ವಾರಿಯರ್ಸ್ 40, ಯೋಧಾಸ್ 40 ಫಲಿತಾಂಶ ಮಾತ್ರ ಫಿಫ್ಟಿ, ಫಿಫ್ಟಿ

0
236
ಸ್ಪೋರ್ಟ್ಸ್ ಮೇಲ್ ವರದಿ

ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೂರನೇ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿದೆ. ಬೆಂಗಾಲ್ ವಾರಿಯರ್ಸ್ ಹಾಗೂ ಯುಪಿ ಯೋಧಾಸ್ ನಡುವೆ ನಡೆದ ಪಂದ್ಯ ರೋಚವಾಗಿ 40-40 ಅಂಕಗಳಲ್ಲಿ ಕೊನೆಗೊಂಡಿತು.

ಬೆಂಗಾಲ್ ವಾರಿಯರ್ಸ್ ತಂಡ ಈ ಸಮಬಲ ಸಾಧನೆಯೊಂದಿಗೆ ಅಜೇಯದ ಹಾದಿ ಮುಂದುವರಿಸಿದೆ, ಆದರೆ ಜಯ ಕಾಣದ ನಿರಾಸೆ ಇರುವುದು ಸಹಜ. ವಾರಿಯರ್ಸ್ ಪರ ಮಣಿಂದರ್ ಸಿಂಗ್ 16 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು, ಸುರ್ಜೀತ್ ಸಿಂಗ್‌ಟ್ಯಾಕಲ್‌ನಲ್ಲಿ 6 ಅಂಕ ಗಳಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು. ಯುಪಿ ಯೋಧಾಸ್ ಪರ ಕನ್ನಡಿಗರೇ ಮಿಂಚಿದ್ದು ವಿಶೇಷ. ಪ್ರಶಾಂತ್ ಕುಮಾರ್ ರೈ 13 ಹಾಗೂ ರಿಶಾಂಕ್ ದೇವಾಡಿಗ ರೈಡಿಂಗ್‌ನಲ್ಲಿ 6 ಅಂಕ ಗಳಿಸಿದರು.
ಜಾಂಗ್ ಕುನ್ ಲೀ ಎರಡು ರೈಡ್‌ಗಳಲ್ಲಿ ತಲಾ ಎರಡು ಅಂಕ ಗಳಿಸುವುದರೊಂದಿಗೆ ಬೆಂಗಾಲ್ ವಾರಿಯರ್ಸ್ 4-0 ಅಂತರದಲ್ಲಿ ಉತ್ತಮ ಆರಂಭ  ಕಂಡಿತ್ತು. ಆದರೆ ಯೋಧಾಸ್ ಪಡೆ ತಿರುಗೇಟು ನೀಡಿ ಆರನೇ ನಿಮಿಷದಲ್ಲಿ 6-6ರ ಸಮಬಲ ಸಾಧಿಸಿತು. 11ನೇ ನಿಮಿಷದಲ್ಲಿ ರಿಶಾಂಕ್ ದೇವಾಡಿಗ ಸೂಪರ್ ರೈಡ್ ಮೂಲಕ ಯೋಧಾ  ಪಡೆ 12-10 ಅಂತರದಲ್ಲಿ ಮುನ್ನಡೆ ಕಂಡಿತು. ಪ್ರಥಮಾರ್ಧ  18-15ರಲ್ಲಿ ಮುಗಿಯಿತು.
ದ್ವಿತಿಯಾರ್ಧದಲ್ಲಿ ಯುಪಿ ಯೋಧಾಸ್ ಆಲೌಟ್ ಸಾಧನೆ ಮಾಡುವ ಮೂಲಕ 13-17 ಮೈಲುಗೈ ಸಾಧಿಸಿತು. 30 ನಿಮಿಷಗಳ ಆಟ ಮುಗಿದಾಗ ಯುಪಿ ಯೋಧಾಸ್ 28-21 ಅಂತರದಲ್ಲಿ ಜಯದ ಹಾದಿಯನ್ನು ಸುಗಮಪಡಿಸಿಕೊಂಡಿತ್ತು. ಸುರ್ಜೀತ್‌ಸಿಂಗ್ ರೈಡಿಂಗ್‌ನಲ್ಲಿ ಐದು ಅಂಕಗಳಿಸುವುದರೊಂದಿಗೆ ಬೆಂಗಾಲ್ ವಾರಿಯರ್ಸ್ 34ನೇ ನಿಮಿಷದಲ್ಲಿ ದಿಟ್ಟ ಉತ್ತರ ನೀಡಿತು. ಬೆಂಗಾಲ್ ವಾರಿಯರ್ಸ್ ಪಂದ್ಯ ಮುಗಿಯಲು ಐದು ನಿಮಿಷ ಬಾಕಿ ಇರುವಾಗ ಆಲೌಟ್ ಆದ ಪರಿಣಾಮ ಅಂಕ 32-32ರಲ್ಲಿ ಸಮಬಲಗೊಂಡಿತು. 38ನೇ ನಿಮಿಷದಲ್ಲಿ ಮಣಿಂದರ್ ಸಿಂಗ್ ಸೂಪರ್ ಟೆನ್ ಸಾಧನೆ ಗುರಿ ತಲಪುವುದರೊಂದಿಗೆ ಬೆಂಗಾಲ್ ವಾರಿಯರ್ಸ್ 36-34ರಲ್ಲಿ ಮುನ್ನಡೆಯಿತು. 39ನೇ ನಿಮಿಷದಲ್ಲಿ ಪ್ರಶಾಂತ್ ರೈ ಎರಡು ರೈಡಿಂಗ್ ಅಂಕ ಗಳಿಸುವುದರೊಂದಿಗೆ ಪಂದ್ಯ 36-36ರಲ್ಲಿ ಸಮಬಲಗೊಂಡಿತು. ಮಣಿಂದರ್ ಸಿಂಗ್ 40ನೇ ನಿಮಿಷದಲ್ಲಿ ಎರಡು ಅಂಕ ಗಳಿಸುವುದರೊಂದಿಗೆ ಯುಪಿ ಯೋಧಾಸ್ 40-38ರಲ್ಲಿ ಮೇಲುಗೈ ಸಾಧಿಸಿತು. ಪ್ರಶಾಂತ್ ರೈ ಅಂತಿಮ ಹಂತದಲ್ಲಿ ಗಳಿಸಿದ ಎರಡು ಅಂಕಗಳಿಂದ ಪಂದ್ಯ 40-40ರಲ್ಲಿ ಸಮಬಲಗೊಂಡಿತು.