ಸಾವಿಗೆ ಜೀವ ತುಂಬುವ ಚಾಂಪಿಯನ್

0
288

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಸಾವಿನ ನಂತರ ಮನುಷ್ಯನ ಜೀವಕ್ಕೆ ಬೆಲೆ ಇರುವುದಿಲ್ಲ. ಆದರೆ ಬೆಲೆ ಇಲ್ಲವೆಂದು ಮೃತ ದೇಹವನ್ನು ಮನಬಂದಂತೆ ಅಂತ್ಯ ಸಂಸ್ಕಾರ ಮಾಡುವಂತಿಲ್ಲ. ಪ್ರತಿಯೊಂದು ಧರ್ಮದಲ್ಲೂ ಹುಟ್ಟಿಗೆ ಯಾವ ರೀತಿಯ ಶಿಷ್ಟಾಚಾರಗಳಿರುತ್ತವೆಯೋ ಸತ್ತ ಮೇಲೂ ಸಂಸ್ಕಾರಕ್ಕೆ ಕ್ರಮ ಇರುತ್ತದೆ, ಆದರೆ ಈ ಮಹಾಮಾರಿ ಕೋವಿಡ್-19 ಸಂದರ್ಭದಲ್ಲಿ ಶವಗಳು ಅನಾಥವಾಗುತ್ತಿವೆ, ಗೋಣಿಚೀಲದಲ್ಲಿ ತುಂಬಿ ಶವಗಳನ್ನು ಹೊಂಡಕ್ಕೆ ಎಸೆಯುತ್ತಿರುವ ದೃಶ್ಯಗಳನ್ನು ನಾವು ಕಣ್ಣಾರೆ ಕಂಡು ಮರುಗಿದ್ದೇವೆ, ಇದಕ್ಕೆ ಸೋಂಕಿನ ಭಯವೇ ಕಾರಣವಾಗಿದೆ.

ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ವಾರಸುಧಾರರಿಗೆ ನೀಡುತ್ತಿಲ್ಲ. ಅವು ಒಂದು ರೀತಿಯಲ್ಲಿ ಅನಾಥ ಶವದಂತೆ. ಬೆಂಗಳೂರಿನ ಬನಶಂಕರಿಯಲ್ಲಿರುವ ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಮೊಹಮ್ಮದ್ ಅಜಾಮತ್ ಹಾಗೂ ಅವರ ಗೆಳೆಯರು ಸೇರಿಕೊಂಡು ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಮುಕ್ತಿ ನೀಡುತ್ತಿದ್ದಾರೆ.

ಬೆಂಗಳೂರಿನ ಡಿಎಕ್ಸ್ ಸಿ ಕಂಪೆನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಮೊಹಮ್ಮದ್ ಕಳೆದ ಹತ್ತು ವರ್ಷಗಳಿಂದ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ನಲ್ಲಿ ದೇಶಕ್ಕಾಗಿ ಪದಕಗಳನ್ನು ಗೆಲ್ಲುತ್ತಿದ್ದಾರೆ. 43 ವರ್ಷದ ಮೊಹಮ್ಮದ್ ಈಗ ಮಾಸ್ಟರ್ಸ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿರುವ ಮೊಹಮ್ಮದ್ ಅವರು ಇತರ ಐದು ಮಂದಿ ಪವರ್ ಲಿಫ್ಟರ್ ಗಳ ಜತೆ ಸೇರಿಕೊಂಡು ಮರ್ಸಿ ಮಿಷನ್ ಎಂಬ ಎನ್ಜಿಒ ಸಂಸ್ಥೆಯೋಂದಿಗೆ ಕೈ ಜೋಡಿಸಿ ಈ ಮಹತ್ ಕಾರ್ಯ ಮಾಡುತ್ತಿದ್ದಾರೆ. ಮನ್ವಿರ್ ಸಿಂಗ್, ಸಾದ್ ಖಯಾಮ್, ಅಮ್ಮರ್ ಖಾನ್, ಇಶಾಖ್ ಅಹಮ್ಮದ್ ಹಾಗೂ ಜಮೀರ್ ಬೇಗ್ ಅವರು ಮೊಹಮ್ಮದ್ ಅವರೊಂದಿಗೆ ಕೈ ಜೋಡಿಸಿದ್ದಾರೆ.

“ಬಹಳ ಜನ ಕೇಳಿದರು..ಈ ಕೆಲಸವನ್ನು ನೀವೇಕೆ ಮಾಡುತ್ತಿದ್ದೀರಿ?” ಎಂದು ಮತ್ತೆ ಯಾರು ಮಾಡಬೇಕು ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರ ಇರಲಿಲ್ಲ’’ ಎಂದು ಮೊಹಮ್ಮದ್ ಸ್ಪೋರ್ಟ್ಸ್ ಮೇಲ್ ಗೆ ತಿಳಿಸಿದ್ದಾರೆ. “ಶನಿವಾರ ಹಾಗೂ ಭಾನುವಾರ ದಿವನಿಡೀ ಕೆಲಸ ಮಾಡುತ್ತೇವೆ. ಟೋಲ್ ಫ್ರೀ ನಂಬರಿಗೆ ಕರೆ ಬರುತ್ತದೆ. ಆ ಕರೆಯನ್ನು ಆಧರಿಸಿ ನಾವು ವ್ಯಕ್ತಿ ಸಾವಿಗೀಡಾದ ಸ್ಥಳಕ್ಕೆ ಹೋಗುತ್ತೇವೆ, ಬಿಬಿಎಂಪಿಯಿಂದ ಸಂಬಂಧಪಟ್ಟ ದಾಖಲೆಗಳು ಸಿಕ್ಕ ನಂತರ ಮೃತ ವ್ಯಕ್ತಿಯ ಧರ್ಮಕ್ಕೆ ಅನುಸಾರವಾಗಿ ಅಂತ್ಯ ಸಂಸ್ಕಾರ ಮಾಡುತ್ತೇವೆ. ಮನೆಯಲ್ಲಿ ಒಂದು ಮಹಡಿ ಇದ್ದ ಕಾರಣ, ಅಲ್ಲಿ ಪತ್ನಿ ಹಾಗೂ ಮಕ್ಕಳು ತಂಗುತ್ತಾರೆ. ಕೆಳಗಿನ ಮನೆಯಲ್ಲಿ ನಾನು ವಾಸಿಸುತ್ತೇನೆ, ಇಬ್ಬರು ಮಕ್ಕಳು ಮತ್ತು ಪತ್ನಿಯಿಂದ ದೂರ ಇರುತ್ತೇನೆ. ಇದೊಂದು ಪುಣ್ಯದ ಕೆಲಸ ಎಂದು ಭಾವಿಸಿದ್ದೇನೆ. ಬದುಕು ಬೀದಿಪಾಲಾಗುವುದಿದೆ, ಆದರೆ ಶವ ಹಾಗಾಗಬಾರದು,’’ ಎನ್ನುತ್ತಾರೆ ಮೊಹಮ್ಮದ್.

ಲಾಕ್ ಡೌನ್ ಆದಾಗಿನಿಂದ ಮೊಹಮ್ಮದ್ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಎನ್ಜಿಒ ಗಳ ಜತೆ ಸೇರಿಕೊಂಡು 10,000ಕ್ಕೂ ಹೆಚ್ಚು ಕಿಟ್ ಹಂಚಿದ್ದಾರೆ. ಇದುವರೆಗೂ 25ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿರುವ ಮೊಹಮ್ಮದ್ ಗೆ ಎರಡು ದಿನಗಳ ಹಿಂದೆ 27 ವರ್ಷದ ಯುವಕನ ಶವದ ಆಂತ್ಯ ಸಂಸ್ಕಾರ ಮಾಡುವಾಗ ದುಃಖ ತಡೆಯಲಾಗಲಿಲ್ಲ ಎಂದರು. “”ಕ್ರೀಡೆಯಲ್ಲಿ ತೊಡಗಿಸಿಕೊಂಡಾಗಿನಿಂದ ಬದುಕಿನ ಹೊಸ ಪಾಠಗಳನ್ನು ಅರಿತಿರುವೆ. ಚಾಂಪಿಯನ್ ಎಂದರೆ ಬರೇ ಪದಕ ಗೆಲ್ಲುವುದು ಮಾತ್ರವಲ್ಲ, ಬದುಕನ್ನೂ ಗೆಲ್ಲಬೇಕು. ಪದಕ ಗೆದ್ದಾಗ ಸಿಕ್ಕ ತೃಪ್ತಿ ಇಂಥ ಸೇವೆಯನ್ನು ಮಾಡುವುದರಿಂದಲೂ ಸಿಗುತ್ತಿದೆ, ಅದೇ ಬದುಕು,’’ ಎನ್ನುತ್ತಾರೆ ಮೊಹಮ್ಮದ್.