Friday, April 19, 2024

ಉಪ್ಪಿನ ಕೋಟೆಯ ಉಕ್ಕಿನ ಆಟಗಾರ ನವೀನ್‌ ಶೆಟ್ಟಿ

ಸೋಮಶೇಖರ್‌ ಪಡುಕರೆ sportsmail

ಇತ್ತೀಚಿಗೆ ಕರ್ನಾಟಕ ಜೂನಿಯರ್‌ ವಾಲಿಬಾಲ್‌ ತಂಡ ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದೆ. ಈ ಸಾಧನೆಯ ಹಿಂದೆ ಕರಾವಳಿಯ ಶ್ರೇಷ್ಠ ವಾಲಿಬಾಲ್‌ ಆಟಗಾರ, ಕರ್ನಾಟಕ ಪೊಲೀಸ್‌ ತಂಡದ ಆಟಗಾರ, ಕರ್ನಾಟಕ ಜೂನಿಯನ್‌ ತಂಡದ ಕೋಚ್‌ ಉಡುಪಿ ಜಿಲ್ಲೆಯ ಉಪ್ಪಿನ ಕೋಟೆಯ ನವೀನ್‌ ಶೆಟ್ಟಿ ಅವರ ಪಾತ್ರ ಪ್ರಮುಖವಾಗಿತ್ತು ಎನ್ನಲು ಹೆಮ್ಮೆ ಅನಿಸುತ್ತಿದೆ.

ಕರ್ನಾಟಕ ಜೂನಿಯನ್‌ ತಂಡದ ಪ್ರಧಾನ ಕೋಚ್‌ ರವೀಂದ್ರ ಹಾಗೂ ಸಹಾಯಕ ಕೋಚ್‌ ಆಗಿ ನವೀನ್‌ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು ಹತ್ತು ವರ್ಷಗಳ ನಂತರ ಕರ್ನಾಟಕ ಜೂನಿಯನ್‌ ತಂಡ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದೆ.

ವಾಲಿಬಾಲ್‌ನಲ್ಲಿ ಆಸಕ್ತಿ ಇದ್ದು, ಪೊಲೀಸ್‌ ಇಲಾಖೆ ಸೇರಿದ ನಂತರ ಪೊಲೀಸ್‌ ತಂಡದಲ್ಲಿ ಆಡಿ, ರಾಷ್ಟ್ರಮಟ್ಟದಲ್ಲಿ ಮಿಂಚಿದ ನವೀನ್‌ ಶೆಟ್ಟಿ ಈಗ ತರಬೇತಿಯ ಜೊತೆಯಲ್ಲಿ ಪೊಲೀಸ್‌ ತಂಡದ ಪರ ಆಡುತ್ತಿದ್ದಾರೆ, ಅಲ್ಲದೆ ಹಲವಾರು ವಾಲಿಬಾಲ್‌ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ.

ರಾಜ್ಯ ಎ ಡಿವಿಜನ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ನವೀನ್‌ ಶೆಟ್ಟಿ ಅವರಿಗೆ ಸೀನಿಯನ್‌ ನ್ಯಾಷನಲ್ಸ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ನಂತರ ಫಡೆರೇಷನ್‌ ಕಪ್‌, ಸೌತ್‌ ಜೋನ್‌ ಮೊದಲಾದ ಚಾಂಪಿಯನ್‌ಷಿಪ್‌ಗಳಲ್ಲಿ ಮಿಂಚಿ ರಾಜ್ಯಕ್ಕೆ ಕೀರ್ತಿ ತಂದ ಆಟಗಾರ.

ಪೊಲೀಸ್‌ ಇಲಾಖೆಯಿಂದ ಮೆಚ್ಚುಗೆ:

ಪೊಲೀಸ್‌ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ನವೀನ್‌ ಅವರ ಕ್ರೀಡಾಸಕ್ತಿಯ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಪೊಲೀಸ್‌ ಅಥ್ಲೆಟಿಕ್ಸ್‌ ಕೂಟದಲ್ಲೂ ಐದು ಚಿನ್ನದ ಪದಕ ಗೆಲ್ಲುವ ಮೂಲಕ ನವೀನ್‌ ತಮ್ಮಲ್ಲಿರುವ ಕ್ರೀಡಾಸಕ್ತಿಯನ್ನು ಹೊರಹಾಕಿದರು. ಕ್ರೀಡಾಕೂಟದಲ್ಲಿ ಚಾಂಪಿಯನ್‌ ಪಟ್ಟ ಗೆದ್ದು, ಇಲಾಖೆಗೆ ಗೌರವ ತಂದರು.

2008ರಲ್ಲಿ ಜಲಂಧರ್‌ನಲ್ಲಿ ನಡೆದ ಅಖಿಲ ಭಾರತ ಪೊಲೀಸ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು. ಜಮಖಂಡಿಯಲ್ಲಿ ನಡೆದ ಅಖಿಲ ಭಾರತ ಕ್ರೀಡಾಕೂಟದಲ್ಲಿ ಕರ್ನಾಟಕ ಪೊಲೀಸ್‌ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ನವೀನ್‌ ಅವರ ಪಾತ್ರ ಪ್ರಮುಖವಾಗಿತ್ತು.

ಇಲ್ಲಿ ನವೀನ್‌ ಸ್ಟಾರ್‌ ಆಫ್‌ ದಿ ಮ್ಯಾಚ್‌ ಗೌರವಕ್ಕೆ ಪಾತ್ರರಾದರು. ಹಲವಾರು ಬಾರಿ ರಾಜ್ಯ ಪೊಲೀಸ್‌ ತಂಡವನ್ನು ವಿವಿಧ ಹಂತಗಳಲ್ಲಿ ಸ್ಪರ್ಧಿಸಿ ರಾಜ್ಯಕ್ಕೆ ಕೀರ್ತಿ ತಂದು ಪೊಲೀಸ್‌ ಇಲಾಖೆಯಿಂದ ನಗದು ಬಹುಮಾನ ಪಡೆದ ಹೆಮ್ಮೆಯ ಪೊಲೀಸ್‌ ಎನಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ದಕ್ಷಿಣ ವಲಯ ರಾಷ್ಟ್ರೀಯ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಚಿನ್ನದ ಪದಕ ಗೆದ್ದಿತ್ತು. ದಸರಾ, ದಕ್ಷಿಣ ವಲಯ, ಫಡೆರೇಷನ್‌ ಕಪ್‌, ಪೊಲೀಸ್‌ ಕ್ರೀಡಾಕೂಟ ಹೀಗೆ ಪ್ರತಿಯೊಂದು ಟೂರ್ನಿಯಲ್ಲೂ ಮಿಂಚಿನ ನವೀನ್‌ ಶೆಟ್ಟಿ ಈಗ ಕರ್ನಾಟಕ ಜೂನಿಯನ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್‌ ಇಲಾಖೆಯ ಹೆಮ್ಮೆಯ ಸ್ಟಾರ್‌ ಆಗಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಊರಿನಲ್ಲೊಂದು ಅಕಾಡೆಮಿ ಸ್ಥಾಪನೆ:

ಕರಾವಳಿಯಲ್ಲಿ ಸಾಕಷ್ಟು ವಾಲಿಬಾಲ್‌ ಆಟಗಾರರಿದ್ದಾರೆ, ಆದರೆ ಅವರಿಗೆ ಉತ್ತಮ ರೀತಿಯಲ್ಲಿ ತರಬೇತಿ ಸಿಗುತ್ತಿಲ್ಲ. ಇದನ್ನು ಗಮನಿಸಿದ ನವೀನ್‌ ಶೆಟ್ಟಿಯವರು ಬ್ರಹ್ಮಾವರ ಪರಿಸರದಲ್ಲಿ ಒಂದು ಅಂತಾರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್‌ ಅಕಾಡೆಮಿ ಸ್ಥಾಪಿಸುವ ಗುರಿ ಹೊಂದಿದ್ದಾರೆ. ಈ ಪರಿಸರದಲ್ಲಿ ಉತ್ತಮವಾದ ಸ್ಥಳ ಸಿಕ್ಕರೆ ಮುಂದಿನ ವರ್ಷಗಳಲ್ಲಿ ಅಕಾಡೆಮಿ ಸ್ಥಾಪಿಸುವ ಆಶಯ ವ್ಯಕ್ತಪಡಿಸಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ವಾಲಿಬಾಲ್‌ ಕೋಚಿಂಗ್‌ಗಾಗಿ ಅಧಿಕೃತ ತರಬೇತಿ ಪಡೆಯುತ್ತಿರುವ ನವೀನ್‌ ಶೆಟ್ಟಿ ಅವರ ಕನಸು ನನಸಾಗಲು ಯಾರಾದರೂ ಭೂಮಿಯನ್ನು ನೀಡಿದರೆ ಈ ಕರಾವಳಿಯಲ್ಲಿ ಉತ್ತಮ ಅಕಾಡೆಮಿಯೊಂದು ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಒಳಾಂಗಣ ಮತ್ತು ಹಾಸ್ಟೆಲ್‌ ವ್ಯವಸ್ಥೆಯನ್ನು ಹೊಂದಿರುವ ಅಕಾಡೆಮಿ ಸ್ಥಾಪಿಸುವುದಾಗಿ ನವೀನ್‌ ಶೆಟ್ಟಿ ಹೇಳಿದ್ದಾರೆ.

ಈಗ ಬೆಂಗಳೂರಿನಲ್ಲಿ ಗೋಲ್ಡನ್‌ ಈಗಲ್‌ ಹೆಸರಿನಲ್ಲಿ ಅಕಾಡೆಮಿಯೊಂದನ್ನು ಸ್ಥಾಪಿಸಿ ಯುವ ಆಟಗಾರರಿಗೆ ನವೀನ್‌ ಶೆಟ್ಟಿ ತರಬೇತಿ ನೀಡುತ್ತಿದ್ದಾರೆ.

Related Articles