Friday, October 4, 2024

ದೃಷ್ಠಿಚೇತನರ ಬದುಕಿಗೆ ಬೆಳಕಾದ ಶೇಖರ್‌ ನಾಯ್ಕ್

ಸೋಮಶೇಖರ್‌ ಪಡುಕರೆ, sportsmail

ಅವರ ಮನೆಯಲ್ಲಿ ಎಲ್ಲ 14  ಮಂದಿ ದೃಷ್ಠಿ ವಿಶೇಷ ಚೇತನರು, ಅವರು ಕೂಡ ದೃಷ್ಠಿ ವಿಹೀನರು. ಆದರೆ ಭಾರತಕ್ಕೆ ಅಂಧರ ವಿಶ್ವಕಪ್‌ನಲ್ಲಿ ಎರಡು ಟ್ರೋಫಿ ತಂದು ಕೊಟ್ಟ ಚಾಂಪಿಯನ್‌ ಶೇಖರ್‌ ನಾಯ್ಕ್‌ ಪ್ರತಿ ದಿನವೂ ಅಂಧರ ಬದುಕಿಗಾಗಿ ಶ್ರಮಿಸುತ್ತಿದ್ದಾರೆ. ತಾನು ಆಡಿದಂತೆ ಇತರ ದೃಷ್ಠಿ ವಿಶೇ಼ಷಚೇತನರೂ ಅಂಗಣದಲ್ಲಿ ಆಡಬೇಕು ಎಂಬ ಹಂಬಲದಲ್ಲಿ ಕ್ರಿಕೆಟ್‌ ತರಬೇತಿಯನ್ನು ನೀಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೂ, ಗ್ರಾಮೀಣ ಪ್ರದೇಶದ ಮಕ್ಕಳ ಬಗ್ಗೆ ಅಪಾಯ ಕಾಳಜಿ ಹೊಂದಿರುವ ಶೇಖರ್‌ ನಾಯ್ಕ್‌ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಅಂಗಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ದೃಷ್ಠಿ ವಿಶೇ಼ ಚೇತನ ಮಕ್ಕಳಿಗೆ ಕ್ರಿಕೆಟ್‌ ತರಬೇತಿ ನೀಡುತ್ತಿದ್ದಾರೆ. ನ್ಯೂಯಾರ್ಕ್‌ನ ಗುರುಕೃಪಾ ಫೌಂಡೇ಼ಷನ್‌ ಮತ್ತು INK Talk ಶೇಖರ್‌ ಅವರ ಈ ಸಮಾಜಮುಖಿ ಕೆಲಸಕ್ಕೆ ಬೆಂಬಲ ನೀಡಿದೆ.

ಬುಧವಾರ ಶಿಬಿರ ಮುಗಿದ ನಂತರ sportsmail ಜತೆ ಮಾತನಾಡಿದ ಭಾರತ ಅಂಧರ ಕ್ರಿಕೆಟ್‌ ತಂಡದ ಮಾಜಿ ನಾಯಕ, ಪದ್ಮಶ್ರೀ ಪ್ರಶಸ್ತಿ ವಿಜೇತ ಶೇಖರ ನಾಯ್ಕ್‌, “ನಮ್ಮ ಮನೆಯಲ್ಲಿ ಎಲ್ಲ 14 ಮಂದಿಯೂ ಅಂಧರು. ದೇವರೇ ನಮ್ಮನ್ನು ಕಾಪಾಡುತ್ತಿದ್ದಾನೆ. ನಾನು ಭಾರತ ತಂಡದ ನಾಯಕನಾಗಿ ಎರಡು ವಿಶ್ವಕಪ್‌ ಗೆಲ್ಲುವಲ್ಲಿ ಯಶಸ್ವಿಯಾದೆ, ಇದರಲ್ಲಿ ನಮ್ಮ ತಂಡದ ಆಟಗಾರರ ಪಾತ್ರ ಪ್ರಮುಖವಾದುದು, ಏಕೆಂದರೆ ಕ್ರಿಕೆಟ್‌ ಟೀಮ್‌ ಗೇಮ್‌. ನನ್ನಂತೆ ಇತರ ದೃಷ್ಠಿ ಚೇತನರೂ ಅಂಗಣದಲ್ಲಿ ಆಡಬೇಕು.

ಅವರು ಮನೆಯವರಿಗೆ ಮತ್ತು ಸಮಾಜಕ್ಕೆ ಭಾರವಾಗಬಾರದು. ಕಣ್ಣಿಲ್ಲದಿದ್ದರೂ ಅವರಲ್ಲಿ ಸಾಧನೆ ಮಾಡುವ ಛಲ ಇರುತ್ತದೆ, ಇದಕ್ಕೆ ಸ್ವಲ್ಪ ಪ್ರೋತ್ಸಾಹದ ಅಗತ್ಯವಿದೆ. ಆ ಕೆಲಸವನ್ನು ನಾನು ಬೇರೆಯವರ ನೆರವಿನಿಂದ ಮಾಡುತ್ತಿದ್ದೇನೆ, ಅವರಲ್ಲಿ ಒಂದು ನಾಲ್ಕೈದು ಆಟಗಾರರು ಕರ್ನಾಟಕ ಅಥವಾ ಭಾರತ ತಂಡದಲ್ಲಿ ಆಡುತ್ತಾರೆಂಬ ಹಂಬಲ,” ಎಂದು ಹೇಳಿದರು.

ಶೇಖರ್‌ ನಾಯ್ಕ್‌ ಅವರು ಶಿವಮೊಗ್ಗ ಜಿಲ್ಲೆಯ ಹರ್ಕೆರೆಯವರು. ಈಗ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಆದರೆ ಗ್ರಾಮೀಣ ಮಕ್ಕಳ ಬಗ್ಗೆ ಅವರಿಗೆ ಹೆಚ್ಚಿನ ಕಾಳಜಿ, “ಬೆಂಗಳೂರಿನಲ್ಲಿ ಅಂಧರ ಬಗ್ಗೆ ಕೆಲಸ ಮಾಡಲು ಸಾಕಷ್ಟು ಸಂಸ್ಥೆಗಳಿವೆ, ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕ್ರಿಕೆಟ್‌ ಆಡಬಹುದೇ ಎಂಬುದರ ಬಗ್ಗೆ ಅರಿವಿಲ್ಲ. ಸಾಮಾನ್ಯರಿಗೆ ಕ್ರಿಕೆಟ್‌ ಹೇಳಿಕೊಡುವುದು ಸುಲಭ, ಆದರೆ ದೃಷ್ಠಿಚೇತನರಿಗೆ ತರಬೇತಿ ನೀಡುವುದು ಕಷ್ಟ. ಅವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕು. ನನ್ನಂತೆ ಇರುವವರಿಗೆ ಕ್ರಿಕೆಟ್‌ ಹೇಳಿಕೊಡಲು ನನಗೆ ಹೆಮ್ಮೆ ಅನಿಸುತ್ತಿದೆ,” ಎಂದರು.

ಶೇಖರ್‌ ನಾಯ್ಕ್‌ ಫೌಂಡೇಷನ್‌ ಮೂಲಕ ತರಬೇತಿ ನೀಡುತ್ತಿರುವ ಶೇಖರ್‌ ನಾಯ್ಕ್‌ ಅವರದ್ದು ಇದು ಎಂಟನೇ ತರಬೇತಿ ಶಿಬಿರ. ಮೂರು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಬಳ್ಳಾರಿಯಿಂದ ಉಡುಪಿಯವರೆಗಿನ ಕ್ರಿಕೆಟ್‌ ಅಸಕ್ತಿಯುಳ್ಳ ಯುವಕ ಮತ್ತು ಯುವತಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

“12 ಮಂದಿ ಯುವತಿಯರು 14 ಮಂದಿ ಯುವಕರು ಶಿಬಿರದಲ್ಲಿ ಪಾಲ್ಗೊಂಡಿರುತ್ತಾರೆ. ಹೆಚ್ಚಿನವರು ಹುಟ್ಟಿನಿಂದಲೇ ದೃಷ್ಠಿ ಕಳೆದುಕೊಂಡವರು, ಕೆಲವರು ಅಪಘಾತದಲ್ಲಿ ದೃಷ್ಠಿ ಕಳೆದುಕೊಂಡಿದ್ದಾರೆ. ಶಿಬಿರದ ಕೊನೆಯದಿನದಲ್ಲಿ ತ್ರಿಕೋನ ಸರಣಿ ಕ್ರಿಕೆಟ್‌ ಆಯೋಜಿಸಿದ್ದೆವು. ಬೆಂಗಳೂರಿನಿಂದ ಎರಡು ತಂಡವನ್ನು ಆಹ್ವಾನಿಸಿದ್ದೆವು. ನಾನು ತರಬೇತಿ ನೀಡಿದ ತಂಡ ಜಯ ಗಳಿಸಿತು,” ಎಂದು ಶೇಖರ್‌ ನಾಯ್ಕ್‌ ಖುಷಿಯಿಂದ ಹೇಳಿಕೊಂಡರು.

“ಜನವರಿ ತಿಂಗಳಲ್ಲಿ ರಾಷ್ಟ್ರೀಯ ಅಂಧರ ಕ್ರಿಕೆಟ್‌ ಟೂರ್ನಿ ನಡೆಯಲಿದೆ. ಅದಕ್ಕಾಗಿ ಕರ್ನಾಟಕ ರಾಜ್ಯ ತಂಡದ ಆಯ್ಕೆ ನಡೆಯುತ್ತದೆ, ಈ ಗ್ರಾಮೀಣ ಮಕ್ಕಳಿಗೂ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ತರಬೇತಿ ನೀಡುತ್ತಿದ್ದೇನೆ, ನಾಲ್ಕೈದು ಆಟಗಾರರು ಆಯ್ಕೆಯಾಗಬಹುದು ಎಂಬ ನಂಬಿಕೆ ಇದೆ,” ಎಂದು ಶೇಖರ್‌ ನಾಯ್ಕ್‌ ಆತ್ಮವಿಶ್ವಾಸದಿಂದ ನುಡಿದರು.

ಮೋನಿಕಾಳ ಕಣ್ಣು ಕಸಿದ ಅಪಘಾತ:

ಚಿಕ್ಕಬಳ್ಳಾಪುರದ ಮೋನಿಕಾ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಶಾಲೆಗೆಂದು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವಾಹನ ಅಪ್ಪಳಿಸಿತು. ರಸ್ತೆಗೆ ತಲೆ ಬಡಿದ ಪರಿಣಾಮ ಮೋನಿಕಾಳ ಕಣ್ಣು ಕಾಣದಾಯಿತು. ಕಳೆದುಹೋದ ದೃಷ್ಠಿ ಮತ್ತೆ ಬರಲೇ ಇಲ್ಲ. ಈಗ ಮೋನಿಕಾ ಅತ್ಯಂತ ಆತ್ಮವಿಶ್ವಾಸದಲ್ಲಿ ಕ್ರಿಕೆಟ್‌ ಆಡುತ್ತಾಳೆ.

ಅಂಧರ ಕ್ರಿಕೆಟ್‌ಗೆ ಬಳಸುವ ಚೆಂಡು ನೆಲಕ್ಕೆ ಬಿದ್ದಾಗ, ಮುಂದಕ್ಕೆ ಚಲಿಸಿದಾಗ ಅರಿಂದ ಗೆಜ್ಜೆಯ ರೀತಿಯ ಶಬ್ದ ಉಂಟಾಗುತ್ತದೆ, ಆ ಶಬ್ದವನ್ನು ಆಧರಿಸಿ ಆಟಗಾರರು ಬ್ಯಾಟಿಂಗ್‌ ಮತ್ತು ಫೀಲ್ಡಿಂಗ್‌ ಮಾಡುತ್ತಾರೆ.

ಬಿಸಿಸಿಐಗೆ ಸೇರ್ಪಡೆ:

ವಿಶೇಷ ಚೇತನ ಕ್ರಿಕೆಟ್‌ ಆಟಗಾರರಿಗೆ ಒಂದು ಸ್ಥಾನ ಮಾನ, ಅವರ ಬದುಕಿಗೆ ನೆರವಾಗು ಉದ್ದೇಶದಿಂದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶೇಷ ಚೇತನ ಕ್ರಿಕೆಟ್‌ ಮಂಡಳಿಯನ್ನು ರಚಿಸಲಿದೆ. ವಿವಿಧ ವಿಶೇಷ ಚೇತನ ಕ್ರಿಕೆಟ್‌ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ತಂದು ಅವುಗಳಿಗೆ ನೆರವು ನೀಡುವ ಮತ್ತು ಪಂದ್ಯಗಳನ್ನು ಆಯೋಜಿಸುವ ಕೆಲಸವನ್ನು ಬಿಸಿಸಿಐ ಮಾಡಲು ಉದ್ದೇಶಿಸಿರುವುದು ಸ್ವಾಗತಾರ್ಹ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೇಖರ್‌ ನಾಯ್ಕ್‌, “ಇದು ದೇಶದಲ್ಲಿ ನಡೆದ ಉತ್ತಮ ಬೆಳವಣಿಗೆ. ಈ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಪ್ರತಿಯೊಬ್ಬ ಪದಾಧಿಕಾರಿಗಳಿಗೂ ನಾವು ವಿಶೇಷಚೇನರು ಆಭಾರಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಆಟಗಾರರಿಗೆ ಏನಾದರೂ ಸಹಾಯ ಸಿಗಬಹುದೆಂಬ ನಂಬಿಕೆ ಇದೆ. ಇದು ವಿಭಿನ್ನ ವಿಶೇಷ ಚೇತನ ಕ್ರಿಕೆಟಗಿರಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷರಾದ ಸೌರವ್‌ ಗಂಗೂಲಿ ಹಾಗೂ ಕಾರ್ಯದರ್ಶಿ ಜೆ ಶಾ ಅವರಿಗೆ ವಿಶೇಷವಾಗಿ ಧನ್ಯವಾದ ಹೇಳಬೇಕು,” ಎಂದರು.

ಶಿಬಿರಾರ್ಥಿಗಳು:

ಶೇಖರ್‌ ನಾಯ್ಕ್‌ ಫೌಂಡೇಷನ್‌ ಆಯೋಜಿಸಿದ್ದ ಕ್ರಿಕೆಟ್‌ ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಪಾಲ್ಗೊಂಡ ಆಟಗಾರರ ವಿವರ.

ಹುಡುಗಿಯರು:

ಶ್ರೀದೇವಿ (ಬಳ್ಳಾರಿ), ದಾಕ್ಷಾಯಿಣಿ (ಮಂಡ್ಯ), ಆಶಾ (ಚಿತ್ರದುರ್ಗ), ಕನಕ ಜ್ಯೋತಿ (ತಿಪಟೂರು), ಕವನ (ಹೂವಿನಹಡಗಲಿ), ನಾಗರತ್ನ (ಉಡುಪಿ), ಭಾಗ್ಯಶ್ರೀ (ಬೀದರ್)‌, ಉಮೆಸಲ್ಮಾ (ಶಿವಮೊಗ್ಗ), ಮೋನಿಕಾ (ಚಿಕ್ಕಬಳ್ಳಾಪುರ), ವಿಜಯಲಕ್ಷ್ಮೀ (ಚಿತ್ರದುರ್ಗ), ಶೀಲಾ (ಶಿವಮೊಗ್ಗ), ಲತಾ (ಭದ್ರಾವತಿ).

ಹುಡುಗರು:

ಸಂತೋಷ್‌ (ಭದ್ರಾವತಿ), ಮಂಜು (ಕೊಪ್ಪಳ), ಪ್ರಸನ್ನ (ಚಿಕ್ಕಮಗಳೂರು), ಬಸವರಾಜ್‌ (ಚೆನ್ನಗಿರಿ), ಮಹಾಂತೇಶ್‌ (ದಾವಣಗೆರೆ), ಲೋಕೇಶ್‌ (ಚಿತ್ರದುರ್ಗ), ರಂಜನ್‌ (ಆಗುಂಬೆ), ಜಯಪ್ರಕಾಶ್‌ ಶೆಟ್ಟಿ (ಕೊಪ್ಪ), ಮಂಜುನಾಥ್‌ (ಭದ್ರಾವತಿ), ಕಮಲಾಕರ್‌ ನಾಯಕ್‌ (ದಾಂಡೇಲಿ), ಮಹೇಶ್‌ (ರಾಯಚೂರು), ಹರೀಶ್‌ (ಚೆನ್ನಗಿರಿ), ಮಾರುತಿ (ಕಣವೆ), ಚಂದ್ರಕಾಂತ್‌ (ಕಣವೆ).

ಇಂಥಹ ಕೆಲಸಗಳಿಗೆ, ಕ್ರಿಕೆಟರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಸ್ಪಂದಿಸಿದರೆ ಇನ್ನೂ ಹೆಚ್ಚಿನ ಆಟಗಾರರು ಈ ಶಿಬಿರಗಳಲ್ಲಿ ಪಾಲ್ಗೊಳ್ಳಬಹುದು.

Related Articles