Sportsmail
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಶತಕ ಸಿಡಿಸುವುದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಗೌರವಯುತ 345 ರನ್ ಗಳಿಸಿದೆ. ಎರಡನೇ ದಿನದಾಟ ಮುಗಿದಾಗ ನ್ಯೂಜಿಲೆಂಡ್ ವಿಕೆಟ್ ನಷ್ಟವಿಲ್ಲದೆ 129ರನ್ ಗಳಿಸಿ ಸುಸ್ಥಿತಿಯಲ್ಲಿದೆ.
ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 17ನೇ ಆಟಗಾರ ಎಂಬ ಹೆಗ್ಗಳಿಕೆಗೆ ಶ್ರೇಯಸ್ ಅಯ್ಯರ್ ಪಾತ್ರರಾದರು. 171 ಎಸೆತಗಳನ್ನೆದುರಿಸಿದ ಅಯ್ಯರ್, 13 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ ಚೊಚ್ಚಲ ಶತಕ ದಾಖಲಿಸಿದರು.
ಮೊದಲ ದಿನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಪರ ಆರಂಭಿಕ ಆಟಗಾರ ಶುಭ್ಮನ್ ಗಿಲ್ (52) ಮತ್ತು ರವೀಂದ್ರ ಜಡೇಜಾ (50) ಗಳಿಸಿದ ಅರ್ಧ ಶತಕ ಭಾರತದ ಗೌರವದ ಮೊತ್ತಕ್ಕೆ ನೆರವಾಯಿತು. ಉಳಿದಂತೆ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್, ನಾಯಕ ಅಜಿಂಕ್ಯ ರಹಾನೆ ಕಿವೀಸ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.
ಕಿವೀಸ್ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರರಾದ ವಿಲ್ ಯಂಗ್ (75*) ಮತ್ತು ಟಾಮ್ ಲಥಾಮ್ (50*) 129 ರನ್ ಜತೆಯಾಟವಾಡಿ ತಂಡವನ್ನು ಸುಸ್ಥಿತಿಗೆ ಕೊಂಡೊಯ್ದಿದ್ದಾರೆ. ಸ್ಪಿನ್ ಮತ್ತು ವೇಗದ ಬೌಲಿಂಗ್‌ನಲ್ಲಿ ಭಾರತ ಯಶಸ್ಸು ಕಾಣಲಿಲ್ಲ. 75 ಓವರ್‌ಗಳಲ್ಲಿ 16 ಮೇಡನ್ ಓವರ್ ದಾಖಲಾಗಿರುವುದು ಕಿವೀಸ್ ಆಟಗಾರರ ತಾಳ್ಮೆ ಮತ್ತು ಎಚ್ಚರಿಕೆಯ ಬ್ಯಾಟಿಂಗ್‌ಗೆ ನಿದರ್ಶನವಾಗಿದೆ.
ಜಿಆರ್‌ವಿ ಚೊಚ್ಚಲ ಶತಕ:
ಶ್ರೇಯಸ್ ಅಯ್ಯರ್ ಅವರ ಚೊಚ್ಚಲ ಶತಕ ಕನ್ನಡಿಗ ಜಿ.ಆರ್. ವಿಶ್ವನಾಥ್ ಅವರ ಚೊಚ್ಚಲ ಶತಕವನ್ನು ನೆನಪಿಸುವಂತೆ ಮಾಡಿದೆ. ಇಬ್ಬರೂ ಮೊದಲ ಶತಕ ಸಿಡಿಸಿದ್ದು ಕಾನ್ಪುರದಲ್ಲಿ, ಇಬ್ಬರೂ ನವೆಂಬರ್ ತಿಂಗಳಲ್ಲಿ. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಜಿಆರ್‌ವಿ, ಎರಡನೇ ಇನ್ನಿಂಗ್ಸ್‌ನಲ್ಲಿ 137 ರನ್ ಗಳಿಸಿದರು. ಅದರಲ್ಲಿ 25 ಬೌಂಡರಿ ಸೇರಿತ್ತು.