನ್ನು ಮಾಡುವ ಮೂಲಕ ಮೂರನೇ ಗೇಮ್‌ ಅನ್ನು ಬ್ರೇಕ್‌ ಮಾಡಲು ಲಾಜೋವಿಚ್‌ಗೆ ಅವಕಾಶ ನೀಡಿದ್ದರು. ಆದರೆ, ಸರ್ಬಿಯಾ ಆಟಗಾರ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಅಂತಿಮವಾಗಿ ಇಟಲಿ ಆಟಗಾರ ಮೊದಲನೇ ಸೆಟ್‌ ನ್ನು ಮೂರು ಅಂಕಗಳ ಅಂತರದಲ್ಲಿ ಗೆಲುವು ಪಡೆದರು.

ಎರಡನೇ ಸೆಟ್‌ನ ಆರಂಭದಲ್ಲಿ ಎಚ್ಚೆತ್ತುಕೊಂಡ ಲಾಜೋವಿಚ್‌ ಬಲಿಷ್ಟ ಸರ್ವ್‌ಗಳ ಮಾಡಿದರು.  ಅವರ ಸರ್ವ್‌ಗಳನ್ನು ಎದುರಿಸುವಲ್ಲಿ ಫ್ಯಾಬಿಯೊ ವಿಫಲರಾದರು. ಇದೇ ಲಯ ಮುಂದುವರಿಸಿದ ಲಾಜೋವಿಚ್‌ 3-2 ಮುನ್ನಡೆ ಪಡೆದರು. ಬಳಿಕ, ತೀವ್ರ ಪೈಪೋಟಿ ನೀಡಿದ ಫೊಗ್ನಿನಿ 4-2 ಮುನ್ನಡೆ ಸಾಧಿಸಿದರು. ಅಂತಿಮವಾಗಿ ಇಟಲಿ ಟೆನಿಸ್‌ ಪಟು 6-4 ಅಂತರದಲ್ಲಿ ಎರಡನೇ ಸೆಟ್‌ ಗೆಲ್ಲುವ ಮೂಲಕ ವೃತ್ತಿ ಜೀವನದ ಮೊದಲ ಮಾಸ್ಟರ್ಸ್‌ 1000 ಪ್ರಶಸ್ತಿಗೆ ಚುಂಬಿಸಿದರು.

Related Articles