ಕರ್ನಾಟಕ ವಿ ವಿಯಲ್ಲಿ ಚಿನ್ನದ ಓಟಗಾರ

0
353
ಸ್ಪೋರ್ಟ್ಸ್ ಮೇಲ್ ವರದಿ 

ಓದಿನ ನಡುವೆ ಓಟವನ್ನೂ ಉಸಿರಾಗಿಸಿಕೊಂಡಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಸುನಿಲ್ ಎನ್ ಡಿ ಕರ್ನಾಟಕ ವಿಶ್ವವಿದ್ಯಾಲಯ ನಡೆಸುವ ಕ್ರಾಸ್ ಕಂಟ್ರಿ ರೇಸ್ ನಲ್ಲಿ ಕಳೆದ ಮೂರು ವರುಷಗಳಿಂದ  ಪದಕ ಗೆದ್ದು ಅಪೂರ್ವ ಸಾಧನೆ ಮಾಡಿದ್ದಾರೆ.

ಕೃಷಿ ಕುಟುಂಬದಿಂದ ಬಂದ  ಸುನಿಲ್ ದೂರದ ಓಟದಲ್ಲಿ ನಿಸ್ಸೀಮರು. ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರೂ ಗಾಯದ ಸಮಸ್ಯೆಯಿಂದ ಪಾಲ್ಗೊಂಡಿರಲಿಲ್ಲ.
ಕರ್ನಾಟಕ ವಿಶ್ವವಿದ್ಯಾನಿಲಯ ಕಳೆದ ಮೂರು ವರ್ಷಗಳಲ್ಲಿ ನಡೆಸಿದ ಕ್ರಾಸ್ ಕಂಟ್ರಿ 10k ಓಟದಲ್ಲಿ ಸುನಿಲ್ ಎರಡು ಬಾರಿ ಚಿನ್ನ ಹಾಗೂ ಒಂದು ಬಾರಿ ಬೆಳ್ಳಿಯ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕೆ ಎಲ್ ಇ  ಎಸ್ ಕೆ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಸುನಿಲ್ ಅವರು ಚೈತನ್ಯ ಫಿಟ್ನೆಸ್ ಕ್ಲಬ್ ನಲ್ಲಿ ತರಬೇತಿ ಪಡಿಯುತ್ತಿರುತ್ತಾರೆ. ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್ ವಿಲಾಸ್ ನೀಲಗುಂದ್ ಅವರು ಸುನಿಲ್ ಯಶಸ್ಸಿಗಾಗಿ ಶ್ರಮಿಸಿರುತ್ತಾರೆ. ಖ್ಯಾತ ಅಥ್ಲೀಟ್ ಕೋಚ್ ಹರೀಶ್ ಗೌಡ ಕೂಡ ಸುನಿಲ್ ಅವರನ್ನು ಉತ್ತಮ ಅಥ್ಲೀಟ್ ಆಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. 33 ನಿಮಿಷ  50 ಸೆಕೆಂಡುಗಳಲ್ಲಿ 10k ಓಟವನ್ನು ಪೂರ್ಣಗೊಳಿಸುವ ಈ ಗ್ರಾಮೀಣ ಪ್ರತಿಭೆ ಸುನಿಲ್ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಆತ್ಮವಿಶ್ವಾಸ ಹೊಂದಿರುವ ಓಟಗಾರ.
“ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಹಂಬಲ ಇದೆ. ಅದಕ್ಕಾಗಿ ನಿರಂತರ ಅಭ್ಯಾಸ ನಡೆಸುವೆ. ಕ್ರೀಡೆಯ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಹಂಬಲ. ಉತ್ತಮ ತರಬೇತಿ ಸಿಗುತ್ತಿದೆ, ಕ್ರೀಡೆಗೆ ನಮ್ಮ ಕಾಲೇಜ್ ನಲ್ಲಿ ಉತ್ತಮ ಬೆಂಬಲ ನೀಡುತ್ತಿದ್ದಾರೆ,” ಎಂದು ಸುನಿಲ್ ಸ್ಪೋರ್ಟ್ಸ್ ಮೇಲ್ ಗೆ ತಿಳಿಸಿದರು.