ಬೇಸರ ಮರ್ರೆ ….ನಿವೃತ್ತಿಯಾಗ್ತಾರಂತೆ ಆ್ಯಂಡಿ ಮರ್ರೆ
ಮೆಲ್ಬೋರ್ನ್
ಬ್ರಿಟನ್ ನ ಖ್ಯಾತ ಟೆನಿಸ್ ತಾರೆ ಆ್ಯಂಡಿ ಮರ್ರೆ ಈ ಬಾರಿಯ ವಿಂಬಲ್ಡನ್ ಟೆನಿಸ್ ಚಾಂಪಿಯನ್ ಷಿಪ್ ಮುಗಿದ ಬಳಿಕ ಅಂತಾರಾಷ್ಟ್ರೀಯ ಟೆನಿಸ್ ಗೆ ವಿದಾಯ ಹೇಳುವುದಾಗಿ ಅತ್ಯಂತ ನೋವಿನಿಂದ ಪ್ರಕಟಿಸಿದ್ದಾರೆ.
ಮುರ್ರೆ ಪಾಲಿಗೆ ಇದು ಕೊನೆಯ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ. ನಿರಂತರ ಕಾಡುವ ಸೊಂಟ ನೋವು ಮರ್ರೆ ಈ ತೀರ್ಮಾನಕ್ಕೆ ಬರಲು ಮುಖ್ಯ ಕಾರಣ. ವಿಶ್ವದ ಮಾಜಿ ನಂ.1 ಆಟಗಾರ ಮರ್ರೆ ನಿತ್ಯವೂ ಈ ನೋವಿನಿಂದ ಬಳಲುತ್ತಿರುವುದಾಗಿ ಹೇಳಿಕೊಂಡರು. ಆಸ್ಟ್ರೇಲಿಯಾ ಓಪನ್ ಮುಗಿದ ಕೂಡಲೇ ನಿವೃತ್ತಿ ಹೇಳಬೇಕೆಂದುಕೊಂಡಿದ್ದ ಮರ್ರೆ, ವಿಂಬಲ್ಡನ್ ನಲ್ಲಿ ಮನೆಯಂಗಣದ ಪ್ರೇಕ್ಷಕರ ಮುಂದೆ ವಿರಮಿಸುವುದಾಗಿ ತಿಳಿಸಿದರು.

ನಿನ್ನೆ ನೊವಾಕ್ ಜೊಕೊವಿಕ್ ಅವರೊಂದಿಗೆ ಅಭ್ಯಾಸ ಪಂದ್ಯ ಆಡಿದ ನಂತರ ಸಂದರ್ಶನದ ಕೊಠಡಿಯಲ್ಲಿ ಫಿಟ್ನೆಸ್ ಬಗ್ಗೆ ಪ್ರಶ್ನೆ ಕೇಳಿದಾಗ , ಅಷ್ಟೇನೂ ಉತ್ತಮವಾಗಿಲ್ಲ ಎಂದು, ಕ್ಷಮೆ ಕೇಳುತ್ತ ಸಂದರ್ಶನದ ಕೊಠಡಿಯಿಂದ ಹೊರನಡೆದರು. ಹಿಂತಿರುಗಿ ಬಂದು ಮಾತನಾಡಿದ ಎರಡು ಬಾರಿ ವಿಂಬಲ್ಡನ್ ಹಾಗೂ ಒಂದು ಬಾರಿ ಯುಎಸ್ ಓಪನ್ ವಿಜೇತ ಮರ್ರೆ, “”ನನ್ನ ಫಿಟ್ನೆಸ್ ಬಗ್ಗೆ ನನಗೆ ನಂಬಿಕೆ ಇಲ್ಲ. ಬಹಳ ಸಮಯದಿಂದ ಫಿಟ್ನೆಸ್ ಕಾಯ್ದುಕೊಳ್ಳಲು ಯತ್ನಿಸುತ್ತಿರುವೆ. ಇಪ್ಪತ್ತು ತಿಂಗಳಿಂದ ನಿರಂತರ ನೋವು. ನೋವು ನಿವಾರಿಸಿಕೊಳ್ಳಲು ಬಹಳ ಪ್ರಯತ್ನಿಸಿದೆ, ಎಂದರು.
ನಿವೃತ್ತಿಯ ಬದುಕು ನೆಮ್ಮದಿಯಲ್ಲಿ ಸಾಗಲು ಈ ವರ್ಷ ಮತ್ತೆ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದಾಗಿ ತಿಳಿಸಿದರು. ಮರ್ರೆ 2009,2010,2013, 2015 ಹಾಗೂ 2016ರಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲ್ ತಲುಪಿದ್ದರು. 2013 ಹಾಗೂ 2016 ವಿಂಬಲ್ಡನ್ ಕಿರೀಟ ಧರಿಸಿದ್ದರು. ಅಲ್ಲದೆ 2016 ರಲ್ಲಿ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ್ದರು.