ಕೊಲ್ಕತಾ:
ಕುಲ್ದೀಪ್ ಯಾದವ್(3) ಸ್ಪಿನ್ ಮೋಡಿ ಹಾಗೂ ದಿನೇಶ್ ಕಾರ್ತಿಕ್(31*) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ಮೊದಲ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್‌ಗಳ ಪ್ರ ಯಾಸದ ಗೆಲುವು ಸಾಧಿಸಿತು.
ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಿಗೆ ಎಂಟು ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ವಿಂಡೀಸ್ ಪರ ಎಲ್ಲ ಬ್ಯಾಟ್ಸ್ ಮನ್‌ಗಳು ವಿಫಲರಾದರು. ಪಂದ್ಯದ ಕೊನೆಯ ಐದು ಓವರ್‌ಗಳಲ್ಲಿ ಮಾತ್ರ ವಿಂಡೀಸ್‌ಗೆ 46 ರನ್ ಸೇರ್ಪಡೆಯಾಯಿತು. ವಿಂಡಿಸ್ ಪರ ಅಲ್ಲೆನ್ ಮಾತ್ರ ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ಸಫಲರಾದರು. ಕೊನೆಯ ಹಂತದಲ್ಲಿ 20 ಎಸೆತಗಳಿಗೆ 27 ರನ್ ಗಳಿಸಿದರು. ಇದರೊಂದಿಗೆ ವಿಂಡೀಸ್‌ಗೆ 100ರ ಗಡಿ ದಾಟಲು ಸಾಧ್ಯವಾಯಿತು. ಭಾರತ ಪರ ಉತ್ತಮ ಬೌಲಿಂಗ್ ಮಾಡಿದ ಕುಲ್ದೀಪ್ ಯಾದವ್ ನಾಲ್ಕು ಓವರ್‌ಗಳಿಗೆ 13 ರನ್ ನೀಡಿ ಒಟ್ಟು ಮೂರು ವಿಕೆಟ್ ಕಬಳಿಸಿದರು. ಇನ್ನುಳಿದ ಎಲ್ಲ ಬೌಲರ್‌ಗಳು ತಲಾ ಒಂದೊಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಭಾರತ, ಮೊದಲ ಇನಿಂಗ್ಸ್ ನಲ್ಲಿ ಪ್ರವಾಸಿ ತಂಡದಂತೆ ತನ್ನೆಲ್ಲ ಪ್ರಮುಖ ಬ್ಯಾಟ್ಸ್ ಮನ್‌ಗಳು ಬಹುಬೇಗ ಕಳೆದುಕೊಂಡಿತು. ರೋಹಿತ್ ಶರ್ಮಾ(6), ಶಿಖರ್ ಧವನ್(3), ರಿಷಭ್ ಪಂತ್(1) ವಿಕೆಟ್ ಬಹುಬೇಗ ಉರುಳಿತು. ನಂತರ, ಕೆ.ಎಲ್. ರಾಹುಲ್(16) ಕೆಲಕಾಲ ತಾಳ್ಮೆಯ ಬ್ಯಾಟಿಂಗ್ ಮಾಡಿ ಬ್ರಾಥ್ ವೈಟ್‌ಗೆ ವಿಕೆಟ್ ಒಪ್ಪಿಸಿದರು. ನಂತರ, ಮನೀಶ್ ಪಾಂಡೆ 19 ರನ್‌ಗಳಿಸಿ ಔಟ್ ಆದರು. ನಂತರ ಜತೆಯಾದ ದಿನೇಶ್ ಕಾರ್ತಿಕ್(31*) ಹಾಗೂ ಕೃನಾಲ್ ಪಾಂಡ್ಯ(21*) ಜೋಡಿ ಉತ್ತಮ ಬ್ಯಾಾಟಿಂಗ್ ಮಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿತು. ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ ಎದೆಗುಂದದೆ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ 34 ಎಸೆತಗಳಿಗೆ ಒಂದು ಸಿಕ್ಸರ್ ಹಾಗೂ ಮೂರು ಬೌಂಡರಿಯೊಂದಿಗೆ ಒಟ್ಟು 31 ರನ್ ಗಳಿಸಿ ಗೆಲುವಿಗೆ ನೆರವಾದರು. ಇದರೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.