ಧೋನಿ ನಿರ್ಧಾರ ಪ್ರಶ್ನಾತೀತ ಮಾಡುವುದಿಲ್ಲ : ಫ್ಲೇಮಿಂಗ್‌

0
293

ಬೆಂಗಳೂರು:

 ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ತಂಡಕ್ಕೆ ಬೆನ್ನೆಲುಬು ಇದ್ದಂತೆ. ಅವರ ನಿರ್ಧಾರಗಳನ್ನು ನಾವು ಎಂದೂ ಪ್ರಶ್ನೆ ಮಾಡುವುದಿಲ್ಲ ಎಂದು ಸಿಎಸ್‌ಕೆ ಮುಖ್ಯ ತರಬೇತುದಾರ ಸ್ಟಿಫನ್‌ ಫ್ಲೇಮಿಂಗ್‌ ಹೇಳಿದರು.


ಭಾನುವಾರ ರಾತ್ರಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ, ರಾಯಲ್‌ ಚಾಲೆಂಜರ್ಸ್‌ ವಿರುದ್ಧ ಕೇವಲ ಒಂದು ರನ್‌ ನಿಂದ ಸೋಲು ಅನುಭವಿಸಿತ್ತು. ಆದರೆ, ಇದಕ್ಕೂ ಮುನ್ನ 19ನೇ ಓವರ್‌ನಲ್ಲಿ ಧೋನಿ ಎರಡು ಬಾರಿ ಸಿಂಗಲ್‌ ರನ್‌ ತೆಗೆದುಕೊಳ್ಳುವ ಅವಕಾಶವಿದ್ದರೂ ನಿರಾಕರಿಸಿದ್ದರು. ಈ ಬಗ್ಗೆ ಮಾತನಾಡಿದ ಅವರು, “ಧೋನಿ ಸಿಕ್ಸರ್‌ ಸಿಡಿಸುವ ಮಿಷನ್ ಇದ್ದಂತೆ. ತಂಡದ ನಿರ್ಣಾಯಕ ಘಟ್ಟದಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಅಗತ್ಯವಿದ್ದಾಗ ಅವರು ಲೆಕ್ಕಾಚಾರದ ಆಟಕ್ಕೆ ಮೊರೆ ಹೋಗುತ್ತಾರೆ. ಹಾಗಾಗಿ, ಅವರ ನಿರ್ಧಾರವನ್ನು ನಾವೆಂದೂ ಪ್ರಶ್ನೆ ಮಾಡುವ ಅಗತ್ಯವಿಲ್ಲ” ಎಂದರು. 

162 ರನ್‌ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಕೊನೆಯ ಓವರ್‌ನಲ್ಲಿ 26 ರನ್‌ ಅಗತ್ಯವಿತ್ತು. ಈ ವೇಳೆ ಧೋನಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್‌ ಸೇರಿದಂತೆ ಪಟ್ಟು 24 ರನ್‌ ಸಿಡಿಸಿದ್ದರು. ಕೊನೆಯ ಎಸೆತದಲ್ಲಿ ಎರಡು ರನ್‌ ಅಗತ್ಯವಿದ್ದಾಗ ಧೋನಿ, ಚೆಂಡನ್ನು ಬ್ಯಾಟ್‌ನಿಂದ ತಾಗಿಸುವಲ್ಲಿ ವಿಫಲರಾಗುತ್ತಾರೆ. ಈ ವೇಳೆ ರನ್‌ ಕದಿಯಲು ಹೋದಾಗ ಕೀಪರ್‌ ಪಾರ್ಥಿವ್‌ ಪಟೇಲ್‌, ಶಾರ್ದೂಲ್‌ ಠಾಕೂರ್‌ ಅವರನ್ನು ರನೌಟ್‌ ಮಾಡುತ್ತಾರೆ. ಅಂತಿಮವಾಗಿ ಒಂದು ರನ್‌ನಿಂದ ಆರ್‌ಸಿಬಿ ಟೂರ್ನಿಯ ಮೂರನೇ ಗೆಲುವು ಸಾಧಿಸುತ್ತದೆ.

“ ಇದೊಂದು ಅದ್ಭುತ ಕ್ರಿಕೆಟ್‌. ಕೊನೆಯ ಎಸೆತ ಉತ್ತಮವಾಗಿತ್ತು. ಪಂದ್ಯವನ್ನು ಗೆಲುವಿನ ಸಮೀಪ ತಂದ ಧೋನಿ ಅವರ ಆಟವನ್ನು ಮರೆಯಬಾರದು. ಪಾರ್ಥಿವ್‌ ಪಟೇಲ್‌ ಕೂಡ ಉತ್ತಮ ಬ್ಯಾಟಿಂಗ್‌ ಜೊತೆಗೆ ವಿಕೆಟ್‌ ಕೀಪಿಂಗ್‌ನಲ್ಲೂ ಉತ್ತಮ ಸೇವೆ ತಂಡಕ್ಕೆ ಸಲ್ಲಿಸಿದರು” ಎಂದು ಶ್ಲಾಘಿಸಿದರು.

“ ಚೆನ್ನೈ ತಂಡದಲ್ಲಿ ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೆ, ಅನಿರೀಕ್ಷಿತವಾಗಿ ಕೆಲವೊಮ್ಮೆ ವೈಫಲ್ಯ ಅನುಭವಿಸುತ್ತಾರೆ. ಪ್ರಸಕ್ತ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ಎಡವುತ್ತಿದ್ದಾರೆ. ದೊಡ್ಡ ಮೊತ್ತದ ಜತೆಯಾಟವಾಡುವಲ್ಲಿ ಯಶ ಕಾಣುತ್ತಿಲ್ಲ. ಆದರೆ, ಧೋನಿ ಹಾಗೂ ರಾಯುಡು ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ತಪ್ಪುಗಳು ಇದೇ ರೀತಿ ಮುಂದುವರಿದಲ್ಲಿ ಮುಂದಿನ ಪಂದ್ಯಗಳಲ್ಲಿ ಗೆಲುವು ಪಡೆಯುವುದು ಕಷ್ಟ” ಎಂದು ಫ್ಲೇಮಿಂಗ್‌ ಹೇಳಿದರು.