Saturday, October 12, 2024

ಈ ವಿಶ್ವ ಚಾಂಪಿಯನ್ ಇನ್ನೂ ಟೈಪಿಸ್ಟ್ ಆಗಿರಬೇಕೆ?

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಎರಡು ಬಾರಿ ವಿಶ್ವ ಚಾಂಪಿಯನ್ ಪಟ್ಟ, 10 ಅಂತಾರಾಷ್ಟ್ರೀಯ ಪದಕ, ರಾಷ್ಟ್ರಮಟ್ಟದಲ್ಲಿ 7 ಬಾರಿ ಚಿನ್ನದ ಪದಕ, 5 ಬೆಳ್ಳಿ, 6 ಕಂಚು, ರಾಜ್ಯಮಟ್ಟದಲ್ಲಿ 15 ಬಾರಿ ಚಾಂಪಿಯನ್, ಕ್ಲಬ್ ಮಟ್ಟದಲ್ಲಿ ನಡೆದ ಚಾಂಪಿಯನ್ಷಿಪ್ ಗಳಲ್ಲಿ 10 ಬಾರಿ ಚಿನ್ನದ ಪದಕ, ವಿಶ್ವ ಮಟ್ಟದ ರಾಂಕಿಂಗ್ ನಲ್ಲಿ 2 ಮತ್ತು 3ನೇ ಸ್ಥಾನ ತಲುಪಿದ ಕೀರ್ತಿ, ರಾಷ್ಟ್ರಪತಿಗಳಿಂದ ನಾರಿಶಕ್ತಿ ಪುರಸ್ಕಾರ ಗಳಿಸಿದ ಕರ್ನಾಟಕದ ಮೊದಲ ಕ್ರೀಡಾಪಟು,

ಪ್ರಧಾನಿ ನರೇಂದ್ರ ಮೋದಿಯವರಿಂದ ಮೆಚ್ಚುಗೆ, ರಾಜ್ಯ ಸರಕಾರದಿಂದ ಏಕಲವ್ಯ ಮತ್ತು ಕೆಂಪೇಗೌಡ ಪ್ರಶಸ್ತಿ ಇಂಥ ಸಾಧನೆ ಮಾಡಿದ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ರೇವಣ್ಣ ಉಮಾದೇವಿ ಕಳೆದ 24 ವರ್ಷಗಳಿಂದ ಪದೋನ್ನತಿ ಕಾಣದೆ ತೋಟಗಾರಿಕಾ ಇಲಾಖೆಯಲ್ಲಿ ಕೇವಲ ಟೈಪಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಬೇಸರದ ಸಂಗತಿ.

ಹರಿಯಾಣ, ಪಂಜಾಬ್, ತಮಿಳುನಾಡು, ದಿಲ್ಲಿ, ಮಹಾರಾಷ್ಟ್ರ, ತೆಲಂಗಾಣ, ಕೇರಳ ಮೊದಲಾದ ರಾಜ್ಯಗಳಲ್ಲಿ ಕ್ರೀಡಾಪಟುಗಳು ಸಾಧನೆ ಮಾಡಿದರೆ ಅವರಿಗೆ ನೇರವಾಗಿ ಉನ್ನತ ಹುದ್ದೆಗಳನ್ನು ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಈ ರೀತಿಯ ಪ್ರೋತ್ಸಾಹದ ಕೊರತೆ ಇದೆ ಎಂದರೆ ತಪ್ಪಾಗಲಾರದು.

ನೇಕಾರರ ಕುಟುಂಬದಿಂದ ಬಂದ ಉಮಾದೇವಿ ಉನ್ನತ ಶಿಕ್ಷಣವನ್ನು ಪಡೆಯಲು ವಿಫಲರಾದರೂ ತಂದೆಯ ಕೈಮಗ್ಗದಲ್ಲಿ ಕೆಲಸ ಮಾಡುತ್ತಿದ್ದರು, ಈ ನಡುವೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಡೈಪಿಂಗ್ ಕಲಿತು, 23ನೇ ವಯಸ್ಸಿನಲ್ಲಿ ತೋಟಗಾರಿಕಾ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ಸೇರಿಕೊಂಡರು. ಕಳೆದ 26 ವರ್ಷಗಳಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ನಲ್ಲಿ ರಾಜ್ಯಕ್ಕೆ ಕೀರ್ತಿ ತಂದರೂ ಅವರ ಸಾಧನೆಗೆ ತಕ್ಕಂತೆ ಪ್ರೋತ್ಸಾಹ ಸಿಗದಿರುವುದು ಬೇಸರದ ಸಂಗತಿ.

ಸಂಕಷ್ಟಗಳ ಮೆಟ್ಟಿನಿಂತ ವಿಶ್ವಚಾಂಪಿಯನ್

ಸಾಮಾನ್ಯವಾಗಿ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಶ್ರೀಮಂತರ ಕ್ರೀಡೆ ಎಂಬ  ನಂಬಿಕೆ ಇದೆ. ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ದುಡಿಯುವ ವರ್ಗದವರು ಈ ಕ್ರೀಡೆಯಲ್ಲಿ  ಪಾಲ್ಗೊಳ್ಳಲು ಹಿಂದೆ ಸರಿಯುತ್ತಿದ್ದರು. ಆದರೆ ಉಮಾದೇವಿ ಇದು ಬರೇ ಉಳ್ಳವರ ಕ್ರೀಡೆಯಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಉಮದೇವಿಯವರ ಸಾಧನೆಯನ್ನು ನೋಡಿ ಅನೇಕ ಮಹಿಳಾ ಆಟಗಾರ್ತಿಯರು ಮುಂದೆ ಬಂದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. ಆರಂಭದಲ್ಲಿ ಟೇಬಲ್ ಟೆನಿಸ್ ನಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆಂದು ಬಯಸಿದ್ದ ಉಮಾದೇವಿಯವರು ಕೋಚ್ ಬರುವ ತನಕ ಕ್ಲಬ್ ನಲ್ಲಿ ಕಾಯುತ್ತಿದ್ದರು. ಈ ಪ್ರಕ್ರಿಯೆ ಮುಂದುವರಿದ ಕಾರಣ ಕೋಚ್ ಬರುವ ವರೆಗೆ ಪಕ್ಕದ ಕೊಠಡಿಯಲ್ಲಿದ್ದ ಬಿಲಿಯರ್ಡ್ಸ್ ಟೇಬಲ್ ನಲ್ಲಿ ಆಡಲಾರಂಭಿಸಿದರು, ಮತ್ತೆ ಹಿಂದಿರುಗಿ ನೋಡಲಿಲ್ಲ. ಮೊದಲ ಚಾಂಪಿಯನ್ಷಿಪ್ ನಲ್ಲೇ ಮೂರನೇ ಸ್ಥಾನ ಗಳಿಸಿದ್ದು, ತನಗೆ ಸ್ಫೂರ್ತಿಯಾಯಿತು ಎನ್ನುತ್ತಾರೆ ಉಮಾದೇವಿ.

ಉಮಾದೇವಿಯವರ ಯಶಸ್ಸಿನಲ್ಲಿ ತಂದೆ ಎಸ್. ರೇವಣ್ಣ, ತಾಯಿ ಕೆ.ಎನ್. ಲಕ್ಷ್ಮೀದೇವಮ್ಮ ಹಾಗೂ ಪತಿ ನಾಗರಾಜ್ ಅವರ ಪಾತ್ರ ಪ್ರಮುಖವಾಗಿತ್ತು. “ನನಗೆ ಬದುಕಿನ ಪಾಠ ಕಲಿಸಿದ್ದು ತಂದೆಯವರ ಕೈಮಗ್ಗ,’’ ಎನ್ನುತ್ತಾರೆ ಉಮಾದೇವಿ. ಪತಿ ನಾಗರಾಜ್ ಉತ್ತಮ ಫುಟ್ಬಾಲ್ ಆಟಗಾರರು, ಆದರೆ ಅವಕಾಶ ಸಿಗದ ಕಾರಣ, ಮಿಂಚಲಾಗಲಿಲ್ಲ. ಆದರೆ ತನ್ನಿಂದಾಗದ ಸಾಧನೆಯನ್ನು ತನ್ನ ಪತ್ನಿ ಮಾಡುತ್ತಿರುವುದಕ್ಕೆ ಹೆಮ್ಮೆಪಟ್ಟ ನಾಗರಾಜ್ ಅವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾರೆ. ಇದರಿಂದಾಗಿ ವಿಶ್ವಮಟ್ಟದಲ್ಲಿ ಮಿಂಚಲು ಸಾಧ್ಯವಾಯಿತು.

ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ!

ನಾರಿ ಶಕ್ತಿ ಪುರಸ್ಕಾರವನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದ ನಂತರ ಸಾಧಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಅವಕಾಶ ಕಲ್ಪಿಸಲಾಗಿತ್ತು, ಈ ಸಂದರ್ಭದಲ್ಲಿ ಪ್ರಧಾನಿಯವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿರುವುದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು ಎನ್ನುತ್ತಾರೆ ಉಮಾದೇವಿ.

ಕ್ರೀಡಾ ಸಚಿವರ ಗಮನಕ್ಕೆ

ರಾಜ್ಯ ಸರಕಾರ ಕ್ರೀಡಾ ಪ್ರೋತ್ಸಾಹಕ್ಕೆ ಹಲವಾರು ಯೋಜನೆಗಳನ್ನು ರೂಪಿಸುತ್ತದೆ. ಕೆಲವೊಂದನ್ನು ಕಾರ್ಯರೂಪಕ್ಕೆ ತರುತ್ತದೆ. ಅದೇ ರೀತಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳ ಬದುಕಿನ ಬಗ್ಗೆಯೂ ಯೋಚಿಸಬೇಕಾದ ಅಗತ್ಯವಿದೆ. ಉಮಾದೇವಿ ಅವರಂಥ ಸಾಧಕರಿಗೆ ಉನ್ನುತ ಹುದ್ದೆಯನ್ನು ನೀಡುವ ಮೂಲಕ ಯುವ ಕ್ರೀಡಾಪಟುಗಳ ಸಾಧನೆಗೆ ಉತ್ತೇಜನ ನೀಡಿದಂತಾಗುತ್ತದೆ. ರಾಜ್ಯದ ಕ್ರೀಡಾ ನೀತಿಯಲ್ಲಿ ಇಂಥ ಸಾಧಕರಿಗೆ ಪ್ರೋತ್ಸಾಹ ನೀಡುವಂತ ಅಂಶಗಳನ್ನು ಜಾರಿಗೊಳಿಸಿದರೆ ಕರ್ನಾಟಕದಲ್ಲಿ ಮತ್ತಷ್ಟು ಕ್ರೀಡಾಪಟುಗಳು ಬೆಳಕಿಗೆ ಬರಲು ಸಾಧ್ಯವಾಗುತ್ತದೆ.

ರೇವಣ್ಣ ಉಮಾದೇವಿ ಅವರ ಕುರಿತ ಹೆಚ್ಚಿನ ಮಾಹಿತಿಗಾಗಿ https://revannaumadevi.com/

Related Articles