Sunday, September 8, 2024

ಫ್ರೆಂಡ್ಸ್ ಬೆಂಗಳೂರು ತಂಡಕ್ಕೆ ನಾಗ ಸ್ಮಾರಕ ಗೋಲ್ಡ್ ಟ್ರೋಫಿ

ಆರ್.ಕೆ. ಆಚಾರ್ಯ, ಕೋಟ 

ಬೆಂಗಳೂರಿನ ಕೆ.ಆರ್. ಪುರಂ ನ ರಾಜೀವ್ ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನಡಿ ಅದ್ಧೂರಿಯಾಗಿ ನಡೆದ ನಾಗ ಇಲೆವೆನ್ ಆತಿಥ್ಯದ ನಾಗ ಸ್ಮಾರಕ ಕ್ರಿಕೆಟ್ ಟೂರ್ನಿಯನ್ನು ಫ್ರೆಂಡ್ಸ್ ಬೆಂಗಳೂರು ತಂಡ ಗೆದ್ದುಕೊಂಡಿತು.

 

ಈ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ 32 ತಂಡಗಳು ಪಾಲ್ಗೊಂಡಿದ್ದವು. ಪ್ರತಿಯೊಂದು ಪಂದ್ಯವೂ ಅತ್ಯಂತ ರೋಚಕ ಕ್ಷಣಗಳಿಗೆ ಸಾಕ್ಷಿಯಾದವು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೈ ಕರ್ನಾಟಕ ತಂಡ ಸಾಯಿ ಫೈಟರ್ಸ್ ತಂಡವನ್ನು, ಡಿ. ಆರ್. ಇಲೆವೆನ್ ಎಸ್.ಝೆಡ್.ಕ್ರಿಕೆಟ್ ಕ್ಲಬ್ ತಂಡವನ್ನು, ನ್ಯಾಶ್ ಕ್ರಿಕೆಟರ್ಸ್ ತಂಡ ಏಕದಂತ ತಂಡವನ್ನು, ಫ್ರೆಂಡ್ಸ್ ಬೆಂಗಳೂರು ತಂಡ ರಾಕರ್ಸ್ ಯಲಹಂಕ ತಂಡವನ್ನು ಸೋಲಿಸಿ ಸೆಮಿಫೈನಲ್ ತಲುಪಿದವು.
ರೋಚಕವಾಗಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ನ್ಯಾಶ್ ಬೆಂಗಳೂರು ತಂಡವನ್ನು ಉಡುಪಿಯ ರಿಯಲ್ ಫೈಟರ್ಸ್ ಆಟಗಾರರನ್ನೊಳಗೊಂಡ ಕೆ.ಅರ.ಪುರಂನ ಡಿ. ಅರ್. ಇಲೆವೆನ್ ತಂಡ ಮಣಿಸಿತು. ಫ್ರೆಂಡ್ಸ್ ಬೆಂಗಳೂರು ತಂಡ ಜೈ ಕರ್ನಾಟಕ ತಂಡವನ್ನು ಕೇವಲ ಎರಡು ರನ್ನುಗಳ ಅಂತದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿತು

ಮಿಂಚಿದ ಸಾಗರ್ 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಫ್ರೆಂಡ್ಸ್ ಬೆಂಗಳೂರು ತಂಡದ ಪರ ಸಾಗರ್ ಭಂಡಾರಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 39 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ 4 ಸಿಕ್ಸರ್ ಸೇರಿತ್ತು. ಸಿಸಿಎಲ್ ಖ್ಯಾತಿಯ ರಾಜೀವ್ ಹನುರವರ ಅಮೂಲ್ಯ 22 ರನ್ ನೆರವಿನಿಂದ ಫ್ರೆಂಡ್ಸ್ ತಂಡ 8 ಓವರ್ ಗಳಲ್ಲಿ  3 ವಿಕೆಟ್ ನಷ್ಟಕ್ಕೆ ಸವಾಲಿನ 69 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆಂಬತ್ತಿದ ಡಿ.ಅರ್. ಇಲೆವೆನ್ 3 ವಿಕೆಟ್ ಕಳೆದುಕೊಂಡು ಕೇವಲ 61 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಸರಣಿ ಶ್ರೇಷ್ಠ

ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿದ ಸಾಗರ್ ಭಂಡಾರಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು, ಬಹುಮಾನವಾಗಿ ದ್ವಿಚಕ್ರ ವಾಹನ (ಡಿಯೋ)ವನ್ನು ಬಹುಮಾನವಾಗಿ ಪಡೆದರು. ಕುಂದಾಪುರ ಮೂಲದ ಆಟಗಾರ ಫ್ರೆಂಡ್ಸ್ ನ ಪ್ರಸಾದ್ ನೇರಳಕಟ್ಟೆ ಬೆಸ್ಟ್ ಬೌಲರ್ ಪ್ರಶಸ್ತಿ ಗೆದ್ದುಕೊಂಡರು. ಡಿ.ಅರ್. ಇಲೆವೆನ್ ಪರ ಆಡಿದ್ದ ಉಡುಪಿಯ ಉದಯೋನ್ಮುಖ ಆಟಗಾರ ಡೆರಿನ್ ಪ್ರಶಾಂತ್ ಬೆಸ್ಟ್ ಬ್ಯಾಟ್ಸ್ ಮನ್ ಗೌರವಕ್ಕೆ ಪಾತ್ರರಾದರು. ಉಡುಪಿಯ ಸ್ಯಾಂಡಿ ಬೆಸ್ಟ್ ವಿಕೆಟ್ ಕೀಪರ್ ಗೌರವಕ್ಕೆ ಭಾಜನರಾದರು.
ನಾಗ್ ಇಲೆವೆನ್ ತಂಡ ಸತತ ಮೂರನೇ ವರ್ಷ ನಾಗ್ ಸ್ಮಾರಕ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿದೆ. ವಿಜೇತ ತಂಡ 1 ಲಕ್ಷ ರೂ. ನಗದು ಬಹುಮಾನದ ಜೊತೆಯಲ್ಲಿ 10 ಗ್ರಾಂ ಚಿನ್ನವನ್ನು ಹೊಂದಿರುವ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ರನ್ನರ್ ಅಪ್ ತಂಡ  50,000 ರೂ. ನಗದು ಬಹುಮಾನದ ಜೊತೆಗೆ 750 ಗ್ರಾಂ ತೂಕದ ಬೆಳ್ಳಿಯ ಟ್ರೋಫಿ ಗಳಿಸಿತು.

Related Articles