Thursday, December 12, 2024

ಬೆಂಗಳೂರು ಗೆದ್ದಿಲ್ಲ, ಜೆಮ್ಷೆಡ್ಪುರ ಸೋತಿಲ್ಲ

ಬೆಂಗಳೂರು, ಅಕ್ಟೋಬರ್ 7
ನಿಜವಾಗಿಯೂ ಅದ್ಭುತ ಪಂದ್ಯ. ಆಡಿದ ತಂಡಕ್ಕೂ ಖುಷಿ, ನೋಡಿದ ಪ್ರೇಕ್ಷಕರಿಗೂ ಸಂಭ್ರಮ. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡಿಯನ್ ಸೂಪರ್ ಲೀಗ್ ನ ರೋಚಕ ಪಂದ್ಯ 2-2 ಗೋಲುಗಳಿಂದ ಡ್ರಾ ದಲ್ಲಿ ಕೊನೆಗೊಂಡಿತು. ನಿಶು ಕುಮಾರ್ (45) ಹಾಗೂ ಸುನಿಲ್ ಛೆಟ್ರಿ (88) ಬೆಂಗಳೂರು ಎಫ್ ಸಿ ಪರ ಗೋಲು ಗಳಿಸಿದರೆ. ಜೆಮ್ಷೆಡ್ಪುರ ಪರ ಗೌರವ್ ಮುಖಿ (81) ಹಾಗೂ ಸರ್ಗಿಯೋ ಸಿಡಾನಛ್ 90+4) ಗೋಲು ಗಾಳಿಸುವುದರೊಂದಿಗೆ ಪಂದ್ಯ 2-2 ಗೋಲಿನಿಂದ ಡ್ರಾಗೊಂಡಿತು.

ಗೌರವ್ ಮುಖಿ ದಾಖಲೆ 

81ನೇ ನಿಮಿಷದಲ್ಲಿ ಗೌರವ್ ಮುಖಿ ಗಳಿಸಿದ ಗೋಲಿನಿಂದ ಜೆಮ್ಷೆಡ್ಪುರ ತಂಡ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.  16 ವರ್ಷ ವಯಸ್ಸಿನ ಗೌರವ್ ಮುಖಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ನಿಶು ಕುಮಾರ್ ಮಿಂಚು

ಮೊದಲಾರ್ಧ  ಗೋಲಿಲ್ಲದೆ ಅಂತ್ಯಗೊಳ್ಳುವ ಲಕ್ಷಣ ತೊರಿತ್ತು. ಆದರೆ 45ನೇ ನಿಮಿಷದಲ್ಲಿ ನಿಶು ಕುಮಾರ್  ಗಳಿಸಿದ ಗೋಲಿನಿಂದ ಆತಿಥೇಯ ಬೆಂಗಳೂರು ತಂಡ ಮುನ್ನಡೆ ಕಾಯ್ದುಕಂಡಿತು. ಆರಂಭದಲ್ಲಿ ನಿರೀಕ್ಷೆಯಂತೆ ಇತ್ತಂಡಗಳು ಸಮಬಲದ ಹೋರಾಟ ನೀಡಿದವು. ಆಕ್ರಣಕಾರಿ ಆಟಕ್ಕೆ ಮನ ಮಾಡಿ ಪ್ರಮಾದದ ಹೆಜ್ಜೆಯನ್ನಿಟ್ಟ ಯಮ್ನಮ್ ರಾಜು ಯಲ್ಲೋ ಕಾರ್ಡ್ ಗಳಿಸಿ ಎಚ್ಚರಿಕೆಯ ಕರೆ ಸ್ವೀಕರಿಸಿದರು. ಜೆಮ್ಷೆಡ್ಪುರ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಿದರೂ ಗೋಲು ಗಳಿಸುವಲ್ಲಿ ಯಶಸ್ಸು ಕಾಣಲಿಲ್ಲ. ಬೆಂಗಳೂರು ಪ್ರಥಮಾರ್ಧ  ಕೊನೆ ಭಾಗದಲ್ಲಿ ಪ್ರಭುತ್ವ ಸಾಧಿಸಿತ್ತು. ಆದರೆ ಅವಕಾಶಗಳು ಕಡಿಮೆ ಇದ್ದವು. 20 ವರ್ಷದ ನಿಶು ಕುಮಾರ್ ಸುಮಾರು 30 ಅಡಿ ದೂರದಿಂದ ಗೋಲ್‌ಬಾಕ್ಸ್‌ಗೆ ಗುರಿಯಿಟ್ಟ ಚೆಂಡನ್ನು ಸುಭಾಶಿಶ್ ರಾಯ್ ತಡೆಯಲು ತಮ್ಮಿಂದಾದ  ಎಲ್ಲ ಪ್ರಯತ್ನವನ್ನೂ ಮಾಡಿದರು. ಆದರೆ ಗೋಲ್‌ಬಾಕ್ಸ್‌ನ ಒಳ ಅಂಚಿನಿಂದ ಹಾದು ನೆಟ್ ಸೇರಿಕೊಂಡಿತು. ನಾಯಕ ಸುನಿಲ್ ಛೆಟ್ರಿಗೆ ಎಲ್ಲಿಲ್ಲದ ಸಂಭ್ರಮ. ಇಡೀ ತಂಡವೇ ನಿಶು ಕುಮಾರ್ ಅವರ ಮೇಲೆರಗಿ ಸಂಭ್ರಮ ಆಚರಿಸಿತು. ಕಂಠೀರವ ಕ್ರೀಡಾಂಗಣ ನೀಲಿಯ ಓಕುಳಿಯಲ್ಲಿ ಮಿಂದಂತೆ ಪ್ರೇಕ್ಷಕ ವರ್ಗ ಸಂಭ್ರಮದಿಂದ ಕುಣಿಯಿತು.

ಐಎಸ್‌ಎಲ್‌ಗೆ ಕಾಹಿಲ್ ಗೌರವ

ಭಾನುವಾರ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಅತ್ಯಂತ ಗೌರವದ ಕ್ಷಣ. ಅದು ಬೆಂಗಳೂರು ಫುಟ್ಬಾಲ್ ಪ್ರೇಮಿಗಳಿಗಿರಬಹುದು, ಅಥವಾ ಇಂಡಿಯನ್ ಸೂಪರ್ ಲೀಗ್ ನೋಡುತ್ತಿರುವ ಕೋಟ್ಯಂತರ ಫುಟ್ಬಾಲ್ ಅಭಿಮಾನಿಗಳಿಗಿರಬಹುದು. ಏಕೆಂದರೆ ನಾಲ್ಕು ಬಾರಿ ಫಿಫಾ  ವಿಶ್ವಕಪ್ ಆಡಿರುವ ಆಸ್ಟ್ರೇಲಿಯಾದ ಟಿಮ್ ಕಾಹಿಲ್ ಇಂಡಿಯನ್ ಸೂಪರ್ ಲೀಗ್‌ಗೆ ಕಾಲಿಟ್ಟರು. 2006, 2010, 2014 ಹಾಗೂ 2018ರ ಫಿಫಾ  ವಿಶ್ವಕಪ್ ಆಡಿರುವ ಕಾಹಿಲ್, ಆಸ್ಟ್ರೇಲಿಯಾದ ಪರ 107 ಪಂದ್ಯಗಳನ್ನಾಡಿ 50 ಗೋಲುಗಳನ್ನು ಗಳಿಸಿರುತ್ತಾರೆ. 2004ರ ಒಲಿಂಪಿಕ್ಸ್‌ನಲ್ಲೂ ಕಾಹಿಲ್ ಆಡಿದ್ದಾರೆ. 23 ವರ್ಷದೊಳಗಿನವರ ಅಂತಾರಾಷ್ಟ್ರೀಯ ಪಂದ್ಯ, ಏಷ್ಯಾಕಪ್ ಹಾಗೂ ಆಸ್ಟ್ರೇಲಿಯಾ ಹಾಗೂ ಜಗತ್ತಿನ ಇತರ ಕೆಲವು ಕ್ಲಬ್‌ಗಳಲ್ಲಿ ಆಡಿರುವ ಕಾಹಿಲ್ 148 ಗೋಲುಗಳನ್ನು ಗಳಿಸಿರುತ್ತಾರೆ. ಇಷ್ಟು ಆಡಿದರೂ 38 ವರ್ಷದ ಕಾಹಿಲ್ ಎಲ್ಲಿಯೂ ಬಳಲಿದಂತೆ ಕಾಣದೆ ಕಂಠೀರವ ಅಂಗಣದಲ್ಲಿ ಚೊಚ್ಚಲ ಪಂದ್ಯವನ್ನಾಡಿದಾಗ ಇದ್ದ ಉತ್ಸಾಹದಲ್ಲೇ ಆಡಿರುವುದು ವಿಶೇಷ.

ಬೆಂಗಳೂರು ಫೇವರಿಟ್

ಕಳೆದ ಬಾರಿಯ ಋತುವಿನಲ್ಲಿ  ಬೆಂಗಳೂರು ಎಫ್  ತಂಡ ಜೆಮ್ಷೆಡ್ಪುರದ ವಿರುದ್ಧ ಸೋಲನುಭವಿಸಿತ್ತು. ಆದರೆ ಕಳೆದ ಬಾರಿ ರನ್ನರ್ ಅಪ್‌ಸ್ಥಾನ ಗಳಿಸಿದ್ದ ಬೆಂಗಳೂರು ಹಿಂದಿನ ತಪ್ಪಿನಿಂದ ಪಾಠ ಕಲಿತು ಬಲಿಷ್ಠವಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ  ವಿರುದ್ಧ ಜಯ ಗಳಿಸಿ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕೆ ಕಾಲಿಟ್ಟಿತು. ಟ್ವೆಲ್ತ್ ಮ್ಯಾನ್ ಪ್ರೇಕ್ಷಕರಿಂದ ಸಾಕಷ್ಟು ಬೆಂಬಲ ಗಳಿಸುವ ಬೆಂಗಳೂರು ತಂಡ ಇಲ್ಲಿ ಗೆಲ್ಲುವ ಫೇವರಿಟ್ ಕೂಡ. ಬಿಎಫ್ ಸಿ  ಆಡಿರುವ 9 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಜಯ ಗಳಿಸಿದೆ. ಅಲ್ಲದೆ ಮನೆಯಂಗಣದಲ್ಲಿ ಅತಿ ಹೆಚ್ಚು ಕ್ಲೀನ್ ಶೀಟ್ ಪಡೆದ ತಂಡವಾಗಿದೆ. ಹಾಲಿ ಚಾಂಪಿಯನ್ ವಿರುದ್ಧ ಗೆದ್ದಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ. ಟಾಟಾ ಪಡೆ ಆಡಿರುವ 9 ಪಂದ್ಯಗಳಲ್ಲಿ 4ರಲ್ಲಿ ಜಯ ಗಳಿಸಿದೆ. ಮುಂಬೈ ಎಫ್ ಸಿ ವಿರುದ್ಧದ ಪಂದ್ಯದಲ್ಲಿ 2-0 ಗೋಲಿನಿಂದ ಜಯ ಗಳಿಸಿರುವ ಜೆಮ್ಷೆಡ್ಪುರ ಕೂಡ ಅತ್ಯಂತ ಆತ್ಮವಿಶ್ವಾಸದಲ್ಲಿ ಅಂಗಣಕ್ಕಿಳಿಯಿತು.  ಕಳೆದ ಋತುವಿನಿಂದ ಸತತ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸದ ಜೆಮ್ಷೆಡ್ಪುರ ಕೂಡ ಅತ್ಯಂತ ಆತ್ಮವಿಶ್ವಾಸದಲ್ಲಿದೆ. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಟಾಟಾ ಪಡೆ ಮೂರು ಜಯ ಹಾಗೂ ಒಂದು ಡ್ರಾ ಕಂಡಿದೆ. ನಾಲ್ಕು ವಿಶ್ವಕಪ್ ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾದ ಆಟಗಾರ ಟಿಮ್ ಕಾಹಿಲ್ ಅಂಗಣಕ್ಕಿಳಿದಿದ್ದಾರೆ. ಇದರಿಂದ ಬೆಂಗಳೂರು ದಿಟ್ಟ ಸವಾಲನ್ನು ಎದುರಿಸಬೇಕಾಗಿರುವುದು ಸಹಜ.

Related Articles