Thursday, September 12, 2024

ಪ್ರೊ ಕಬಡ್ಡಿಗೆ ಬಂದ ಹಳ್ಳಿ ಹುಡುಗ ನಿತೇಶ್

ಸೋಮಶೇಖರ್ ಪಡುಕರೆ ಬೆಂಗಳೂರು

ರಾಮನಗರ ಜಿಲ್ಲೆಯ ಚೆನ್ನಪಟ್ಟಣದ ನಿತೇಶ್ ಗ್ರಾಮೀಣ ಕಬಡ್ಡಿ ಆಟಗಾರ. ಆದರೆ ಡಿಫೆನ್ಸ್ ವಿಭಾಗದಲ್ಲಿ ನಿಂತರೆಂದರೆ ರೈಡರ್ ಅಂಕ ಗಳಿಸಲು ಹರಸಾಹಸ ಪಡಬೇಕು. ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡದ ಪರ ಉತ್ತಮ ರೀತಿಯಲ್ಲಿ ಆಡಿದ್ದಕ್ಕಾಗಿ ಈ ಹಳ್ಳಿ ಆಟಗಾರನಿಗೆ ಈಗ ಪ್ರೋ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಪರ ಆಡುವ ಅವಕಾಶ.

ಎಂಟನೇ ತರಗತಿಯೇಂದಲೇ ಕಬಡಲ್ಲಿಯಲ್ಲಿ ತನ್ನನ್ನು ತೊಡಗಿಸಿಕೊಂಡ ನಿತೇಶ್ ಬಿ.ಆರ್. ಅವರಿಗೆ ಪ್ರೋತ್ಸಾಹ ನೀಡಿದವರು ಬೆಂಗಳೂರಿನ ವಿಜಯ ನಗರ ಕ್ಲಬ್‌ನ ನಾಗರಾಜ್. ಹಲವಾರು ಕಬಡ್ಡಿ ಆಟಗಾರರಿಗೆ ಜೀವ ತುಂಬಿದ್ದ ನಾಗರಾಜ್ ಅವರು ನಿತೇಶ್ ಅವರನ್ನು ಉತ್ತಮ ಕಬಡ್ಡಿ ಆಟಗಾರರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ನಂತರ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ್ ಹಾಗೂ ಬಿ.ಸಿ. ಸುರೇಶ್ ಅವರಲ್ಲಿ ಪಳಗಿದ ನಟೇಶ್ ಹಲವು ಬಾರಿ ರಾಷ್ಟ್ರೀಯ ಕಬಡ್ಡಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಉತ್ತಮ ಡಿಫೆನ್ಸ್ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಕಳೆದ ವರ್ಷ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ನಿತೇಶ್ ತೋರಿದ ಉತ್ತಮ ಸಾಧನೆಯನ್ನು ಗಮನಿಸಿ ರಾಷ್ಟ್ರೀಯ ಕ್ಯಾಂಪ್‌ನಲ್ಲಿ ತರಬೇತಿ ಪಡೆಯುವ ಅವಕಾಶ ಸಿಕ್ಕಿತು. ಆದರೆ ಅನಭವಿ ಆಟಗಾರರೇ ಹೆಚ್ಚಿದ್ದ ಕಾರಣ ನಿತೇಶ್‌ಗೆ ಹಿರಿಯರ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಉತ್ತಮ ಸಾಧನೆಯ ಹಿನ್ನೆಲೆಯಲ್ಲಿ ಬೆಂಗಳೂರು ಬುಲ್ಸ್ ತಂಡ ಹರಾಜಿನಲ್ಲಿ ನಿತೇಶ್‌ಗೆ ಉತ್ತಮ ಬೆಲೆ ನೀಡಿ ಖರೀದಿಸಿದೆ.
ಕಂಡಕ್ಟರ್ ಹುದ್ದೆ ತೊರೆದ ಆಟಗಾರ
ಬೆಂಗಳೂರಿನ ಬಿಎಂಟಿಸಿ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿದ್ದ ನಿತೇಶ್‌ಗೆ ಆಭ್ಯಾಸಕ್ಕಾಗಿ ಸಮಯ ಸಿಗುತ್ತಿರಲಿಲ್ಲ. ಕಬಡ್ಡಿ ಆಡಲು ಬಿಎಂಟಿಸಿ ಪ್ರೋತ್ಸಾಹವನ್ನೂ ನೀಡುತ್ತಿರಲಿಲ್ಲ. ಈ ಕಾರಣಕ್ಕಾಗಿ ಕಂಡಕ್ಟರ್ ಉದ್ಯೋಗವನ್ನು ತೊರೆದು ಕಬಡ್ಡಿ ಅಭ್ಯಾಸಕ್ಕೆ ತನ್ನ ಸಮಯವನ್ನು ಮೀಸಲಿಟ್ಟರು. ಇದರಿಂದಾಗಿ ರಾಷ್ಟ್ರಮಟ್ಟದಲ್ಲಿ ಮಿಂಚಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅವಕಾಶ ಪಡೆಯಲು ಸಾಧ್ಯವಾಯಿತು.

ಫಿಟ್ನೆಸ್ ಗುರು ಮಣಿ

ಯಾವುದೇ ಆಟಗಾರರಿಗೆ ಫಿಟ್ನೆಸ್ ಮುಖ್ಯ. ಇದರಿಂದ ಆಟದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ನಿತೇಶ್ ಕೂಡ ಬೆಂಗಳೂರಿನ ಉತ್ತಮ ಫಿಟ್ನೆಸ್ ಟ್ರೈನರ್ ಹಾಗೂ ಅಥ್ಲೀಟ್ ಎಚ್.ಎಂ. ಮಣಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ‘ಗ್ರಾಮೀಣ ಪ್ರದೇಶದಿಂದ ಬಂದು ಕಬಡ್ಡಿ ಮೂಲಕವೇ ಬದುಕನ್ನು ಕಟ್ಟಿಕೊಂಡ ನಿತೇಶ್ ಉತ್ತಮ ಆಟಗಾರ. ಡಿಫೆನ್ಸ್ ವಿಭಾಗದಲ್ಲಿ ಭದ್ರಕೋಟೆ ಇದ್ದಂತೆ. ಈ ಬಾರಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅವರು ಉತ್ತಮ ರೀತಿಯಲ್ಲಿ ಆಡುತ್ತಾರೆಂಬ ನಂಬಿಕೆ ಇದೇ, ಅದಕ್ಕೆ ತಕ್ಕಂತೆ ಅವರು ತಮ್ಮ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ,‘ ಎಂದು ಮಣಿ ಹೇಳಿದ್ದಾರೆ.

Related Articles