ನಾಂಜಿಂಗ್ (ಚೈನಾ):ಕಳೆದ ಬಾರಿಯ ಫೈನಲ್ ಪಂದ್ಯದಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಂಡ ಭಾರತದ ಪಿ ವಿ ಸಿಂಧೂ ಜಪಾನಿನ ನೊಜೊಮಿ ಒಕುಹರಗೆ ಸೋಲುಣಿಸಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನ ಸೆಮಿಫೈನಲ್ ತಲುಪಿದ್ದಾರೆ.
ಆದರೆ ಸೈನಾ ನೆಹ್ವಾಲ್, ಸಾಯಿ ಪ್ರೆನೀತ್, ಸ್ವಾಸ್ತಿಕ್ ರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಸೋಲನುಭವಿಸಿದೆ.
ಉತ್ತಮ ಪೈಪೋಟಿಯಿಂದ ಕೂಡಿದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧೂ ೨೧-೧೭, ೨೧-೧೯ ಅಂತರದಲ್ಲಿ ಜಯಗಳಿಸಿ ಸೇಡು ತೀರಿಸಿಕೊಂಡರು. ಶನಿವಾರದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧೂ ವಿಶ್ವದ ೨ನೇ ರಾಂಕ್ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ. ಈ ಜಯದೊಂದಿಗೆ ಸಿಂಧೂ ಭಾರತಕ್ಕೆ ಪದಕವೊಂದನ್ನು ಖಚಿತಪಡಿಸಿದ್ದಾರೆ. ಕಳೆದ ವರ್ಷದ ಫೈನಲ್ ನಲ್ಲಿ ಸಿಂಧೂ ೧೯-೨೧, ೨೨-೨೦,೨೦-೨೨ ಅಂತರದಲ್ಲಿ ಸೋಲನುಭವಿಸಿದ್ದರು.
ಕರೋಲಿನ್ ಮರಿನ್ ವಿರುದ್ಧದ ಪಂದ್ಯದಲ್ಲಿ ಸೈನಾ ೬-೨೧, ೧೧-೨೧ ಅಂತರದಲ್ಲಿ ಸುಲಭವಾಗಿ ಸೋಲನುಭವಿಸಿದರು.
ಪುರುಷರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾಯಿ ಪ್ರಣೀತ್ ಜಪಾನಿನ ಕೆಂಟೋ ಮೋಮೋಟ ವಿರುದ್ಧ ೧೨-೨೧, ೧೨-೨೧ ಅಂತರದಲ್ಲಿ ಸೋಲನುಭವಿಸಿದರು.
ಮಿಶ್ರ ಡಬಲ್ಸ್ ನಲ್ಲಿ ಸ್ವಸ್ತಿಕ್ ರಾಜ್ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಚೀನಾದ ಜೆನ್ಗ್ ಸ್ವೇಯ್ ಮತ್ತು ಹುಯೆನ್ಗ್ ಯಕ್ವಿಂಗ್ ವಿರುದ್ಧ ೧೭-೨೧, ೧೦-೨೧ ಅಂತರದಲ್ಲಿ ಸೋತರು.