Thursday, September 12, 2024

ಒಂದೇ ಅಂಕದಲ್ಲಿ ಸೋತ ಮುಂಬೈ

ಸ್ಪೋರ್ಟ್ಸ್ ಮೇಲ್ ವರದಿ

ಪ್ರೊ ಕಬಡ್ಡಿ ಲೀಗ್‌ನ ರೋಚಕ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ಯು ಮುಂಬಾ ವಿರುದ್ಧ ಏಕೈಕ ಅಂಕದಿಂದ ಗೆದ್ದಿದೆ. ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ 33-32 ಅಂತರದಲ್ಲಿ ಯು ಮುಂಬಾ ತಂಡಕ್ಕೆ ಸೋಲುಣಿಸಿತು.

ಮಹಾರಾಷ್ಟ್ರ ಡರ್ಬಿ ಎಂದೇ ಜನಜನಿತವಾಗಿರುವ ಪಂದ್ಯದಲ್ಲಿ ಕೊನೆಯ ಕ್ಷಣದ ವರೆಗೂ ರೋಚಕತೆ ಮನೆ ಮಾಡಿತ್ತು. ಪಂದ್ಯ ಇತ್ತಂಡಗಳಿಗೂ ಫೇವರ್ ಆಗಿತ್ತು. ಸಿದ್ಧಾರ್ಥ ದೇಸಾಯಿ ಎಸಗಿದ ಪ್ರಮಾದ ಪುಣೇರಿ ಪಲ್ಟನ್ ತಂಡಕ್ಕೆ ಜಯ ತಂದುಕೊಟ್ಟಿತು. ನಿತಿನ್ ತೋಮಾರ್ ರೈಡಿಂಗ್‌ನಲ್ಲಿ 13 ಅಂಕ ಗಳಿಸಿದರೆ, ಗಿರೀಶ್ ಎರ್ನಾಕ್ 6 ಅಂಕ ಗಳಿಸಿ ತಂಡಕ್ಕೆ ನೆರವಾದರು.ಸಿದ್ಧಾರ್ಥ ದೇಸಾಯಿ ರೈಡಿಂಗ್‌ನಲ್ಲಿ 15 ಅಂಕ ಗಳಿಸಿದ್ದರು, ಆದರೆ ಕೊನೆಯ ಕ್ಷಣದಲ್ಲಿ ಅಂಕಣದ ಹೊರಗಡೆ ಕಾಲಿಟ್ಟು ಪ್ರಮಾದವೆಸಗಿದರು.
ಯು ಮುಂಬಾ ಆರಂಭದಲ್ಲೇ ರೈಡಿಂಗ್‌ನಲ್ಲಿ ಪ್ರಭುತ್ವ ಸಾಧಿಸಿತು. ಸಿದ್ಧಾರ್ಥ  2 ಅಂಕ ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಆದರೆ ಮೂರನೇ ನಿಮಿಷದಲ್ಲಿ ಪುಣೆ ತಂಡ ಸಮಬಲ ಸಾಧಿಸಿತು.  8ನೇ ನಿಮಿಷದಲ್ಲಿ ನಿತಿನ್ ತೋಮಾರ್ ಮೊದಲ ರೈಡ್ ಪಾಯಿಂಟ್ ಗಳಿಸುವ ಮೂಲಕ ಪಂದ್ಯ 4-5ರಲ್ಲಿ ಸಾಗಿತು. 13ನೇ ನಿಮಿಷದಲ್ಲಿ ತೋಮಾರ್ ಎರಡು ರೈಡ್ ಅಂಕ ಗಳಿಸುವವುದರೊಂದಿಗೆ ಪುಣೆ 13-7ರಲ್ಲಿ ಮುನ್ನಡೆ ಕಂಡಿತು.  ಪುಣೆ ತಂಡ 15ನೇ ನಿಮಿಷದಲ್ಲಿ ಆಲೌಟ್ ಆಗುವುದರೊಂದಿಗೆ ಮುಂಬಾ 15-9ರಲ್ಲಿ ಮೇಲುಗೈ ಸಾಧಿಸಿತು.  ಪ್ರಥಮಾರ್ಧ  17-12ರಲ್ಲಿ ಅಂತ್ಯಗೊಂಡಿತು.
ಎರಡನೇ ಹಂತದಲ್ಲಿ ಯು ಮುಂಬಾ ತಂಡ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತು. ದಿಟ್ಟ  ಹೋರಾಟ ನೀಡಿದ ಮುಂಬೈ ಪಡೆ ಕೇವಲ ಒಂದು ಅಂಕದ ಅಂತರ ಕಾಯ್ದುಕೊಂಡಿತು. ಐದು ನಿಮಿಷಗಳ ಪಂದ್ಯ ಬಾಕಿ ಇರುವಾಗ ಪುಣೇರಿ ಪಲ್ಟನ್ ತಂಡ 2 ಅಂಕಗಳ ಮುನ್ನಡೆ ಕಂಡಿತು. 36ನೇ ನಿಮಿಷದಲ್ಲಿ ಪಂದ್ಯ 31-31ರಲ್ಲಿ ಸಮಬಲಗೊಂಡಿತು. ಸಿದ್ಧಾರ್ಥ ದೇಸಾಯಿ ಕೊನೆಯ ಕ್ಷಣದಲ್ಲಿ ಎಸಗಿದ ಪ್ರಮಾದ ಪುಣೆ ತಂಡಕ್ಕೆ ಎರಡು ಅಂಕ ತಂದುಕೊಟ್ಟಿತು. ಮನೆಯಂಗಣದಲ್ಲಿ ಪುಣೆ ಅದ್ಭುತ ಜಯ ಗಳಿಸಿತು.

Related Articles