Thursday, December 12, 2024

ತಲೈವಾಸ್‌ಗೆ ತಲೆಬಾಗಿದ ಪೈರೇಟ್ಸ್

ಸ್ಪೋರ್ಟ್ಸ್ ಮೇಲ್ ವರದಿ

ಚೆನ್ನೈ ನ  ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ  ಪ್ರೊ ಕಬಡ್ಡಿ ಲೀಗ್‌ನ ಮೊದಲ ಪಂದ್ಯದಲ್ಲಿ ಸ್ಥಳೀಯ ತಂಡ ತಮಿಳು ತಲೈವಾಸ್ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ 42-26 ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ.

ತಮಿಳು ತಲೈವಾಸ್ ಪರ ಅಜಯ್ ಠಾಕೂರ್ 14 ಅಂಕ ಗಳಿಸಿ ಜಯದಲ್ಲಿ ಪ್ರಮಖ ಪಾತ್ರವಹಿಸಿದರು. ಅಮಿತ್ ಹೂಡಾ ಎದುರಾಳಿ ತಂಡದ ನಾಯಕ ಡುಬ್ಕಿ ಕಿಂಗ್ ಪ್ರದೀಪ್ ನರ್ವಾಲ್ ಅವರಿಗೆ ಅಂಕ ಗಳಿಸಲು ತಡೆಯೊಡ್ಡಿದರಲ್ಲದೆ ಅಮೂಲ್ಯ 4 ಟ್ಯಾಕಲ್ ಅಂಕ ಗಳಿಸಿ ತಂಡಕ್ಕೆ ನೆರವಾದರು.
ಅಜಯ್ ಠಾಕೂರ್ ರೈಡ್ ಹಾಗೂ ಅಮಿತ್ ಹೂಡಾ ಅವರ ಟ್ಯಾಕಲ್ ನೆರವಿನಿಂದ ತಮಿಳು ತಲೈವಾಸ್‌ತಂಡ ಆರಂಭದಲ್ಲೇ ಪೈರೇಟ್ಸ್ ತಂಡವನ್ನು ಆಲೌಟ್ ಮಾಡಿ 11-2ರಲ್ಲಿ ಪ್ರಭುತ್ವ ಸಾಧಿಸಿತು. ಆರಂಭದಲ್ಲಿ ಪ್ರದೀಪ್ ನರ್ವಾಲ್ ಯಶಸ್ಸು ಸಾಧಿಸಿದರೂ ಅಜಯ್ ಠಾಕೂರ್ ಅವರನ್ನು ತಡೆಯಲು ಪೈರೇಟ್ಸ್‌ಗೆ ಸಾಧ್ಯವಾಗಲಿಲ್ಲ. ಪ್ರಥಮಾರ್ಧದಲ್ಲಿ ತಲೈವಾಸ್ 26-8 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಪ್ರದೀಪ್ ನರ್ವಾಲ್ ಅವರನ್ನು ನಿಯಂತ್ರಿಸುವ ಮೂಲಕ ತಮಿಳು ತಲೈವಾಸ್ ಪಂದ್ಯವನ್ನು 42-26 ಅಂತರದಲ್ಲಿ ಗೆದ್ದುಕೊಂಡಿತು.

ಮುಂಬಾ-ಪುಣೇರಿ ಪಲ್ಟನ್ ಸಮಬಲ

ದಿನದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಯು ಮುಂಬಾ ನಡುವಿನ ಪಂದ್ಯ 32-32 ಅಂಕಗಳಿಂದ ಸಮಬಲಗೊಂಡಿತು. ಯು ಮುಂಬಾ ತಂಡಕ್ಕೆ ಪಂದ್ಯವನ್ನು ಗೆಲ್ಲುವ ಅವಕಾಶ ಉತ್ತಮವಾಗಿತ್ತು. ಅಂತಿಮ ಕ್ಷಣದಲ್ಲಿ ಪುಣೇರಿ ತಂಡ ಎರಡು ಅಂಕಗಳನ್ನು ಗಳಿಸಿ ಪಂದ್ಯವನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಯಿತು. ಪುಣೇರಿ ಪಲ್ಟನ್ ಪರ ನಿತಿನ್ ತೋಮಾರ್ ರೈಡಿಂಗ್‌ನಲ್ಲಿ ಮಿಂಚಿ 15 ಅಂಕ ಗಳಿಸಿದರೆ, ಟ್ಯಾಕಲ್‌ನಲ್ಲಿ ಗಿರೀಶ್ 4 ಅಂಕ ಗಳಿಸಿ ತಂಡಕ್ಕೆ ನೆರವಾದರು. ಯು ಮುಂಬಾ ಪರ ಸಿದ್ಧಾರ್ಥ ದೇಸಾಯಿ ಮಾಡಿದ 22ರೈಡ್‌ಗಳಿಂದ 14 ಅಂಕ ಗಳಿಸಿದರು. ಜಲ್ ಅತ್ರಚಲಿ ಟ್ಯಾಕಲ್‌ನಲ್ಲಿ 4 ಅಂಕ ಗಳಿಸಿದರು.

Related Articles