Saturday, October 12, 2024

ಕಸದ ಲಾರಿಯಲ್ಲೇ ಸಾಗಿದೆ ಚಾಂಪಿಯನ್‌ ಲಿಫ್ಟರ್‌ ಮಂಜಪ್ಪನ ಬದುಕು!

ಸೋಮಶೇಖರ್‌ ಪಡುಕರೆ, ಬೆಂಗಳೂರು:

ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದುರೂ ದಾವಣಗೆರೆ ಮುನ್ಸಿಪಾಲಿಟಿಯಲ್ಲಿ ಕಸದ ವಾಹನ ಚಲಾಯಿಸುತ್ತ, ಯುವಕರಿಗೆ ಲಿಫ್ಟಿಂಗ್‌ ತರಬೇತಿ ನೀಡುತ್ತಿರುವ ಪವರ್‌ಲಿಫ್ಟರ್‌ ಮಂಜಪ್ಪ ಪುರುಷೋತ್ತಮ್‌ ಅವರ ಬದುಕಿಗೆ ರಾಜ್ಯ ಸರಕಾರ ನೆರವು ನೀಡಬೇಕಾದ ಅಗತ್ಯ ಇದೆ. ಭಾರತದ ಯಾವುದೇ ರಾಜ್ಯದಲ್ಲೂ ಕ್ರೀಡಾ ಸಾಧಕರೊಬ್ಬರಿಗೆ ಕಸದ ಲಾರಿ ಚಲಾಯಿಸುವ ಉದ್ಯೋಗ ನೀಡಿದ ಉದಾಹರಣೆ ಇದ್ದಂತಿಲ್ಲ.

ಒಬ್ಬ ಕ್ರೀಡಾ ಸಾಧಕನ ಸಾಧನೆಯನ್ನು ಪರಿಗಣಿಸದೆ ಅವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸ್ಥಿತಿ ಇತರ ಕ್ರೀಡಾಪಟುಗಳ ಯಶಸ್ಸಿನ ಮೇಲೂ ಪರಿಣಾಮ ಬೀರುವುದು ಸಹಜ.

ಕಳೆದ ನಾಲ್ಕು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಎರಡು ಮಕ್ಕಳ ತಂದೆ ಮಂಜಪ್ಪ  ಅವರ ಬದುಕುಪ್ಪ ಈಗ ಸಂಕಷ್ಟಕ್ಕೆ ಸಿಲುಕಿದೆ. ಮೊನ್ನೆ ನಡೆದ ಪೌರ ಕಾರ್ಮಿಕರ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಮಂಜಪ್ಪ ತಮ್ಮ ಕೆಲಸವನ್ನು ಕಾಯಂ ಮಾಡಲಿ ಎಂದು ಸರಕಾರದಲ್ಲಿ ಮೊರೆ ಇಟ್ಟಿದ್ದಾರೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ 20 ಚಿನ್ನದ ಪದಕ ಸೇರಿದಂತೆ ಒಟ್ಟು 35ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ಮಂಜಪ್ಪ ಅವರು ತಮ್ಮ ಬಿಡುವಿನ ಸಮಯದಲ್ಲಿ ಈಗ ಯುವಕರಿಗೆ ಪವರ್‌ಲಿಫ್ಟಿಂಗ್‌ ತರಬೇತಿ ನೀಡುತ್ತಿದ್ದಾರೆ.

ಹಿಂದೊಮ್ಮೆ ಅರಣ್ಯ ಇಲಾಖೆಯಲ್ಲಿ ಉದ್ಯೋಗಕ್ಕೆ ಅವಕಾಶ ಬಂದಾಗ ಮಂಜಪ್ಪ ಗೆದ್ದ ಪದಕಗಳಿಗೆ ಆಯ್ಕೆ ಸಮಿತಿ ಬೆಲೆ ಕೊಡಲಿಲ್ಲ, ಓಟದಲ್ಲಿ 10 ಸೆಕೆಂಡ್‌ ಹಿಂದೆ ಬಿದ್ದ ಕಾರಣ ಅವಕಾಶದಿಂದ ವಂಚಿತರಾದರು.  ಕೊನೆಗೆ 2018ರಲ್ಲಿ ಬೇರೆ ದಾರಿ ಇಲ್ಲದೆ ದಾವಣೆಗೆರೆ ಮುನ್ಸಿಪಾಲಿಟಿಯಲ್ಲಿ ಕಸದ ವಾಹನ ಚಲಾಯಿಸುವ ಕೆಲಸಕ್ಕೆ ಸೇರಿಕೊಂಡರು. “ನನಗೆ ಕಾಯಂ ಕೆಲಸವಿಲ್ಲದ ಚಿಂತೆ ಒಂದೆಡೆಯಾದರೆ, ಮಾಡುವ ಕೆಲಸಕ್ಕೂ ಉತ್ತಮ ವೇತನ ಇಲ್ಲ ಎಂಬ ನೋವು. ಕ್ರೀಡಾಪಟುಗಳಿಗೆ ಈ ರೀತಿಯ ದುಃಸ್ಥಿತಿ ಬರಬಾರದು,” ಎನ್ನುತ್ತಾರೆ ಮಂಜಪ್ಪ. ಸಿಗುವ ವೇತನವೂ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು ಮಂಜಪ್ಪ ಅವರು ನೋವಿನಿಂದ ಹೇಳಿಕೊಂಡಿದ್ದಾರೆ.

ಸ್ಟ್ರಾಂಗ್‌ ಮ್ಯಾನ್‌ ಆಫ್‌ ಇಂಡಿಯಾ!: 2014ರಿಂದ ಲಿಫ್ಟಿಂಗ್‌ನಲ್ಲಿ ತೊಡಗಿಕೊಂಡಿದ್ದ, ಮಂಜಪ್ಪ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಿರಂತರವಾಗಿ ಪದಕಗಳನ್ನು ಗೆಲ್ಲುತ್ತ ಬಂದರು. 2018ರಲ್ಲಿ ಲಖನೌನಲ್ಲಿ ನಡೆದ ರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ನಲ್ಲಿ ಮಂಜಪ್ಪ ಚಿನ್ನದ ಪದಕದೊಂದಿಗೆ ಸ್ಟ್ರಾಂಗ್‌ ಮ್ಯಾನ್‌ ಆಫ್‌ ಇಂಡಿಯಾ ಗೌರವಕ್ಕೆ ಪಾತ್ರರಾದರು. ದಕ್ಷಿಣ ಭಾರತ ಮಟ್ಟದಲ್ಲೂ ಸ್ಟ್ರಾಂಗ್‌ ಮ್ಯಾನ್‌ ಎಂಬ ಪ್ರಶಸ್ತಿ ಗೆದ್ದವರು. ಇಂಥ ಸಾಧಕನಿವೆ ಒಂದು ಉತ್ತಮ ಕಾಯಂ ಉದ್ಯೋಗ ಕೊಡಲು ನಮ್ಮ ಸರಕಾರಕ್ಕೆ ಆಗಲಿಲ್ಲ ಎಂಬುದು ನೋವಿನ ಸಂಗತಿ.

“ನನಗೆ ಕೆಲಸದ ಬಗ್ಗೆ ಯಾವುದೇ ರೀತಿಯ ಕೀಳರಿಮೆ ಇಲ್ಲ. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಗೌರವ ಇದೆ. ಆದರೆ ಕೊಡುವ ವೇತನ ಮಾತ್ರ ಸಂಸಾರವನ್ನು ನಡೆಸಲು ಸಾಕಾಗುತ್ತಿಲ್ಲ. ಎಲ್ಲರಲ್ಲೂ ಮನವಿ ಮಾಡಿ ಸಾಕಾಗಿದೆ. ಕ್ರೀಡಾ ಸಾಧನೆಯನ್ನು ಪರಿಗಣಿಸಿಯಾದರೂ ಬದುಕಿಗೆ ಆಧಾರ ನೀಡಬಹುದು ಎಂಬ ನಂಬಿಕೆ ನನಗಿದೆ,” ಎಂದು ಮಂಜಪ್ಪ ಆತ್ಮವಿಶ್ವಾಸದಲ್ಲಿ ನುಡಿದರು.

ಶಿಷ್ಯರ ಯಶಸ್ಸು: ಮಂಜಪ್ಪ ಅವರು ಬಿಡುವಿನ ವೇಳೆಯಲ್ಲಿ ಇತಿಹಾಸ ಪ್ರಸಿದ್ಧ ಬೀರೇಶ್ವರ ವ್ಯಾಯಾಮ ಶಾಲೆಯಲ್ಲಿ ಮಕ್ಕಳಿಗೆ  ಪವರ್‌ ಲಿಫ್ಟಿಂಗ್‌ ತರಬೇತಿ ನೀಡುತ್ತಿದ್ದಾರೆ. ಇತ್ತೀಚಿಗೆ ಮೈಸೂರಿನಲ್ಲಿ ನಡೆದ ರಾಜ್ಯ ಸಬ್‌ ಜೂನಿಯರ್‌  ಚಾಂಪಿಯನ್‌ಷಿಪ್‌ನಲ್ಲಿ ಮಂಜಪ್ಪ ಅವರ ಶಿಷ್ಯ ವಿನಯ್‌ ಯಾದವ್‌ ಬೆಳ್ಳಿ ಪದಕ ಗೆದ್ದು ಕೀರ್ತಿ ತಂದಿದ್ದಾರೆ.

ತಮ್ಮ ಯಶಸ್ಸಿನಲ್ಲಿ ನೆರವು ನೀಡಿದ ಭಿರೇಶ್‌ ವ್ಯಾಯಾಮ ಶಾಲೆಯ ಪ್ರತಿಯೊಬ್ಬರನ್ನೂ ಮಂಜಪ್ಪ ಸ್ಮರಿಸುತ್ತಾರೆ. ಮಂಜಪ್ಪ ಅವರ ಯಶಸ್ಸಿಗೆ ಬೆಂಬಲ ನೀಡುವವರು ಅವರ ಪತ್ನಿ ಸವಿತಾ ಮತ್ತು ಮಕ್ಕಳು ಪ್ರಶಾಂತ್‌ ಮತ್ತು ರೇವಣ್ಣ.

ಸ್ವಚ್ಛ ಭಾರತ್‌ ಅಭಿಯಾನ್‌, ಕ್ಲೀನ್‌ ಸಿಟಿ ಎಂದು ಅರಿವು ಮೂಡಿಸುತ್ತಿರುವ ಸರಕಾರ ಅಲ್ಲಿ ಕೆಲಸ ಮಾಡುತ್ತಿರುವವರ ಬದುಕಿನ ಬಗ್ಗೆಯೂ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ಒಬ್ಬ ಕ್ರೀಡಾ ಸಾಧಕನ ಬದುಕೇ ಹೀಗಾದರೆ ಇನ್ನು ಸಾಮಾನ್ಯ ವ್ಯಕ್ತಿಯ ಬದುಕು?

Related Articles