Friday, December 13, 2024

ಪ್ರೊ ಕಬಡ್ಡಿ: ಫೈನಲ್‌ಗೆ ಬೆಂಗಳೂರು

ಸ್ಪೋರ್ಟ್ಸ್ ಮೇಲ್ ವರದಿ

ಗುಜರಾತ್ ಫಾರ್ಚೂನ್ ಜಯಂಟ್ಸ್ ವಿರುದ್ದ 41-29 ಅಂಕಗಳ ಅಂತರದಲ್ಲಿ ಜಯ ಗಳಿಸಿ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದೆ.

ಪವನ್ ಶೆರಾವತ್ ಹಾಗೂ ರೋಹಿತ್ ಕುಮಾರ್ ಅವರ ಅದ್ಭುತ ರೈಡ್ ಮೂಲಕ ಬೆಂಗಳೂರು ತಂಡ ಗುಜರಾತ್‌ಗೆ ಸೋಲಿನ ಆಘಾತ ನೀಡಿ ಪ್ರೊ ಕಬಡ್ಡಿ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಶಸ್ತಿ ಸುತ್ತು ತಲುಪಿತು.
ಕೊಚ್ಚಿಯ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಯರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ದ್ವಿತಿಯಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರಿ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.
13 ಅಂಕಗಳನ್ನು ಗಳಿಸಿದ ಪವನ್ ಶೆರಾವತ್ ಮತ್ತೊಮ್ಮೆ ಬೆಂಗಳೂರಿನ ಜಯದ ರೂವಾರಿ ಎನಿಸಿದರು. ನಾಯಕ ರೋಹಿತ್ ಕುಮಾರ್ ಮತ್ತೊಮ್ಮೆ ಆಲ್ರೌಂಡ್ ಪ್ರದರ್ಶನ ತೋರಿ 11 ಅಂಕಗಳನ್ನು ಗಳಿಸಿ ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸ ತೋರಿದರು.  ಗುಜರಾತ್ ತಂಡದ ಪರ ಸಚಿನ್ ಹಾಗೂ ಪ್ರಪಂಜನ್ ಉತ್ತಮವಾಗಿ ಆಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಯುಪಿ ಯೋಧಾ  ಹಾಗೂ ದಬಾಂಗ್ ಡೆಲ್ಲಿ ನಡುವೆ ನಡೆಯುವ ಎರಡನೇ ಕ್ವಾಲಿಯರ್ ಪಂದ್ಯದಲ್ಲಿ ಜಯ ಗಳಿಸುವ ತಂಡದ ವಿರುದ್ಧ ಗುಜರಾತ್ ಮತ್ತೊಂದು ಪಂದ್ಯವನ್ನಾಡಲಿದೆ.

Related Articles