Friday, December 13, 2024

ಯುಪಿ ಯೋಧರಿಗೆ ಶಾಕ್ ನೀಡಿದ ತಲೈವಾಸ್

ಗ್ರೇಟರ್ ನೋಯ್ಡ:

ಸುಖೇಶ್ ಹೆಗ್ಡೆ(9), ಅಜಯ್ ಠಾಕೂರ್(9) ಹಾಗೂ ಮಂಜೀತ್ ಚಿಲ್ಲರ್(8) ಅವರ ಅಮೋಘ ಆಟದ ನೆರವಿನಿಂದ ತಮಿಳ್ ತಲೈವಾಸ್ ತಂಡ ವಿವೋ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಯುಪಿ ಯೋಧ ತಂಡದ ವಿರುದ್ಧ 46-24 ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಕಳೆದ ಮೂರು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ್ದ ಯುಪಿ ತಂಡಕ್ಕೆ ತಮಿಳ್ ತಲೈವಾಸ್ ಶಾಕ್ ನೀಡಿತು.

ಇಲ್ಲಿನ ಶಾಹೀದ್ ವಿಜಯ್ ಪಠಿಕ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಯುಪಿ ಯೋಧ ಪರ ಪ್ರಶಾಂತ್ ಕುಮಾರ್ ರೈ ಅವರು ತಮಿಳ್ ತಲೈವಾಸ್ ತಂಡಕ್ಕೆ ಸ್ವಲ್ಪ ಕಠಿಣ ಎನಿಸಿದರು. ಪಂದ್ಯದ ಆರಂಭದ ಮೂರನೇ ನಿಮಿಷದಲ್ಲಿ ಯುಪಿ ಯೋಧ ತಂಡ 1-4 ಹಿನ್ನಡೆ ಅನುಭವಿಸಿತ್ತು. ಈ ವೇಳೆ ಯುಪಿ ತಂಡದ ನರೇಂದ್ರ ಅವರು ಜಸ್ವೀರ್ ಸಿಂಗ್ ಅವರನ್ನು ಅದ್ಬುತವಾಗಿ ಟ್ಯಾಕಲ್ ಮಾಡುವ ಮೂಲಕ ತಂಡದ ಅಂತರವನ್ನು(3-4) ಕಡಿಮೆ ಮಾಡಿದರು. ಆದರೆ, ಆರನೇ ನಿಮಿಷದಲ್ಲಿ ಯುಪಿ ಯೋಧ ತಂಡದ ಆಟಗಾರರು ಆಲ್ ಔಟ್ ಆಗುವ ಮೂಲಕ ತಮಿಳ್ ತಲೈವಾಸ್ ತಂಡ 10-4 ಭಾರಿ ಮುನ್ನಡೆ ಸಾಧಿಸಿತು.
ಬಳಿಕ ಅದೇ ಲಯ ಮುಂದುವರಿಸಿದ ತಮಿಳ್ ತಲೈವಾಸ್ ತಂಡ 15 ನೇ ನಿಮಿಷದಲ್ಲಿ ಇನ್ನಷ್ಟು ಮುನ್ನಡೆ ಪಡೆಯಿತು. ಸುಖೇಶ್ ಹೆಗ್ಡೆ ಅವರು ಯುಪಿ ತಂಡದ ರಿಶಾಂಕ್ ದೇವಾಡಿಗ, ನರೇಂದ್ರ ಮತ್ತು ಜೀವ ಕುಮಾರ್ ಅವರನ್ನ ಔಟ್ ಮಾಡುವ ಮೂಲಕ ಮತ್ತೊಮ್ಮೆ ಯುಪಿ ಯೋಧ ತಂಡ ಸರ್ವ ಪತನವಾಯಿತು. ಆ ಮೂಲಕ ತಮಿಳರು 14 ಅಂಕಗಳ ಮುನ್ನಡೆ ಸಾಧಿಸಿದರು. ಅರ್ಧ ಪಂದ್ಯದ ಸಮಯಕ್ಕೆ ತಮಿಳ್ ತಲೈವಾಸ್ ತಂಡ 26-11 ಮುನ್ನಡೆ ಸಾಧಿಸಿತ್ತು. ಬಳಿಕ ತೀವ್ರ ಒತ್ತಡದಲ್ಲಿ ಅಂಗಳಕ್ಕೆ ಮರಳಿದ ಯುಪಿ ಯೋಧ ತಂಡ ಅಂಕ ಗಳಿಸಲು ಸಾಕಷ್ಟು ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. 26 ನೇ ನಿಮಿಷದಲ್ಲಿ ತಮಿಳ್ ತಲೈವಾಸ್ ತಂಡ 14 ಮುನ್ನಡೆಯಲ್ಲಿದ್ದ ಅಂಕಗಳನ್ನು 28ಕ್ಕೆ ಏರಿಕೆ ಮಾಡಿತು.
ನಂತರ ಪಂದ್ಯದುದ್ದಕ್ಕೂ ಪಾರಮ್ಯ ಮೆರೆದ ತಮಿಳ್ ತಲೈವಾಸ್ 39ನೇ ನಿಮಿಷದಲ್ಲಿ ಮತ್ತೊಮ್ಮೆ ಯುಪಿ ಯೋಧ ತಂಡವನ್ನು ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಪಂದ್ಯದ ನಿಗದಿತ ಅವಧಿಯ ಮುಕ್ತಾಯಕ್ಕೆ ತಮಿಲ್ ತಲೈವಾಸ್ ತಂಡ 46-24 ಅಂತರದಲ್ಲಿ ಯುಪಿ ಯೋಧ ತಂಡವನ್ನು ಮಣಿಸಿತು.

Related Articles