Friday, October 4, 2024

ಗಂಗೂಲಿ 6 ನಿಮಿಷ ತಡವಾಗಿ ಬಂದರೂ ಐಸಿಸಿ ನಿಯಮ ಅನ್ವಯವಾಗಿಲ್ಲ!

2007ರಲ್ಲಿ ರಾಹುಲ್‌ ದ್ರಾವಿಡ್‌ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿತ್ತು. ಕೇಪ್‌ಟೌನ್‌ನಲ್ಲಿ ಟೆಸ್ಟ್‌ ಸರಣಿಯ ಮೂರನೇ ಪಂದ್ಯ. ಇತ್ತಂಡಗಳು ಒಂದೊಂದು ಜಯ ಗಳಿಸಿದ್ದವು. ನಿರ್ಣಾಯಕ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಆಟಗಾರ ಸೌರವ್‌ ಗಂಗೂಲಿ ಕ್ರೀಸಿಗೆ 6 ನಿಮಿಷ ತಡವಾಗಿ ಬಂದರು. ನಾಯಕ ಗ್ರೇಮ್‌ ಸ್ಮಿತ್‌ ಔಟ್‌ಗೆ ಮನವಿ ಮಾಡದೆ ಗಂಗೂಲಿಗೆ ಆಡಲು ಅವಕಾಶ ಕಲ್ಪಿಸಿದರು. ಪಂದ್ಯ ಗೆದ್ದರು. Saurav Ganguly reached the crease after 6 minutes but ICC Timed Out rules not enforced.

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ವಾಸಿಂ ಜಾಫರ್‌ ಹಾಗೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದ ವೀರೇಂದ್ರ ಸೆಹ್ವಾಗ್‌ ಎರಡನೇ ಇನ್ನಿಂಗ್ಸ್‌ನಲ್ಲಿ ವಿಫಲರಾದ ಕಾರಣ. ಭಾರತ 6 ರನ್‌ ಗಳಿಸುವಷ್ಟರಲ್ಲಿ 2 ಅಮೂಲ್ಯ ವಿಕೆಟ್‌‌ ಕಳೆದುಕೊಂಡಿತ್ತು. ಮಕಾಯ್‌ ಎಂಟಿನಿ ಹಾಗೂ ಡೇಲ್‌ ಸ್ಟೇನ್‌ ಈ ಇಬ್ಬರ ವಿಕೆಟ್‌ ಕಬಳಿಸಿದರು. ರಾಹುಲ್‌ ದ್ರಾವಿಡ್‌ ಕ್ರೀಸಿನಲ್ಲಿದ್ದರು. ಸೌರವ್‌ ಗಂಗೂಲಿ ಅಂಗಣಕ್ಕಿಳಿಯಬೇಕಾಗಿತ್ತು. ಆದರೆ ದಾದ ಅಂಗಣಕ್ಕೆ ಇಳಿಯಲೇ ಇಲ್ಲ. ಪಂದ್ಯದ ನೇರ ಪ್ರಸಾರ ಮಾಡುತ್ತಿದ್ದ ಸ್ಟಾರ್‌ ಸ್ಪೋರ್ಟ್ಸ್‌ನ ವೀಕ್ಷಕ ವಿವರಣೆಗಾರರು ಈಗ ಸಚಿನ್‌ ಅಂಗಣಕ್ಕಿಳಿಯಲಿದ್ದಾರೆ ಎಂದರು. ಆದರೆ ಅಂಗಣಕ್ಕಿಳಿಯಬೇಕಾದ ಅನಿವಾರ್ಯತೆ ಬಂದದ್ದು ಸೌರವ್‌ ಗಂಗೂಲಿಗೆ. ಹಿಂದಿನ ದಿನ ಗಾಯಗೊಂಡಿದ್ದ ಕಾರಣ ಸಚಿನ್‌ ತಡವಾಗಿ ಬ್ಯಾಟಿಂಗ್‌ ಸಿಗಬಹುದು ಎಂದು ವಿಶ್ರಾಂತಿಯಲ್ಲಿದ್ದರು. ವಿವಿಎಸ್‌ ಲಕ್ಷ್ಮಣ್‌ ಸ್ನಾನ ಮಾಡುವುದರಲ್ಲಿ ತಲ್ಲೀನರಾಗಿದ್ದರು. ರಾಹುಲ್‌‌ ದ್ರಾವಿಡ್‌ ಸಿಟ್ಟಿನಿಂದ ಆ ಕಡೆಯಿಂದ ಈ ಕಡೆಗೆ ತಿರುಗಾಡುತ್ತಿದ್ದರು. ನಡುವೆ ಶಾನ್‌ ಪೊಲಾಕ್‌ ಡ್ರೆಸ್ಸಿಂಗ್‌ ರೂಮ್‌ ಕಡೆ ಕೈ ಮಾಡಿ ಬೇಗ ಬನ್ನಿ ಎಂದು ಕರೆಯುತ್ತಿದ್ದರು. ಆದರೆ ಆ ಕಡೆಯಿಂದ ಏಕದಿನ ತಂಡದ ಆಟಗಾರ ಧೋನಿ, ಟೆಸ್ಟ್‌ ಬೌಲರ್‌ ಶ್ರೀಶಾಂತ್‌ ಕಾಣಿಸುತ್ತಿದ್ದಾರೆಯೇ ಹೊರತು ಗಂಗೂಲಿ ಕಾಣಿಸುತ್ತಿರಲಿಲ್ಲ.

ಅಂಪೈರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನದ ಅಸಾದ್‌ ರಾವುಫ್‌ ಹಾಗೂ ಆಸ್ಟ್ರೇಲಿಯಾದ ಡೆರಿಲ್‌ ಹಾರ್ಪರ್‌ ಬೇರೆ ದಾರಿ ಇಲ್ಲದೆ ದಕ್ಷಿಣ ಆಫ್ರಿಕದ ಆಟಗಾರರ ಪ್ರತಿಕ್ರಿಯೆಯನ್ನು ನೋಡುತ್ತಿದ್ದರು. ಮೂರು ನಿಮಿಷಗಳ ಬಳಿಕ “ಸ್ವಲ್ಪ ತಡೆಯಿರಿ, ಟೈಮ್ಡ್‌ ಔಟ್‌ ಮನವಿ ಬೇಡ, ಏನೋ ತಾಂತ್ರಿಕ ಸಮಸ್ಯೆ ಆಗಿರಬಹುದು,” ಎಂದು ಸ್ಮಿತ್‌ ಅವರನ್ನು ವಿನಂತಿಸಿಕೊಂಡಿದ್ದರು. ಕೊನೆಗೆ ಅವರು ಕೂಡ ಹತಾಶೆಯಿಂದ ದಕ್ಷಿಣ ಆಫ್ರಿಕದ ಆಟಗಾರರಲ್ಲಿ ನಿಮ್ಮ ನಿಲುವನ್ನು ತಿಳಿಸಿ ಎಂದರು. ದಕ್ಷಿಣ ಆಫ್ರಿಕ ತಂಡದ ನಾಯಕ ಗ್ರೇಮ್‌ ಸ್ಮಿತ್‌ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.  ಕೊನೆಗೂ 6 ನಿಮಿಷಗಳ ಬಳಿಕ ಸೌರವ್‌ ಗಂಗೂಲಿಯವರು ಅಂಗಣಕ್ಕಿಳಿದರು. ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು. ಸೌರವ್‌ ಅಂಗಣಕ್ಕೆ ಬಂದಾಗ ದಕ್ಷಿಣ ಆಫ್ರಿಕದ ಆಟಗಾರರಾಗಲಿ, ಅಂಪೈರ್‌ಗಳಾಗಲಿ ಏನನ್ನೂ ಮಾತನಾಡಿಲ್ಲ. ದಾದ 46 ರನ್‌ ಗಳಿಸಿದರು. ಭಾರತ ಆ ಟೆಸ್ಟ್‌ ಪಂದ್ಯ ಸೋಲುವ ಮೂಲಕ 2-1 ಅಂತರದಲ್ಲಿ ಸರಣಿ ಸೋತಿತು.

Related Articles