Thursday, April 18, 2024

ಒಂಟಿಗೈಯಲ್ಲೇ ನಡೆದಿದೆ ಶಿವನಾಟ!

ಸೋಮಶೇಖರ್ ಪಡುಕರೆ ಬೆಂಗಳೂರು

ಅವನಿಗೆ ಬೌಲಿಂಗ್ ಕೊಟ್ಟು ನೋಡಿ…

ಅವನು ಫೀಲ್ಡಿಂಗ್ ಮಾಡುವುದನ್ನು ನೋಡಿ..

ಅವನ ಆಕ್ರಮಣಕಾರಿ ಬ್ಯಾಟಿಂಗ್ ನೋಡಿ… ಕ್ರಿಕೆಟ್‌ನಲ್ಲಿ ಇದಕ್ಕಿಂತ ಬೇರೇನು ಮಾಡಬೇಕು?

ನಿಮಗೆ ಇಷ್ಟವಾದರೆ ನಿಮ್ಮ ಕ್ಲಬ್‌ಗಳಲ್ಲಿ ಸೇರಿಸಿಕೊಳ್ಳಿ… ಏಕೆಂದರೆ ಆತ ಈ  ಎಲ್ಲ ಸಾಧನೆ  ಮಾಡುವುದು ಒಂದೇ ಕೈಯಲ್ಲಿ. ಅಯ್ಯೋ ಪಾಪಾ..ಹೀಗಾಗಬಾರದಿತ್ತು.. ಎಂದು ಅನುಕಂಪದ ಅಲೆ ಎಬ್ಬಿಸಿ ಅವನಲ್ಲಿರುವ ಆತ್ಮವಿಶ್ವಾಸವನ್ನು ಸಾಯಿಸಬೇಡಿ… ಏಕೆಂದರೆ ಅವನಿಗೂ ನಮ್ಮೊಂದಿಗೆ ಬದುಕಬೇಕು, ಎಲ್ಲರೊಂದಿಗೆ ಕ್ರಿಕೆಟ್ ಆಡಬೇಕೆಂಬ ಹಂಬಲವಿದೆ.
ನಾನು ಹೇಳಹೊರಟಿದ್ದು ಚಿಕ್ಕಬಳ್ಳಾಪುರು ಜಿಲ್ಲೆಯ, ಬಾಗೇಪಳ್ಳಿ ತಾಲೂಕಿನ ಗುಂಟಿಗಾನ ಹಳ್ಳಿಯ  ಸುಬ್ರಾಯಪ್ಪ ಹಾಗೂ ನಾಗಮ್ಮ ದಂಪತಿಯ ಪುತ್ರ ಶಿವಶಂಕರ್ ಅವರ ಬಗ್ಗೆ, ಉತ್ತಮ ಆಲ್ರೌಂಡರ್… ಒಂಟಿ ಗೈ ಕ್ರಿಕೆಟಿಗನ ಬಗ್ಗೆ.

ಆ ದಿನ ಶಿವು ಸಿಕ್ಕಾಗ

ಬೆಂಗಳೂರಿನ ಚಾಮರಾಜ ಪೇಟೆಯ ಪ್ರಕಾಶ್ ಕೆಫೆ  ಹೊಟೇಲ್‌ನ ಸಮೀಪ  ನಿಂತಿದ್ದೆ. ಪಕ್ಕದ ರಸ್ತೆಯಲ್ಲಿ ಒಬ್ಬ ಹುಡುಗ ಕ್ರಿಕೆಟ್ ಕಿಟ್‌ನ ಬ್ಯಾಗ್ ಹಿಡಿದು ರಸ್ತೆ ದಾಟುತ್ತಿದ್ದ. ನೋಡಿದರೆ ಒಂದು ಕೈ ಇಲ್ಲ. ಕರೆಯುವಷ್ಟರಲ್ಲಿ ರಸ್ತೆ ದಾಟಿದ್ದ.  ಓಡಿ ಹೋಗಿ ಕರೆದೆ. ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು ಅಂದೆ. ನನ್ನ ಬಗ್ಗೆ ಹೇಳಿದೆ. ಆಗ ಸಮಾಧಾನಗೊಂಡು ರಸ್ತೆ ದಾಟಿ ಬಂದ.

ಚಿಕ್ಕಂದಿನಲ್ಲೇ ಅಪಘಾತ

ಶಿವಶಂಕರ್ ಆರನೇ ವಯಸ್ಸಿನಲ್ಲೇ ರಸ್ತೆ ಅಪಘಾತದಲ್ಲಿ ಎಡಗೈ  ಕಳೆದುಕೊಂಡ. ಆದರೆ ದೇವರು ಆತನ ಒಂದು  ಕೈಗೆ ಎರಡೂ ಕೈಗಳ ಶಕ್ತಿ ನೀಡಿದ. ಇದರಿಂದಾಗಿ ಉತ್ತಮ ಕ್ರಿಕೆಟಿನಾಗಲು ಸಾಧ್ಯವಾಯಿತು. ಈ ಬಾರಿ ಮರ್ಚೆಂಟ್ಸ್ ತಂಡದ ಪರ ನಾಲ್ಕನೇ ಡಿವಿಜನ್‌ಗೆ ಸಹಿ ಮಾಡಿರುವ ಶಿವುಗೆ ಇದುವರೆಗೂ ಆಡುವ ಅವಾಕಶ ಸಿಗಲಿಲ್ಲ. ಏಕೆಂದರೆ ಒಂದೇ ಕೈಯಲ್ಲಿ ಏನು ಆಡ್ತಾನೆ ಎಂಬ ಮಾತು ಕೇಳಿ ಬರುತ್ತಿದೆ. ಸಾಮಾನ್ಯರೊಂದಿಗೆ ಆಡುವ ಶಿವು ಉತ್ತಮ ಫೀಲ್ಡರ್. ಯಾವುದೇ ರೀತಿಯ ಕ್ಯಾಚ್ ಬಂದಲೂ ಸಲೀಸಾಗಿ ಹಿಡಿಯಬಲ್ಲ. ಕರ್ನಾಟಕ ಇನ್‌ಸ್ಟಿಟ್ಯೂಟ್ ಆ್ ಕ್ರಿಕೆಟ್ (ಕೆಐಒಸಿ)ಯ ಇರ್ಫಾನ್  ಶೇಟ್ ಹಾಗೂ ಹೆರಾನ್ಸ್ ಕ್ರಿಕೆಟ್ ಅಕಾಡೆಮಿಯ ಮುರಳೀಧರ್ ಶಿವಶಂಕರ್ ಅವರ ಬದುಕಿಗೆ  ಉತ್ತಮ ರೀತಿಯಲ್ಲಿ ನೆರರವಾಗಿದ್ದಾರೆ. ಕರ್ನಾಟಕ ರಾಜ್ಯ ರಣಜಿ ತಂಡದ ಆಟಗಾರ ಕೌನೇನ್ ಅಬ್ಬಾಸ್ ಎರಡು ಬಾರಿ ಬ್ಯಾಟ್ ಹಾಗೂ ಕಿಟ್ಸ್ ನೀಡಿ ಶಿವು ಅವರ ಕ್ರಿಕೆಟ್ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಸ್ಫೋಟಕ ಆಟಗಾರ

ಒಂದೇ ಕೈಯಲ್ಲಿ ಹೇಗೆ ಆಡಬಲ್ಲ? ಎಂದು ಶಿವು ಅವರ ಬ್ಯಾಟಿಂಗ್ ನೋಡಲು ಹಲವು ಬಾರಿ ಕ್ರೀಡಾಂಗಣಕ್ಕೆ ಹೋಗಿದ್ದೆ. ಕ್ರಿಕೆಟ್ ಅದು ಅವಕಾಶದ ಆಟ. ನಾನು ಹೋಗಿದ್ದಾಗ ಶಿವು ಉತ್ತಮವಾಗಿಯೇ ಆಡಿದ್ದ. ಕಳೆದ ಬಾರಿ ಐದನೇ ಡಿವಿಜನ್‌ನಲ್ಲಿ ಆಡಿ ೨ ಪಂದ್ಯಗಳಲ್ಲಿ 6 ವಿಕೆಟ್ ಗಳಿಸಿದ್ದ. ಕೆಐಒಸಿ ಅಭ್ಯಾಸ ಪಂದ್ಯದಲ್ಲಿ  96, 42, 62 ಹಾಗೂ 57 ರನ್ ಸಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಕಾಲೇಜು ತಂಡದಲ್ಲಿ ಎಸ್‌ಜಿಸಿಐಟಿ ಪರ ಆಡಿದ್ದ ಶಿವು ಸಿಎಂಆರ್ ವಿಶ್ವವಿದ್ಯಾನಿಲಯದ ಪರ  52 ರನ್ ಗಳಿಸಿದ್ದನ್ನು ನೋಡಿ ಎಲ್ಲರೂ ನಿಬ್ಬೆರಗಾಗಿದ್ದರು. ಮಧ್ಯಮ ವೇಗದ ಬೌಲರ್ ಶಿವಶಂಕರ್ ಆಡಿದ ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಕಿತ್ತು ಗಮನ ಸೆಳೆದಿದ್ದಾರೆ.
ನಾಳೆ ಬನ್ನಿ…
ಕಳೆದ ಬಾರಿಯ ಐಪಿಎಲ್ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಉನ್ನತ ಹುದ್ದೆಯಲ್ಲಿದ್ದ ಕನ್ನಡಿಗರೊಬ್ಬರಿಗೆ  ಈ ಹುಡುಗನಿಗೆ ನೆಟ್‌ನಲ್ಲಿ ಅಭ್ಯಾಸ ಮಾಡಲು ಅವಕಾಶ ಕೊಡಿ ಎಂದು ವಿನಂತಿಸಲಾಯಿತು. ಇಡೀ ಸೀಜನ್ ಮುಗಿಯುವವರೆಗೂ ನಾಳೆ ಬನ್ನಿ ಎಂಬ ಉತ್ತರ ನೀಡಿ ಸುಮ್ಮನಾದರು. ಮಾತೆತ್ತಿದರೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಬಗ್ಗೆ ಮಾತನಾಡು ಇವರಿಗೆ ಸಮಾಜದ ಬಗ್ಗೆ ಕಾಳಜಿ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.

ಕೈ ಇದ್ದವರಿಗೇ ಅವಕಾಶ ಇಲ್ಲ

ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಯೊಬ್ಬರನ್ನು ಅವಕಾಶದ ವಿಚಾರದಲ್ಲಿ ಮಾತನಾಡಿಸಿದಾಗ, ಅಯ್ಯೊ, ಇಲ್ಲಿ ಕೈ ಇದ್ದವರಿಗೇ ಅವಕಾಶ ಇಲ್ಲ, ಇನ್ನು ಕೈ ಇಲ್ಲದವರಿಗೆ ಎಲ್ಲಿಂದ ಸಿಗುತ್ತೆ, ಹೋಗಿ ಅಂಗವಿಕಲ ತಂಡದಲ್ಲಿ ಆಡಲಿ ಬಿಡಿ… ಎಂದರು. ಅವರ ಸಿನಿಮಾದ ಡಯಲಾಗ್‌ಗೆ ಒಂದಿಷ್ಟು ಜನ ನಕ್ಕರು….ಇದು ನಮ್ಮ ಸಮಾಜ.
ಏಷ್ಯಾಕಪ್‌ನಲ್ಲಿ ಅದೆಂಥಾ ಸ್ಫೂರ್ತಿ!
ದುಬೈಯಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶದ ಆಟಗಾರ ತಮೀಮ್ ಇಕ್ಬಾಲ್ ಗಾಯಗೊಂಡರೂ ೧೧ನೇ ಆಟಗಾರನಾಗಿ ಅಂಗಕ್ಕಳಿದರು. ಇದರ ಬಗ್ಗೆ ಕ್ರಿಕೆಟ್ ಜಗತ್ತೇ  ಕ್ರೀಡಾ ಸ್ಫೂರ್ತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗುಣಗಾನ ಮಾಡಿತು. ಆದರೆ ವಾಸ್ತವ ಬದುಕಿನಲ್ಲಿ ಅದೇ ರೀತಿಯ ಆಟಗಾರನೊಬ್ಬ ಸಿಕ್ಕಿದರೆ ನಾವು ಅವಕಾಶ ನೀಡಲು ಹಿಂದೆ ಮುಂದೆ ನೋಡುತ್ತೇವೆ. ಆತನನ್ನು ಅಂಗವಿಕಲ ಎಂದು ಕರೆಯುತ್ತೇವೆ.
ಕ್ರಿಕೆಟ್ ಕೆಲವೊಮ್ಮೆ ಅಂಗವಿಕಲರ ಆಟದಂತೆ.. ಎರಡೂ ಕೈ ಇದ್ದರೂ ಒಂದೇ ಎಸೆತಕ್ಕೆ ಔಟ್ ಆಗುತ್ತಾರೆ, ಎರಡೂ ಕೈ ಇದ್ದರೂ ಸುಲಭದ  ಕ್ಯಾಚ್ ಕೈ ಚೆಲ್ಲುತ್ತಾರೆ.. ಎರಡೂ ಕೈ ಇದ್ದರೂ ಫೀಲ್ಡಿಂಗ್‌ನಲ್ಲಿ ವಿಫಲರಾಗುತ್ತಾರೆ…ಆದರೆ ಶಿವಶಂಕರ್ ಹೇಳುವ ಮಾತು ಕೇಳಿ, ’ಬದುಕಿನಲ್ಲಿ ಒಂದು ಅವಕಾಶ ಕೊಡಲಿ, ನನ್ನ ಸಾಮರ್ಥ್ಯವನ್ನು ತೋರಿಸುತ್ತೇನೆ. ಒಂದು ಕೈ ಇಲ್ಲ ಎಂದು ತಿರಸ್ಕರಿಸಬೇಡಿ, ದೇವರು ಇರುವ ಒಂದು ಕೈಯಲ್ಲಿ  ಎರಡು ಕೈಗಳ ಶಕ್ತಿ ನೀಡಿದ್ದಾನೆ. ರನ್ ಗಳಿಸುವೆ, ಫೀಲ್ಡಿಂಗ್ ಮಾಡುವೆ, ಬೌಲಿಂಗ್ ಮಾಡುವೆ, ಫಿಟ್ನೆಸ್ ಇದೆ..ಕ್ರಿಕೆಟ್‌ಗೆ ಇನ್ನೇನು ಬೇಕು?’.

ಶಿವಶಂಕರ್ ಶಂಕರ್ ಸಂಪರ್ಕ -7975587909/9916048284

Related Articles