Saturday, April 20, 2024

ನೆಟ್‌ಬಾಲ್‌ ಹೀರೋ, ಈಗ ಸೇನೆಯ ಕೋಬ್ರಾ ಕಮಾಂಡೋ

 ಸೋಮಶೇಖರ್‌ ಪಡುಕರೆ, sportsmail

ವಿಶ್ವವಿದ್ಯಾಲಯ ಮಟ್ಟದಲ್ಲಿ ನೆಟ್‌ಬಾಲ್‌ ಕ್ರೀಡೆಯಲ್ಲಿ ತೊಡಗಿಸಿಕೊಂಡು, ತಮ್ಮದೇ ಆದ ನೆಟ್‌ಬಾಲ್‌ ತಂಡವನ್ನು ಕಟ್ಟಿ, ಯುವಕರಿಗೆ ತರಬೇತಿನೀಡಿ, ಬೆಳಗಾವಿ ಜಿಲ್ಲಾ ನೆಟ್‌ಬಾಲ್‌ ಸಂಸ್ಥೆಯ ಜವಾಬ್ದಾರಿ ಹೊತ್ತ ಯುವಕ ಸೋಮವಾರ ಭಾರತ ಸೇನೆಯಲ್ಲಿ ಕಮಾಂಡೊ ಆಗಿ ತರಬೇತಿ ಮುಗಿಸಿ, ಕಾಶ್ಮೀರಕ್ಕೆ ಹೊರಟ ಕ್ಷಣ ಕ್ರೀಡಾಭಿಮಾನಿಗಳೆಲ್ಲ ಹೆಮ್ಮೆಪಡುವಂಥದ್ದು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ರಾಕೇಶ್‌ ಪಾಟೀಲ್‌ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಪ್ರತಿಭಾವಂತ ವಿದ್ಯಾರ್ಥಿ. ನೆಟ್‌ಬಾಲ್‌ನಲ್ಲಿ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯದಲ್ಲಿ ಆಡಿ, 2017ರಲ್ಲಿ ಸೇನೆಗೆ ಭರ್ತಿಗೊಂಡವರು. ಉತ್ತಮ ದೈಹಿಕ ಕ್ಷಮತೆಯನ್ನು ಹೊಂದಿದ್ದ ರಾಕೇಶ್‌ ಅವರನ್ನು ಸೇನೆಯ ಅಧಿಕಾರಿಗಳು ಕಮಾಂಡೋ ತರಬೇತಿಗೆ ಆಯ್ಕೆ ಮಾಡಿದರು. ಶಿಸ್ತಿನಲ್ಲಿ ತರಬೇತಿ ಪಡೆದ ರಾಕೇಶ್‌ ಪಾಟೀಲ್‌ ಈಗ ಭಾರತ ಸೇನೆಯಲ್ಲಿ ಜಂಗಲ್‌ ವಾರಿಯರ್‌, ಕೋಬ್ರಾ ಕಮಾಂಡೋ ಆಗಿ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ.

ಕಾಶ್ಮೀರಕ್ಕೆ ಹೊರಡುವ ಮುನ್ನ sportsmail  ಜತೆ ಮಾತನಾಡಿದ ರಾಕೇಶ್‌ ಪಾಟೀಲ್‌, “ಕ್ರೀಡೆಯಲ್ಲಿ ತೊಡಗಿಕೊಂಡ ಕಾರಣ ಇದೆಲ್ಲ ಸಾಧ್ಯವಾಯಿತು. ಬರೇ ಓದು ನಮ್ಮನ್ನು ಪರಿಪೂರ್ಣರನ್ನಾಗಿ ಮಾಡುವುದಿಲ್ಲ. ಇದುವರೆಗೂ ಸೇನೆಯಲ್ಲಿ ನೆಟ್‌ಬಾಲ್‌ ಕ್ರೀಡೆ ಇರಲಿಲ್ಲ. ಈಗ ಸೇರ್ಪಡೆ ಮಾಡಲು ಯೋಚಿಸುತ್ತಿದ್ದಾರೆ. ತರಬೇತಿ ಮುಗಿಸಿದ ನಾವೀಗ ಕಾಶ್ಮೀರಕ್ಕೆ ತರಳುತ್ತಿದ್ದೇವೆ.

ನಮ್ಮನ್ನು ಹುರಿದುಂಬಿಸಲು ಉನ್ನತ ಅಧಿಕಾರಿಗಳು ಬಂದಿದ್ದಾರೆ. ಕಮಾಂಡೋ ಕೆಲಸವೆಂದರೆ ಕಠಿಣವಾಗಿರುತ್ತದೆ ಎಂದು ಕೇಳಿದ್ದೆ, ಆದರೆ ದೇಶ ಎಂದಾಗ ಆ ಕಾಠಿಣ್ಯ ಎಲ್ಲವೂ ದೂರವಾಗಿದೆ. ಕನ್ನಡಿಗನಾಗಿ ಸೇನೆಯಲ್ಲಿ ಕೋಬ್ರಾ ಕಮಾಂಡೋ ಆಗಿ ಕಾರ್ಯನಿರ್ವಹಿಸಲು ಹೆಮ್ಮೆ ಅನಿಸುತ್ತಿದೆ,” ಎಂದು ಹೇಳಿದರು.

ನಿಪ್ಪಾಣಿಯ ಸಕ್ಕರೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ರಾಜೇಂದ್ರ ಪಾಟೀಲ್‌ ಹಾಗೂ ಸುಗಂಧ ಪಾಟೀಲ್‌ ಅವರ ಪುತ್ರನಾಗಿರುವ ರಾಕೇಶ್‌, ಬೆಳಗಾವಿಯಲ್ಲಿ ನೆಟ್‌ಬಾಲ್‌ ಕ್ರೀಡೆಯನ್ನು ಜನಪ್ರಿಯಗೊಳಿಸಿದವರು. ಯುವಕರನ್ನು ಒಟ್ಟು ಸೇರಿಸಿ, ಅವರಿಗೆ ತರಬೇತಿ ನೀಡಿ ಆ ವಲಯದಲ್ಲಿ ತಂಡವನ್ನು ಕಟ್ಟಿದವರು.

ಬೆಳಗಾವಿ ಜಿಲ್ಲಾ ನೆಟ್‌ಬಾಲ್‌ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದವರು. ಜತೆಯಲ್ಲಿ ಉತ್ತಮ ವಾಲಿಬಾಲ್‌ ಆಟಗಾರರಾಗಿರುವ ರಾಕೇಶ್‌ ಸ್ಥಳೀಯ ವಾಲಿಬಾಲ್‌ ತಂಡದ ಉತ್ತಮ ಅಟ್ಯಾಕರ್‌ ಕೂಡ. ಕ್ರಿಕೆಟ್‌ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಸ್ಥಳೀಯ ತಂಡಗಳ ಪರ ಆಡುತ್ತಿದ್ದರು.

ಹಿರಿಯ ಆಟಗಾರರೇ ಮಾದರಿ:

ಕ್ರೀಡೆ ಕೇವಲ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಮಾತ್ರವಲ್ಲ ಅದು ಬದುಕನ್ನೂ ರೂಪಿಸುತ್ತದೆ ಎಂಬುದಕ್ಕೆ ನಮ್ಮ ಮುಂದೆ ಹಲವಾರು ಉದಾಹರಣೆಗಳಿವೆ. ರಾಕೇಶ್‌ ಪಾಟೀಲ್‌ಗೆ ನೆಟ್‌ಬಾಲ್‌ ತಂಡದಲ್ಲಿದ್ದ ಹಿರಿಯ ಆಟಗಾರರು ಸೇನೆ ಮತ್ತು ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವದೇ ಸ್ಫೂರ್ತಿಯಾಯಿತು. ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡುತ್ತಿರುವ ಶಿವರಾಜ್‌ ಭಿರ್ಡೆ, ಸೇನೆಯಲ್ಲಿ ಲೆಫ್ಟಿನೆಂಟ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅಕ್ಷಯ್‌ ಉಮೇಶ್‌ ಗೌರವ್‌ ಮತ್ತು ಕಿರಣ್‌ ಶಿಗ್ಗಾಂವ್‌ ಇವರೆಲ್ಲ ಬೆಳಗಾವಿಯ ನೆಟ್‌ಬಾಲ್‌ ಸಂಸ್ಥೆಯಲ್ಲಿ ಆಡಿದ್ದ ಆಟಗಾರರು.

“ನಮ್ಮ ಹಿರಿಯ ಆಟಗಾರರು ದೇಶದ ರಕ್ಷಣೆಯ ಕೆಲಸದಲ್ಲಿ ಸೇನೆ ಸೇರಿಕೊಂಡಿದ್ದು, ಪೊಲೀಸ್‌ ಇಲಾಖೆಯಲ್ಲಿ ಜವಾಬ್ದಾರಿಯ ಹುದ್ದೆಯಲ್ಲಿದ್ದುದು ನನಗೆ ಪ್ರೇರಣೆಯಾಯಿತು. ಅವರ ಸ್ಫೂರ್ತಿಯೇ ನನ್ನನ್ನು ಇಂದು ಕಮಾಂಡೋವನ್ನಾಗಿ ಮಾಡಿದೆ. ನಾನು ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಇಂದು ಇಲ್ಲಿಗೆ ತಲುಪಲು ಸಾಧ್ಯವಾಯಿತು. ಓದಿನ ಜೊತೆಯಲ್ಲಿ ಕ್ರೀಡೆ ಅಥವಾ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಅದರಲ್ಲಿ ವೃತ್ತಿಪರತೆಯನ್ನು ಕಂಡುಕೊಂಡಲ್ಲಿ ಬದುಕಿನ ಹಾದಿ ಸುಗಮವಾಗಿರುತ್ತದೆ,” ಎನ್ನುತ್ತಾರೆ ಯೋಧ ರಾಕೇಶ್‌ ಪಾಟೀಲ್‌.

ಜಂಗಲ್‌ ವಾರಿಯರ್ಸ್‌ ಕೋಬ್ರಾ (Commando Battalions for Resolute Action, (CoBRA)  ಕಮಾಂಡೋ ಅಗಿ ಸೇನೆಯಲ್ಲಿ ಕಾರ್ಯನಿರ್ವಹಿಸಲಿರುವ ನೆಟ್‌ಬಾಲ್‌ ಆಟಗಾರ 28 ವರ್ಷದ ರಾಕೇಶ್‌ ಪಾಟೀಲ್‌ ಅವರಿಗೆ ಕರ್ನಾಟಕ ನೆಟ್‌ಬಾಲ್‌ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ, ಭಾರತೀಯ ನೆಟ್‌ಬಾಲ್‌ ಸಂಸ್ಥೆಯ ರಾಷ್ಟ್ರೀಯ ಅಭಿವೃದ್ಧಿ ಸಮನ್ವಯಕಾರ ಡಾ, ಗಿರೀಶ್‌ ಸಿ. ಅವರು ಅಭಿನಂದನೆ ಸಲ್ಲಿಸಿದ್ದಾರೆ.

Related Articles