Thursday, October 10, 2024

ಶತಕದೊಂದಿಗೆ ರಾಜ್ಯ ಕ್ರಿಕೆಟ್‌ಗೆ ಕಾಲಿಟ್ಟ ಪುಟ್ಟ ಡ್ಯಾನಿಯಲ್

ಸೋಮಶೇಖರ್‌ ಪಡುಕರೆ, sportsmail

“ಬೆಳೆವಸಿರಿ ಮೊಳಕೆಯಲ್ಲಿ” ಎಂಬಂತೆ ಕಳೆದ ಐದು ವರ್ಷಗಳಿಂದ ನಿರಂತರ ತಪಸ್ಸಿನಂತೆ ಕ್ರಿಕೆಟ್‌ ಅಭ್ಯಾಸದಲ್ಲಿ ತೊಡಗಿಕೊಂಡು, ಅನುಭವಿ ಆಟಗಾರನಂತೆ ಬ್ಯಾಟ್‌ ಬೀಸುತ್ತ, ರನ್‌ ಸುರಿಮಳೆಗರೆಯುತ್ತಿದ್ದ ಪುಟ್ಟ ಹುಡುಗ ಡ್ಯಾನಿಯಲ್‌ ಸೆಬಾಸ್ಟಿಯನ್‌ ಕೊನೆಗೂ ತಾನಾಡಿದ ಲೀಗ್‌ನ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ರಾಜ್ಯ ಕ್ರಿಕೆಟ್‌ಗೆ ದಿಟ್ಟ ಹೆಜ್ಜೆ ಇಟ್ಟಿದ್ದಾನೆ.

12 ವರ್ಷದ ಡ್ಯಾನಿಯಲ್‌ ಕೆಸ್‌ಸಿಎ 14 ವರ್ಷ ವಯೋಮಿತಿಯ ಲೀಗ್‌ ಪಂದ್ಯದಲ್ಲಿ ಕೇಂಬ್ರಿಡ್ಜ್‌ ತಂಡದ ಪರ ಆರಂಭಿಕ ಆಟಗಾರನಾಗಿ ಅಂಗಣಕ್ಕಿಳಿದು 125 ರನ್‌ ಸಿಡಿಸಿ ತಾನೊಬ್ಬ ಭವಿಷ್ಯದ ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.

ಚಿಕ್ಕಮಗಳೂರು ಮೂಲದ, ಈಗ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ಸೆಬಾಸ್ಟಿಯನ್‌ ಜೇಮ್ಸ್‌ ಮತ್ತು ಫಾಮಿ ಜೇಮ್ಸ್‌ ಅವರ ಮುದ್ದಿನ ಮಗ ಡ್ಯಾನಿಯಲ್‌ ಮೊದಲು ಕ್ರಿಕೆಟ್‌ ಆರಂಭಿಸಿದ್ದು, ಬೆಂಗಳೂರು ಇಂಡೋರ್‌ ಕ್ರಿಕೆಟ್‌ ಕ್ಲಬ್‌ (ಬಿಐಸಿಸಿ)ನಲ್ಲಿ.

ಪ್ರತಾಪ್‌ ಅವರ ಗರಡಿಯಲ್ಲಿ ಪಳಗಿದ ಡ್ಯಾನಿಯಲ್‌ ಚಿಕ್ಕ ವಯಸ್ಸಿನಲ್ಲೇ ಎಲ್ಲ ರೀತಿಯ ಎಸೆಗಳನ್ನು ಎದುರಿಸಿ, ಅವುಗಳಿಗೆ ಯಾವ ರೀತಿಯಲ್ಲಿ ಬ್ಯಾಟಿಂಗ್‌ ಮಾಡಬೇಕೆಂದು ಅರಿತುಕೊಂಡಿದ್ದ, ನಂತರ ದೇಶದ ಪ್ರತಿಷ್ಠಿತ ಕ್ರಿಕೆಟ್‌ ಅಕಾಡೆಮಿ ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್‌ (ಕೆಐಒಸಿ)ನ ಪ್ರಧಾನ ಕೋಚ್‌ ಇರ್ಫಾನ್‌ ಸೇಟ್‌ ಅವರಲ್ಲಿ ತರಬೇತಿ ಪಡೆದು ಒಬ್ಬ ಉತ್ತಮ ಬ್ಯಾಟ್ಸ್‌ಮನ್‌ನಲ್ಲಿ ಇರಬೇಕಾದ ಎಲ್ಲ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಂಡ.

ಕರ್ನಾಟಕ ರಣಜಿ ಕ್ರಿಕೆಟ್‌ ತಂಡದ ಅಪ್ಪಟ ಅಭಿಮಾನಿಯಾಗಿರುವ ಜೇಮ್ಸ್‌ ಸೆಬಾಸ್ಟಿಯನ್‌ ಮಗ ಡ್ಯಾನಿಯಲ್‌ನ ಕ್ರಿಕೆಟ್‌ಗಾಗಿ ವೃತ್ತಿ ಬದುಕಿನ ನಡುವೆ ಹಲವು ರೀತಿಯ ತ್ಯಾಗ ಮಾಡಿದ್ದಾರೆ. ಡ್ಯಾನಿಯಲ್‌ ಬ್ಯಾಟಿಂಗ್‌ನ ಶೈಲಿ ಕಂಡು ಕರ್ನಾಟಕದ ಹಿರಿಯ ಆಟಗಾರರು ಮೆಚ್ಚಿ ಬೆನ್ನು ತಟ್ಟಿದ್ದಾರೆ. ಈತ ಕರ್ನಾಟಕ ಮಾತ್ರವಲ್ಲ, ಭಾರತ ಕ್ರಿಕೆಟ್‌ ತಂಡದ ಆಸ್ತಿ ಎಂದು ಹೇಳಿದ್ದಾರೆ. ಇವೆಲ್ಲ ಪುಟ್ಟ ಹುಡುಗ ಡ್ಯಾನಿಯಲ್‌ಗೆ ಏನೂ ಗೊತ್ತಾಗಿಲ್ಲ, ಆತ ತಾನಾಯಿತು ತನ್ನ ಬ್ಯಾಟಿಂಗ್‌ ಆಯಿತು ಎಂಬಂತೆ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡ.

 

ತರಬೇತಿ ನೀಡಿದ ಇರ್ಫಾನ್‌ ಸೇಟ್‌ ಮಾತ್ರವಲ್ಲ, ಕರ್ನಾಟಕದ ಹಿರಿಯ ಆಟಗಾರರಿಗೆ ತರಬೇತಿ ನೀಡಿದ ತರಬೇತುದಾರರೂ ಡ್ಯಾನಿಯಲ್‌ ಶತಕ ಸಿಡಿಸಿ, ರಾಜ್ಯ ಕ್ರಿಕೆಟ್‌ಗೆ ಕಾಲಿಟ್ಟ ಎಂಬ ಸುದ್ದಿ ಕೇಳಿ ಶುಭ ಹಾರೈಸಿದ್ದಾರೆ. ರಾಹುಲ್‌ ದ್ರಾವಿಡ್‌, ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌, ವಿವಿಯನ್‌ ರಿಚರ್ಡ್ಸ್‌, ಕೆ.ಎಲ್‌. ರಾಹುಲ್‌ ಅವರ ಬ್ಯಾಟಿಂಗ್‌ ವೀಡಿಯೋಗಳನ್ನು ನೋಡಿ, ಅವರಂತೆ ತಾಳ್ಮೆಯನ್ನು ಮೈಗೂಡಿಸಿಕೊಂಡಿರುವ ಡ್ಯಾನಿಯಲ್‌, ಬ್ಯಾಟಿಂಗ್‌ ಶೈಲಿಯನ್ನು ಕಂಡಾಗ  ಆತನ ಹೊಡೆತಗಳಲ್ಲಿ ತಪ್ಪಿನ ಹೆಜ್ಜೆ ಕಾಣುತ್ತಿಲ್ಲ. ಇನ್ನೂ ಉತ್ತಮ ರೀತಿಯಲ್ಲಿ ತರಬೇತಿ ಸಿಕ್ಕರೆ, ಇದೇ ಹೆಜ್ಜೆಯಲ್ಲಿ ಆಟ ಮುಂದುವರಿದರೆ ರಾಜ್ಯ ಮಾತ್ರವಲ್ಲ ರಾಷ್ಟ್ರ ತಂಡದ ಕದ ತಟ್ಟುವ ಸಾಮರ್ಥ್ಯ ಹೊಂದಬಲ್ಲ ಆಟಗಾರ ಡ್ಯಾನಿಯಲ್‌.

ತಂದೆಯ ಕ್ರಿಕೆಟ್‌ ಪ್ರೀತಿ:

ಕರ್ನಾಟಕದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡ ಆಡುವ ಯಾವುದೇ ಪಂದ್ಯವಿರಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಜೇಮ್ಸ್‌ ಸೆಬಾಸ್ಟಿಯನ್‌ ಹಾಗೂ ಅವರ ಗೆಳೆಯರ ಪಡೆ ಹಾಜರಿರುತ್ತಿತ್ತು. ರಾಜ್ಯದ ಆಟಗಾರರನ್ನು ಪ್ರೋತ್ಸಾಹಿಸುವ ಅವರ ಕ್ರಿಕೆಟ್‌ ಪ್ರೀತಿಯೇ ಡ್ಯಾನಿಯಲ್‌ನಂಥ ಕ್ರಿಕೆಟಿಗನನ್ನು ಹುಟ್ಟುಹಾಕಲು ಕಾರಣವಾಯಿತು.

“ಬ್ಯಾಟ್ಸ್‌ಮನ್‌ ಒಬ್ಬ ಉತ್ತಮ ರೀತಿಯಲ್ಲಿ ಆಡಿ ಪಂದ್ಯ ಜಯಿಸಿಕೊಟ್ಟಾಗ ಅಂಗಣದಲ್ಲಿ ಬಂದು ಕುಳಿತು ಪಂದ್ಯ ವೀಕ್ಷಿಸಿರುವುದಕ್ಕೆ ಸಾರ್ಥಕ ಎನಿಸುತ್ತಿತ್ತು. ಕಳೆದ ಐದು ವರ್ಷಗಳಿಂದ ಡ್ಯಾನಿಯಲ್‌ ಆಡುವುದನ್ನು ಗಮನಿಸುತ್ತಿದ್ದೆ, ಗೆಳೆಯರು ಮತ್ತು ಹಿರಿಯ ಆಟಗಾರರು  ಆತನ ಬ್ಯಾಟಿಂಗ್‌ ಬಗ್ಗೆ ಆಡುವ ಧನಾತ್ಮಕ ಮಾತು ನನ್ನಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿತು. ಡ್ಯಾನಿಯಲ್‌ ಕ್ರಿಕೆಟ್‌ ಬದುಕಿಗೆ ಶ್ರಮಿಸಬೇಕು ಎಂದೆನಿಸಿತು. ಎಷ್ಟೋ ಬಾರಿ ಕೆಲಸದ ಒತ್ತಡವನ್ನು ಬದಿಗಿಟ್ಟು ಆತನ ಕ್ರಿಕೆಟ್‌ ಆಟವನ್ನು ವೀಕ್ಷಿಸುತ್ತಿದ್ದೆ. ಇಂದು ಕೂಡ ಆತ ಅಂಗಣಕ್ಕಿಳಿದಾಗ ಅಲ್ಲಿದ್ದೆ. ಆರಂಭಿಕ ಆಟಗಾರನಾಗಿ ಶತಕ ಸಿಡಿಸಿದ್ದು ಖುಷಿ ಕೊಟ್ಟಿದೆ. ಆತ ಕಲಿಯಬೇಕಾಗಿರುವುದು ಇನ್ನೂ ಇದೆ. ಈ ಪುಟ್ಟ ಹೆಜ್ಜೆ ಮುಂದೆ ದೊಡ್ಡದಾಗಿ ಬೆಳೆದು, ಆತ ಉತ್ತಮ ಕ್ರಿಕೆಟಿಗನಾಗಲಿ ಎಂಬುದೇ ಹಾರೈಕೆ,” ಎಂದು ಜೇಮ್ಸ್‌ ಸೆಬಾಸ್ಟಿಯನ್‌ ಹೇಳಿದರು.

ತಮ್ಮನ ಆಟ ನೋಡಿ ಕ್ರಿಕೆಟಿಗಳಾದ ಅಕ್ಕ!!

ಸಾಮಾನ್ಯವಾಗಿ ಅಣ್ಣ ಅಥವಾ ಅಕ್ಕನ ಸಾಧನೆ ನೋಡಿ ತಮ್ಮ ಅಥವಾ ತಂಗಿ ಆ ಹಾದಿಯನ್ನು ಅನುಸರಿಸುವುದಿದೆ, ಆದರೆ ಜೇಮ್ಸ್‌ ಸೆಬಾಸ್ಟಿಯನ್‌ ಅವರ ಮನೆಯಲ್ಲಿ ಕ್ರಮ ಅದಲುಬದಲಾಗಿದೆ. ತಮ್ಮ ಡ್ಯಾನಿಯಲ್‌ ಕ್ರಿಕೆಟ್‌ ಆಡುವುದನ್ನು ನೋಡಿ ಆತನ ಅಕ್ಕ ಆಂಜೆಲಾ ಜೇಮ್ಸ್‌ ಕ್ರಿಕೆಟ್‌ಗೆ ಕಾಲಿಟ್ಟಿದ್ದು ವಿಶೇಷ, ಜೇಮ್ಸ್‌ ಅವರ ಮಗಳು ಆಂಜೆಲಾ, ತಮ್ಮನು ತರಬೇತಿ ಹೋಗುತ್ತಿರುವುದನ್ನು ಗಮನಿಸಿ ಆತನಂತೆ ತಾನು ಕೂಡ ಕ್ರಿಕೆಟ್‌ ಆಟಗಾರ್ತಿ ಆಗಬೇಕೆಂದು ಬಯಸಿದಳು. ಅದರಂತೆ ಜೇಮ್ಸ್‌ ಮಗಳ ಆಸೆಗೆ ಪ್ರೋತ್ಸಾಹ ನೀಡಿದರು. ಉತ್ತಮ ವೇಗದ ಬೌಲರ್‌ ಆಗಿರುವ ಆಂಜೆಲಾ ಈಗಾಗಲೇ 16 ಮತ್ತು 19 ವರ್ಷ ವಯೋಮಿತಿಯಲ್ಲಿ ವಲಯ ಮಟ್ಟದ ಪಂದ್ಯಗಳಲ್ಲಿ ಮಿಂಚಿದ ಉತ್ತಮ ಆಲ್ರೌಂಡರ್.‌

ತನ್ನ ಮೊದಲ ಪಂದ್ಯದಲ್ಲಿ 109 ಎಸೆತಳನ್ನೆದುರಿಸಿದ ಡ್ಯಾನಿಯಲ್‌ 14 ಬೌಂಡರಿಗಳ ಮೂಲಕ 125 ರನ್‌ ಸಿಡಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದ. ಈ ಪುಟ್ಟ ಸಾಧಕನ ಶತಕ ನೂರಾಗಲಿ….ರಾಜ್ಯದ ಉತ್ತಮ ಕ್ರಿಕೆಟಿಗಿನಾಗಿ ಬೆಳೆಯಲಿ ಎಂಬುದೇ ಹಾರೈಕೆ.

Related Articles