Saturday, April 20, 2024

ಮಿನಿ ಜಿಪಿ ವಿಶ್ವ ಸರಣಿಗೆ ಬೆಂಗಳೂರಿನ ನಾಲ್ವರು ಆಯ್ಕೆ

ಬೆಂಗಳೂರು:

ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಡೆಯಲಿರುವ ಎಫ್‌ಐಎಂ ಮಿನಿ ಜಿಪಿ ವಿಶ್ವಸರಣಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ನಾಲ್ವರು ಸೇರಿದಂತೆ ದೇಶದ ಎಂಟು ಯುವ ಚಾಲಕರು ಆಯ್ಕೆಯಾಗಿದ್ದಾರೆ. ಇದರಲ್ಲಿ ಇಬ್ಬರು ಬಾಲಕಿಯರು ಸೇರಿದ್ದಾರೆ.

ಶ್ರೇಯಸ್‌ ಹರೀಶ್‌, ಅಲೀನಾ ಶೇಖ್‌, ಅನಸ್ತ್ಯ ಪೋಲ್‌ ಮತ್ತು ದೇವ್‌ ಅಗಸ್ತ್ಯ (ಕಾಯ್ದಿರಿಸಿದ ಚಾಲಕ) ಬೆಂಗಳೂರಿನಿಂದ ಆಯ್ಕೆಯಾದ ರೈಡರ್‌ಗಳು. ಬೆಂಗಳೂರಿನ ಮೆಕೋ ಕೋರ್ಪಿಯಾ ಟ್ರ್ಯಾಕ್‌ನಲ್ಲಿ ಆಯ್ಕೆ ಟ್ರಯಲ್ಸ್‌ ನಡೆದಿತ್ತು. ನಂದನ್‌ ಮಹೇಂದ್ರನ್‌ (ಚೆನ್ನೈ), ರಕ್ಷಿತ್‌ ದೇವ್‌ (ಚೆನ್ನೈ), ಜೀನೇಂದ್ರ ಸಂಗವೆ (ಕೊಲ್ಲಾಪುರ), ಕಬಿಲೃಶ್‌ ಆರ್‌. (ಚೆನ್ನೈ), ರೆಹಬಾರ್‌ ಇಸ್ಲಾಂ ಬಕ್ತೂ (ದಿಲ್ಲಿ) ದೇಶದ ಇತರ ಭಾಗಗಳಿಂದ ಆಯ್ಕೆಯಾದ ರೈಡರ್‌ಗಳು.

ಎಫ್‌ಐಎಂ ಏಷ್ಯಾ ವಿಭಾಗದ ಉಪಾಧ್ಯಕ್ಷ ಬಿ.ಎಸ್‌. ಸುಜಿತ್‌ ಕುಮಾರ್‌, ಮಾಜಿ ರಾಲಿ ಚಾಂಪಿಯನ್‌ ದೇಬರಾಜ್‌, ಒಹ್ವೆಲ್‌ ಇಂಡಿಯಾದ ಪ್ರಾಡಕ್ಟ್‌ ಮ್ಯಾನೇಜರ್‌ ಮಾರ್ಕೋ ರೊಸೆಟ್ಟೋ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಜಾಗತಿಕ ದ್ವಿಚಕ್ರ ರೇಸ್‌ನ ಪ್ರಧಾನ ಸಂಸ್ಥೆಯಾಗಿರುವ ಎಫ್‌ಐಎಂ 2021ರಲ್ಲಿ ಮಿನಿಜಿಪಿ ಸರಣಿಯನ್ನು ಆರಂಭಿಸಿತ್ತು. ವಿಶ್ವಸರಣಿಯು ನವೆಂಬರ್‌ನಲ್ಲಿ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆಯಲಿದೆ.

ಈ ಸರಣಿಯಲ್ಲಿ ಪಾಲ್ಗೊಳ್ಳಲು 10-14ವರ್ಷ ವಯೋಮಿತಿಯ ರೈಡರ್‌ಗಳಿಗೆ ಮಾತ್ರ ಅವಕಾಶವಿರುತ್ತದೆ. ಇಲ್ಲಿ ಅಗ್ರ ಸ್ಥಾನ ಪಡೆದ ಇಬ್ಬರು ರೈಡರ್‌ಗಳು ಸ್ಪೇನ್‌ನಲ್ಲಿ ನಡೆಯುವ ವಿಶ್ವ ಸರಣಿ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

“ಭಾರತದಲ್ಲಿ ಎಫ್‌ಐಎಂ ಮಿನಿಜಿಪಿ ವಿಶ್ವಸರಣಿ ನಡೆಯುತ್ತಿರುವುದು ಖುಷಿಯ ವಿಚಾರ. ಹಲವಾರು ಪ್ರಯತ್ನಗಳ ಬೆಂಗಳೂರಿನಲ್ಲಿ ನಡೆಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ನಾವು ಒಬ್ಬ ಕಾಯ್ದಿರಿಸಿದ ರೈಡರ್‌ ಸೇರಿದಂತೆ ಎಂಟು ರೈಡರ್‌ಗಳನ್ನು ತಜ್ಞರ ಮೂಲಕ ಆಯ್ಕೆಮಾಡಲಾಗಿದೆ. ಮುಂದಿನ ಒಂದು ವಾರದಲ್ಲಿ ರೈಡರ್‌ಗಳ ಸಂಖ್ಯೆ 15ಕ್ಕೆ ಏರಲಿದೆ. ಎಲ್ಲ ಚಟುವಟಿಕೆಗಳ ನಡುವೆ ಎಫ್‌ಎಂಎಸ್‌ಸಿಐ ನಮಗೆ ಅವಕಾಶ ಕಲ್ಪಿಸಿದೆ,” ಎಂದು ಒಹ್ವೆಲ್‌  ಇಂಡಿಯಾದ ಪ್ರೊಡಕ್ಟ್‌ ಮ್ಯಾನೇಜರ್‌  ಮಾರ್ಕೋ ರೊಸೆಟ್ಟೋ ಹೇಳಿದ್ದಾರೆ.

ಎಫ್‌ಐಎಂ ಮಿನಿಜಿಪಿ ವಿಶ್ವ ಸರಣಿ 2022ರ ಮೊದಲ ಸುತ್ತಿನ ಸ್ಪರ್ಧೆಗಳು ಬೆಂಗಳೂರಿನಲ್ಲಿರುವ ಮಿಕೊ ಕಾರ್ಟೋಪಿಯಾ ಇಲ್ಲಿ ಜುಲೈ 23-24ರ ವರೆಗೆ ನಡೆಯಲಿದೆ. ನಂತರದ ಎರಡು ಸುತ್ತುಗಳು ಆಗಸ್ಟ್‌ 20-21 ರಂದು ಹೈದರಾಬಾದ್‌ನ ಚಿಕಾನೆ ಸರ್ಕ್ಯುಟ್‌ನಲ್ಲಿ ನಡೆಯಲಿದೆ. ಆಗಸ್ಟ್‌ 27-28 ರಂದು ಹೈದರಾಬಾದ್‌ನಲ್ಲಿ ಮೂರನೇ ಸುತ್ತಿನ ಸ್ಪರ್ಧೆಗಳು ನಡೆಯಲಿವೆ. ಸೆಪ್ಟಂಬರ್‌ 10-11 ರಂದು ಬೆಂಗಳೂರಿನಲ್ಲಿ ನಾಲ್ಕನೇ ಸುತ್ತು ಮತ್ತು ಸೆ. 24-25ರಂದು ಐದನೇ ಸುತ್ತಿನ ಸ್ಪರ್ಧೆ ನಡೆಯಲಿದೆ.

ಆಯ್ಕೆಗೊಂಡ ರೈಡರ್‌ಗಳು ಒಹ್ವೆಲ್‌ ಜಿಪಿ-೦ 160 ಮೆಷಿನರಿ (ಮಿನಿ ಬೈಕ್ಸ್‌)ನಲ್ಲಿ ಸ್ಪರ್ಧಿಸಲಿದ್ದಾರೆ. ಇದು ಇಟಲಿಯಲ್ಲಿ ನಿರ್ಮಾಣವಾಗಿರುತ್ತದೆ. ಭಾರತ ಸೇರಿದಂತೆ ಆಸ್ಟ್ರೇಲಿಯಾ, ಆಸ್ಟ್ರೀಯಾ, ಇಂಡೋನೇಷ್ಯಾ ಮತ್ತು ಕತಾರ್‌ ದೇಶಗಳು ಪಾಲ್ಗೊಳ್ಳಲಿವೆ. ಫ್ರಾನ್ಸ್‌, ಇಟಲಿ, ಐರ್ಲೆಂಡ್‌, ಮಲೇಷ್ಯಾ, ನೆರ್ಲೆಂಡ್ಸ್‌, ದಕ್ಷಿಣ ಅಮೆರಿಕ, ಪೋರ್ಚುಗಲ್‌, ಸ್ಪೇನ್‌, ಇಂಗ್ಲೆಂಡ್‌ ಮತ್ತು ಅಲ್ಪಡ-ಆಡ್ರಿಯಾ ದೇಶಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲಿವೆ.

Related Articles