Thursday, March 28, 2024

ಬೆಂಗಾಲ್‌ಗೆ ಆಘಾತ ನೀಡಿದ ದಬಾಂಗ್ ಡೆಲ್ಲಿ

ಸ್ಪೋರ್ಟ್ಸ್ ಮೇಲ್ ವರದಿ

ಪ್ರೊ ಕಬಡ್ಡಿ ಲೀಗ್‌ನ ಎರಡನೇ ಎಲಿಮನೇಟರ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 39-28 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ.

ದ್ವಿತಿಯಾರ್ಧದಲ್ಲಿ ದಿಟ್ಟ ಹೋರಾಟ ನೀಡಿದ ದಬಾಂಗ್ ಡೆಲ್ಲಿ ತಂಡ ಯಶಸ್ಸಿನ ಹೆಜ್ಜೆ ಇಟ್ಟಿತು. ನವೀನ್ ಕುಮಾರ್ ಹಾಗೂ ಚಂದ್ರನ್ ರಂಜಿತ್ ಒಟ್ಟಿಗೆ 19 ರೈಡ್ ಪಾಯಿಂಟ್ ಗಳಿಸುವ ಮೂಲಕ ಜಯದ ರೂವಾರಿ ಎನಿಸಿದರು. ಡಿಫೆನ್ಸ್‌ನಲ್ಲಿ ರವೀಂದರ್ ಪಹಾಲ್ ನಾಲ್ಕು ಟ್ಯಾಕಲ್ ಅಂಕ ಗಳಿಸಿ ಮಿಂಚಿದರು. ದ್ವಿತಿಯಾರ್ಧದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ಆಕ್ರಮಣಕಾರಿ ಆಟವಾಡುವಲ್ಲಿ ವಿಲವಾದುದೇ ಸೋಲಿಗೆ ಪ್ರಮುಖ ಕಾರಣವಾಯಿತು. ಮಣಿಂದರ್ ಸಿಂಗ್ ಕೇವಲ 8 ಅಂಕ ಗಳಿಸಿದರು, ಆದರೆ ಇತರ ರೈಡರ್‌ಗಳಿಂದ ಉತ್ತಮ ಪ್ರೋತ್ಸಾಹ ಅವರಿಗೆ ಸಿಗಲಿಲ್ಲ.
ಚಂದನ್ ರಂಜಿತ್ ರೈಡಿಂಗ್‌ನಲ್ಲಿ ಒಂದು ಅಂಕ ತರುವ ಮೂಲಕ ದಬಾಂಗ್ ಡೆಲ್ಲಿಯ ಖಾತೆ ತೆರೆದರು. ಎರಡನೇ ನಿಮಿಷದಲ್ಲಿ ಪಂದ್ಯ 2-2ರಲ್ಲಿ ಸಮಬಲಗೊಂಡಿತು. ಡೆಲ್ಲಿ ತಂಡ ಆಲೌಟ್ ಆಗುವ ಮೂಲಕ ಬೆಂಗಾಲ್ ವಾರಿಯರ್ಸ್ 9ನೇ ನಿಮಿಷದಲ್ಲಿ 7-4ರಲ್ಲಿ ಮುನ್ನಡೆ ಕಂಡಿತು. 15ನೇ ನಿಮಿಷದಲ್ಲಿ ಮಣಿಂದರ್ ಎರಡು ಅಂಕ ಗಳಿಸುವ ಮೂಲಕ ಬೆಂಗಾಲ್ ತಂಡ 12-8ರಲ್ಲಿ ಮುನ್ನಡೆಯಿತು. ನಂತರ ಚಂದನ್ ರಂಜಿತ್ ರೈಡಿಂಗ್‌ನಲ್ಲಿ ಎರಡು ಅಂಕ ಗಳಿಸುವುದರೊಂದಿಗೆ ಡೆಲ್ಲಿ 10-12ರಲ್ಲಿ ಹೋರಾಟ ಮುಂದುವರಿಸಿತು. ಸೂಪರ್ ಟ್ಯಾಕಲ್ ಮೂಲಕ ಡೆಲ್ಲಿ ತಂಡ 12-12ರಲ್ಲಿ ಸಮಬಲ ಸಾಧಿಸಿತು. 19ನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ ಎದುರಾಳಿಯನ್ನು ಆಲೌಟ್ ಮಾಡುವ ಮೂಲಕ 17-12ರಲ್ಲಿ ಮೇಲುಗೈ ಸಾಧಿಸಿತು. ಇದರೊಂದಿಗೆ ಮೊದಲಾರ್ಧ  18-12ರಲ್ಲಿ ಅಂತ್ಯಗೊಂಡಿತು.
ದ್ವಿತಿಯಾರ್ಧದಲ್ಲಿ ದಬಾಂಗ್ ಡೆಲ್ಲಿ ದಿಟ್ಟ ಹೋರಾಟ ನೀಡಿತು. 21ನೇ ನಿಮಿಷದಲ್ಲಿ ಮೂರು ರೈಡ್ ಪಾಯಿಂಟ್ ಗಳಿಸುವ ಮೂಲಕ ಪಂದ್ಯ 15-18ರಲ್ಲಿ ಸಾಗಿತು. ೨೫ನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ 20-19ರಲ್ಲಿ ಮುನ್ನಡೆ ಕಂಡಿತ್ತ. ಆದರೆ ನವೀನ್ ಕುಮಾರ್ 28ನೇ ನಿಮಿಷದಲ್ಲಿ ಅದ್ಬುತ ರೈಡ್ ಮೂಲಕ ಡೆಲ್ಲಿ ತಂಡ 24-20ರಲ್ಲಿ ಮೈಲುಗೈ ಸಾಧಿಸಿತು. ಬೆಂಗಾಲ್ ವಾರಿಯರ್ಸ್ 32ನೇ ನಿಮಿಷದಲ್ಲಿ ಆಲೌಟ್ ಆಗುವುದರೊಂದಿಗೆ ಡೆಲ್ಲಿ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿ, ಅಂತಿಮವಾಗಿ 39-28 ಅಂತರದಲ್ಲಿ ಜಯ ಗಳಿಸಿತು.

Related Articles