ಮುಂಬೈ:
ಟ್ಯಾಕಲ್ ಅಂಕಗಳ ಬಲದಿಂದ ಯು ಮುಂಬಾ ತಂಡ ಬೆಂಗಳೂರು ಬುಲ್ಸ್ ತಂಡದ ವಿರುದ್ಧ ಜಯಬೇರಿ ಬಾರಿಸಿತು.
ಇಲ್ಲಿನ ಸರ್ದಾರ್ ವಲ್ಲಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ವಿವೋ ಪ್ರೊ ಕಬಡ್ಡಿ ಲೀಗ್ 63ನೇ ಪಂದ್ಯ ದಲ್ಲಿ ಮುಂಬಾ ತಂಡ 32-29 ಅಂತರದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿತು.
21 ರೈಡಿಂಗ್ ಅಂಕಗಳೊಂದಿಗೆ ಬುಲ್ಸ್ ತಂಡ ಮುಂಬಾ ತಂಡಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿತ್ತು, ಆದರೆ, ಅಂತಿಮ ಕ್ಷಣದಲ್ಲಿ ಕೇವಲ ಮೂರು ಅಂಕಗಳಿಂದ ಸೋಲು ಒಪ್ಪಿಕೊಳ್ಳಬೇಕಾಯಿತು.
ಮುಂಬಾ ಪರ ಉತ್ತಮ ಆಟವಾಡಿದ ದರ್ಶನ್ ಕಡಿಯಾನ್ 9, ಸುರೀಂದರ್ ಸಿಂಗ್ 5 ತಂಡದ ಗೆಲುವಿಗೆ ಮಹತ್ವದ ಪಾತ್ರವವಹಿಸಿದರು. ಬುಲ್ಸ್ ಪರ ಪವನ್ ಕುಮಾರ್ 8, ರೋಹಿತ್ ಕುಮಾರ್ 6 ಹಾಗೂ ಕಾಶಿಲಿಂಗ್ ಅಡಕೆ 4 ಅಮೋಘ ಆಟವಾಡಿದರೂ ಅಂತಿಮವಾಗಿ ಸೋಲಿನ ದವಡೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಆ ಮೂಲಕ ಯು ಮುಂಬಾ ತಂಡ ವಲಯ(ಎ) ಪಟ್ಟಯಲ್ಲಿ 51 ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿದೆ.
ಇನ್ನೂ ಬೆಂಗಳೂರು ಬುಲ್ಸ್ 32 ಅಂಕಗಳೊಂದಿಗೆ ವಲಯ(ಬಿ) ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ.