Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ನಾಳೆಯಿಂದ ಬೆಂಗಳೂರಿನಲ್ಲಿ ಪ್ರೋ ಕಬಡ್ಡಿ ಲೀಗ್‌ ಆರಂಭ

ಬೆಂಗಳೂರು, ಅಕ್ಟೋಬರ್‌ 6: ವಿವೋ ಪ್ರೋ ಕಬಡ್ಡಿ ಲೀಗ್‌ನ ಸಂಘಟಕರಾದ ಮಷಾಲ್‌ ಸ್ಪೋರ್ಟ್ಸ್‌ ಅಕ್ಟೋಬರ್‌ 6 ಗುರುವಾರದಂದು ಬೆಂಗಳೂರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಗೆ ಚಾಲನೆ ನೀಡಿದರು. ಎಲ್ಲ 12 ತಂಡಗಳ ತಲಾ ಒಬ್ಬೊಬ್ಬ ಆಟಗಾರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದು ಜೊತೆಯಲ್ಲಿ ಮಷಾಲ್‌ ಸ್ಪೋರ್ಟ್ಸ್‌ನ ಸಿಇಒ, ಸ್ಪೋರ್ಟ್ಸ್‌ ಲೀಗ್‌, ಡಿಸ್ನಿ ಸ್ಟಾರ್‌ ಮತ್ತು ಲೀಗ್‌ ಕಮಿಷನರ್‌ ಅನುಪಮ್‌ ಗೋಸ್ವಾಮಿ ಕೂಡ ಹಾಜರಿದ್ದರು.

ಹಾಲಿ ಚಾಂಪಿಯನ್ ‌ದಬಾಂಗ್‌ ಡೆಲ್ಲಿ ಕೆಸಿ ತಂಡವು ಎರಡನೇ ಋತುವಿನ ಚಾಂಪಿಯನ್‌ ಯು ಮುಂಬಾ ವಿರುದ್ಧ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಅಕ್ಟೋಬರ್‌ 7ರಂದು ನಡೆಯುವ ಮೊದಲ ಪಂದ್ಯದಲ್ಲಿ ಎದುರಿಸಲಿದೆ. ಈ ಋತುವಿನಲ್ಲಿ ಪಂದ್ಯಗಳು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದ್ದು, ಮೂರು ವರ್ಷಗಳ ನಂತರ ಕಬಡ್ಡಿ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಪಡೆದಿರುವುದು ವಿಶೇಷ.

ಋತುವಿನ ಆರಂಭಿಕ ಪಂದ್ಯದಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಅತ್ಯಂತ ಕುತೂಹಲದಿಂದ ಮಾತನಾಡಿದ ದಬಾಂಗ್‌ ಡೆಲ್ಲಿ ಕೆಸಿ ತಂಡದ ನಾಯಕ ನವೀನ್‌ ಕುಮಾರ್‌, “ನಾವು ಹಾಲಿ ಚಾಂಪಿಯನ್ನರು ಆದ್ದರಿಂದ ಈ ಋತುವಿನಲ್ಲಿಯೂ ನಾವು ಉತ್ತಮ ಪ್ರದರ್ಶನ ನೀಡುತ್ತೇವೆಂಬ ಆತ್ಮವಿಶ್ವಾಸವಿದೆ. ಈ ಹಿಂದೆ ನಾನು ತಂಡದಲ್ಲಿ ಒಬ್ಬ ಆಟಗಾರನಾಗಿ ಆಡುತ್ತಿದ್ದೆ, ಈಗ ನಾಯಕನಾಗಿ ತಂಡದ ಪರ ಆಡುತ್ತಿರುವೆ. ಉತ್ತಮ ಪ್ರದರ್ಣನದೊಂದಿಗೆ ತಂಡವನ್ನು ಮುನ್ನಡೆಸಬೇಕಿದೆ, ಜವಾಬ್ದಾರಿಯಿಂದಾಗಿ ಒಬ್ಬ ವ್ಯಕ್ತಿ ಬಲಿಷ್ಠನಾಗುತ್ತಾನೆ, ಆದ್ದರಿಂದ ನನ್ನ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಈ ಋತುವಿನಲ್ಲಿ ಉತ್ತಮವಾಗಿ ಆಡುವೆ,” ಎಂದರು.

ಇದೇ ವೇಳೆ ತವರಿನ ತಂಡ (ಬೆಂಗಳೂರು ಬುಲ್ಸ್‌)ದ ಮೊದಲ ಹಂತದ ನಾಯಕ ಮಹೇಂದರ್‌ ಸಿಂಗ್‌, ಸ್ಟಾರ್‌ ರೈಡರ್‌ ವಿಕಾಶ್‌ ಕಂಡೋಲ ಅವರ ಸೇರ್ಪಡೆಯಾಗಿರುವುದರ ಬಗ್ಗೆ ಮಾತನಾಡಿ, “ವಿಕಾಶ್‌ ಒಬ್ಬ ಉತ್ತಮ ರೈಡರ್‌ ಮತ್ತ ಅವರು ಕಳೆದ ಋತುವಿನ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿ ಉತ್ತಮವಾಗಿ ಆಡಿದ್ದಾರೆ. ಅವರಿಂದ ನಾವು ಬಹಳಷ್ಟು ನಿರೀಕ್ಷೆಯಲ್ಲಿದ್ದೇವೆ. ಈ ಋತುವಿನಲ್ಲೂ ಅವರು ಉತ್ತಮವಾಗಿ ಆಡಿ ಹೆಚ್ಚಿನ ಪಂದ್ಯಗಳಲ್ಲಿ ಜಯ ಗಳಿಸಲು ನೆರವಾಗುತ್ತಾರೆಂದು ನಾನು ನಂಬಿದ್ದೇನೆ,” ಎಂದರು.

ಲೀಗ್‌ನ ಯಶಸ್ಸಿನಲ್ಲಿ ಪ್ರೇಕ್ಷಕರು ಪಾಲ್ಗೊಳ್ಳವುದು ಅತಿ ಪ್ರಮುಖವಾದದು, ವಿವೋ ಪ್ರೋ ಕಬಡ್ಡಿ ಲೀಗ್‌ 9ನೇ ಋತುವಿನಲ್ಲಿ ಪ್ರೇಕ್ಷಕರಿಗೆ ಪಂದ್ಯಗಳನ್ನು ಕ್ರೀಡಾಂಗಣದಲ್ಲೇ ನೋಡಲು ಅವಕಾಶ ಕಲ್ಪಿಸಿರುವ ಬಗ್ಗೆ ಮಾತನಾಡಿದ ವಿವೋ ಪ್ರೋ ಕಬಡ್ಡಿ ಲೀಗ್‌ನ ಕಮಿಷನರ್‌, ಮಷಾಲ್‌ ಸ್ಪೋರ್ಟ್ಸ್‌ನ ಲೀಗ್‌ ಪ್ರಧಾನರಾದ ಅನುಪಮ್‌ ಗೋಸ್ವಾಮಿ ಮಾತನಾಡಿ, “ಯಾವುದೇ ಕ್ರೀಡೆಯಲ್ಲಿ ಅಭಿಮಾನಿಗಳು ಮತ್ತು ಪ್ರೇಕ್ಷಕರು ಹೃದಯವಿದ್ದಂತೆ ಮತ್ತು ನಾವು ಈ ಋತುವಿನಲ್ಲಿ ನಾವು ಕ್ರೀಡಾಂಗಣದ ಒಳಗಡೆ ಪ್ರೇಕ್ಷಕರಿಗೆ ವಿವಿಧ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಹೊಸ ಮಾನದಂಡವನ್ನು ನಿರ್ಮಿಸಲಿದ್ದೇವೆ. ಪ್ರೇಕ್ಷಕರ ಮೇಲೆ ಹೆಚ್ಚು ಗಮನವಿರಿಸುವುದು ಲೀಗ್‌ನ ಪ್ರಮುಖ ಉದ್ದೇಶವಾಗಿದೆ. ಪ್ರೇಕ್ಷಕರ ಹೊರತಾಗಿ ಯಾವುದೇ ಲೀಗ್‌ ಯಶಸ್ಸು ಕಾಣುವುದಿಲ್ಲ. ಪ್ರಕ್ಷಕರು ಮತ್ತು ಅಭಿಮಾನಿಗಳಿಂದ ಯಶಸ್ಸು ಕಾಣಲು ನಾವು ಉತ್ತಮ ಗುಣಮಟ್ಟದ ಸ್ಪರ್ಧೆ ಒದಗಿಸಬೇಕು. ಇದು ನಮ್ಮ ಪ್ರಮುಖ ಗುರಿಯಾಗಿದೆ. ನಿರಂತರವಾಗಿ ಉತ್ತಮಗೊಳ್ಳುತ್ತಿರುವ ಲೀಗ್‌ ಮಾದರಿಯು ಕೂಡ ಲೀಗ್‌ನ ಯಶಸ್ಸಿನಲ್ಲಿ ಪ್ರಮುಖ”ಅಂಶಗಳಲ್ಲಿ ಒಂದಾಗಿದೆ,” ಎಂದರು.

ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿರುವ ಮೊದಲ ದಿನದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಕೆಸಿ ಮತ್ತು ಯು ಮುಂಬಾ ತಂಡಗಳು ಸೆಣಸಲಿವೆ. ದಕ್ಷಿಣದ ಡರ್ಬಿ ಎನಿಸಿರುವ ದಿನದ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಮತ್ತು ತೆಲುಗು ಟೈಟಾನ್ಸ್‌ ನಡುವೆ ಸೆಣಸಾಟ ನಡೆಯಲಿದೆ. ದಿನದ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವು ಯು.ಪಿ. ಯೋಧಾಸ್‌ ವಿರುದ್ಧ ಹೋರಾಡಲಿದೆ.

ಕಬಡ್ಡಿ ಅಭಿಮಾನಿಗಳು ಬುಕ್‌ ಮೈಶೋ (BookMyShow) ನಲ್ಲಿ 9ನೇ ಋತುವಿನ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದು.

ವಿವೋ ಪ್ರೋ ಕಬಡ್ಡಿ ಲೀಗ್‌ 9ನೇ ಋತುವಿನ ಪಂದ್ಯಗಳು ಸಂಜೆ 7:30ರಿಂದ ಆರಂಭಗೊಳ್ಳಲಿದ್ದು, ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್ಸ್‌ ಮತ್ತು ಡಿಸ್ನಿ+ ಹಾಟ್‌ಸಟಾರ್‌ನಲ್ಲಿ ನೇರ ಪ್ರಸಾರ.

ವಿವೋ ಪ್ರೋ ಕಬಡ್ಡಿ ಲೀಗ್‌ 9ನೇ ಋತುವಿನ ನೇರ ಮಾಹಿತಿಗಾಗಿ www.prokabaddi.com ಗೆ ಲಾಗಿನ್‌ ಆಗಿ,


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.