ಏಜೆನ್ಸೀಸ್ ಹೊಸದಿಲ್ಲಿ
ಇದು ಈ ದೇಶದ ಕ್ರೀಡಾಪಟುವೊಬ್ಬರ ಸಂಕಷ್ಟ ಎನ್ನಲೇ, ಪ್ರಾರಾಬ್ಧ ಎನ್ನಲೇ, ಬದುಕು ಎನ್ನಲೇ.. ಬವಣೆ ಎನ್ನಲೇ… ?
ಏಕೆಂದರೆ ಇತ್ತೀಚಿಗೆ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ ಸೆಪಾಕ್ ಟಕ್ರಾ (ಕಿಕ್ ವಾಲಿಬಾಲ್)ನಲ್ಲಿ ಕಂಚಿನ ಪದಕ ಗೆದ್ದಿದ್ದ ಹರೀಶ್ ಕುಮಾರ್ ತನ್ನ ಕುಟುಂಬಕ್ಕೆ ನೆರವಾಗಲು ಈಗ ಟೀ ಮಾರುವ ಕೆಲಸದಲ್ಲೇ ಮುಂದುವರಿದಿದ್ದಾರೆ.
ಉತ್ತರ ದಿಲ್ಲಿಯ ಮಜೂನ್ ಕಾ ತಿಲ್ಲಾ ಪ್ರದೇಶದಲ್ಲಿ ತನ್ನ ಕುಟುಂಬದ ನೆರವಿಗಾಗಿ ಹರೀಶ್ ಕುಮಾರ್ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸುದ್ದಿಯನ್ನು ಅಲ್ಲಿಯ ಮಾಧ್ಯಮಗಳು ವರದಿ ಮಾಡಿವೆ. ಬೇಸರದ ಸಂಗತಿಯೆಂದರೆ ಹರೀಶ್ ಕುಮಾರ್ ಅವರನ್ನು ಸ್ವಾಗತಿಸಲು ಯಾವುದೇ ಕ್ರೀಡಾ ಅಧಿಕಾರಿ ಆಗಮಿಸದಿರುವುದು. ಸಾಮಾನ್ಯವಾಗಿ ಕ್ರೀಡಾಪಟುವೊಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಹಿಂತಿರುಗುವಾಗ ಸಂಬಂ‘ಪಟ್ಟ ಜಿಲ್ಲೆಯ ಕ್ರೀಡಾ ಅಧಿಕಾರಿಗಳು ಅವರನ್ನು ಬರಮಾಡಿಕೊಂಡು ಗೌರವಿಸುತ್ತಾರೆ. ಕ್ರೀಡಾಕೂಟಕ್ಕೆ ಹೊರಡುವ ಮುನ್ನ ಹರೀಶ್ ಕುಮಾರ್ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು, ಬಂದ ನಂತರವೂ ಅದೇ ಅಂಗಡಿಯಲ್ಲಿ ಕೆಲಸ ಮುಂದುವರಿಸಿದ್ದಾರೆ.
ಪ್ರತಿಭಾವಂತ
ಸೈಕಲ್ ಟಯರ್ ಅನ್ನು ಕಾಲಿನಿಂದ ತುಳಿದು ಅದು ನೇರವಾಗಿ ಬಹಳ ದೂರ ಸಾಗುವಂತೆ ಮಾಡುತ್ತಿರುವ ಹರೀಶ್ ಕುಮಾರ್ ಅವರನ್ನು ಗುರುತಿಸಿದ್ದು ಕೋಚ್ ಹೇಮರಾಜ್. ಅವರನ್ನು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಕೊಂಡೊಯ್ದು ತರಬೇತಿ ನೀಡಿದವರು ಹೇಮರಾಜ್. ಬೆಳಿಗ್ಗೆ ಟೀ ಸ್ಟಾಲ್‌ನಲ್ಲಿ ಕೆಲಸ ಮಾಡಿ ಮಧ್ಯಾಹ್ನ ೨ ರಿಂದ ೬ ಗಂಟೆಯವರೆಗೆ ಹರೀಶ್ ತರಬೇತಿ ಪಡೆಯುತ್ತಿದ್ದರು. ಹರೀಶ್ ಅವರ ಈ ಶ್ರಮ ನೋಡಿ ನಕ್ಕವರಿದ್ದಾರೆಯೇ ಹೊರತು ಪ್ರೋತ್ಸಾಹ ನೀಡಿದವರು ಕಡಿಮೆ.
‘ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ, ಕೋಚ್ ನನಗೆ ಮೋಸ ಮಾಡುತ್ತಿದ್ದಾರೆ. ನನ್ನಿಂದ ಹಣ ಕೀಳಲು ಈ ರೀತಿ ಮಾಡುತ್ತಿದ್ದಾರೆ,‘ ಎಂದು ಸ್ಥಳೀಯರು ಹೇಳಿ ನಕ್ಕಿರುವುದನ್ನು ಹರೀಶ್ ನೆನಪಿಸಿಕೊಂಡರು. ಹರೀಶ್ ಅವರ ತಂದೆ ದಿಲ್ಲಿಯಲ್ಲಿ ರಿಕ್ಷಾ ಚಲಾಯಿಸುತ್ತಿದ್ದಾರೆ.
ಬಸ್ ಕಂಡಕ್ಟರ್‌ಗೆ ಮೋಸ!
ಹರೀಶ್‌ಗೆ ಅವರ ತಾಯಿ ಇಂದಿರಾ ದೇವಿ ಎಲ್ಲ ರೀತಿಯ ನೆರವು ನೀಡುತ್ತಿದ್ದರು. ಟೀ ಅಂಗಡಿಯಲ್ಲಿ ದುಡಿದು ಬಂದ ವೇತನವನ್ನು ಮನೆಗೆ ನೀಡಿದಾಗ ಅದರಲ್ಲೇ ಮಗನ ಪ್ರಯಾಣದ ವೆಚ್ಚಕ್ಕಾಗಿ ಹಣ ನೀಡುತ್ತಿದ್ದರು. ಆದರೆ ಹರೀಶ್ ಟಿಕೆಟ್ ಮಾಡದೆ ಬಸ್ಸಿನಲ್ಲೇ ಅಲ್ಲಿಲ್ಲಿ ಅಡಗಿಕೊಂಡು, ಕಂಡಕ್ಟರ್‌ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದರಂತೆ. ‘ಟಿಕೆಟ್‌ನ ಹಣವನ್ನು ಉಳಿಸುವುದಾಗಿ ಕಂಡಕ್ಟರ್‌ಗೆ ಮೋಸ ಮಾಡುತ್ತಿದ್ದೆ, ಕೆಲವೊಮ್ಮೆ ಚಲಿಸುತ್ತಿರುವ ಬಸ್ಸಿನಿಂದ ಜಿಗಿದು ಪರಾರಿಯಾಗಿ, ತರಬೇತಿಗೆ ಹೋಗುತ್ತಿದ್ದೆ,‘ ಎಂದು ಹರೀಶ್ ಹೇಳಿದರು.