Saturday, October 12, 2024

ಪ್ರಸಿದ್ಧ ಕೃಷ್ಣ: 9 ಎಸೆತಗಳಲ್ಲಿ ಹ್ಯಾಟ್ರಿಕ್‌‌ ಸಹಿತ 5 ವಿಕೆಟ್‌!

 

ಪಾಟ್ಚೆಫ್‌ಸ್ಟ್ರೂಮ್‌: ವಿಶ್ವಕಪ್‌ ಮುಗಿದ ನಂತರ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಪಂದ್ಯದಲ್ಲಿ ದುಬಾರಿ ಬೌಲರ್‌ ಎನಿಸಿ ನಿರಾಸೆ ಮೂಡಿಸಿದ್ದ ಕರ್ನಾಟಕದ ವೇಗದ ಬೌಲರ್‌ ಪ್ರಸಿಧ್‌ ಕೃಷ್ಣ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ನಡೆದ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ 9 ಎಸೆತಗಳಲ್ಲಿ ಹ್ಯಾಟ್ರಿಕ್‌ ಸಹಿತ 5 ವಿಕೆಟ್‌ ಗಳಿಸಿ ಅದ್ಭುತ ಸಾಧನೆ ಮಾಡಿದ್ದಾರೆ. Prasidh Krishna takes 5 wickets in 9 balls, including all bowled Hat-Trick.

ಇತ್ತಂಡಗಳ ನಡುವೆ ನಡೆದ ನಾಲ್ಕು ದಿನಗಳ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ಎ ತಂಡದ ಪರ ಜೇನ್‌ ಡು ಪ್ಲೆಸಿಸ್‌ (106) ಶತಕ ಗಳಿಸುವ ಮೂಲಕ ಆತಿಥೇಯ ತಂಡ 319 ರನ್‌ ಗಳಿಸಿತು. 95ನೇ ಓವರ್‌ ಎಸೆದ ಪ್ರಸಿಧ್‌ ಕೃಷ್ಣ 5 ನೇ ಎಸೆತದಲ್ಲಿ ಶತಕ ಗಳಿಸಿ ಆಡುತ್ತಿದ್ದ ಡು ಪ್ಲೆಸಿಸ್‌ ಅವರ ವಿಕೆಟ್‌ ಗಳಿಸಿದರು. ನಂತರದ ಎಸೆತದಲ್ಲಿ ಎತಾನ್‌ ಬಾಷ್‌‌ ಅವರನ್ನು ಶೂನ್ಯ ರನ್‌ಗೆ ಪೆವಿನಿಯನ್‌ಗೆ ಕಳುಹಿಸಿದರು. ನಂತರ 97ನೇ ಓವರ್‌ನ 5 ನೇ ಎಸೆತದಲ್ಲಿ ಕರ್ಟ್ಲಿನ್‌ ಮನ್ನಿಕಮ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. 97.6ನೇ ಓವರ್‌ನಲ್ಲಿ ಸಿಯಾ ಪ್ಲಾಟ್ಜೆ ಅವರನ್ನೂ ಕ್ಲೀನ್‌ ಬೌಲ್ಡ್‌ ಮಾಡಿದರು. ಈಗ ಹ್ಯಾಟ್ರಿಕ್‌ ಅವಕಾಶ. ನಂತರದ ಓವರ್‌ ಶಾರ್ದೂಲ್‌ ಠಾಕೂರ್‌ ಎಸೆದರೂ ವಿಕೆಟ್‌ ಸಿಗಲಿಲ್ಲ. ಮತ್ತೆ ಪ್ರಸಿಧ್‌ಗೆ 99ನೇ ಓವರ್‌ ಎಸೆಯುವ ಅವಕಾಶ. ಮೊದಲ ಎಸೆತದಲ್ಲೇ ಒಡಿರಲೆ ಮೊದಿಮಕಾನೆ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿ ಹ್ಯಾಟ್ರಿಕ್‌‌ ಸಾಧನೆ ಮಾಡಿದರು. ಒಟ್ಟು ಎಸೆದ 9 ಎಸೆತಗಳಲ್ಲಿ ಕ್ಲೀನ್‌ ಬೌಲ್ಡ್‌ ಹ್ಯಾಟ್ರಿಕ್‌ ಸೇರಿದಂತೆ 5 ವಿಕೆಟ್‌ ಗಳಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಪ್ರಸಿಧ್‌ ಕೃಷ್ಣ ಅವರಿಗೆ ಈ ಸಾಧನೆ ಮನೋಬಲವನ್ನು ಹೆಚ್ಚಿಸಲಿದೆ. ಅತ್ಯಂತ ಆತ್ಮವಿಶ್ವಾಸದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ನೆರವಾಗಬಹುದು.

ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರದೋಶ್‌ ರಂಜನ್‌ ಪೌಲ್‌ (163) ಅವರ ಶತಕದ ನೆರವಿನಿಂದ 417 ರನ್‌ ಗಳಿಸಿತ್ತು. ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಜೇನ್‌ ಡು ಪ್ಲೆಸಿಸ್‌ ಎರಡನೇ ಇನ್ನಿಂಗ್ಸ್‌ನಲ್ಲೂ ಅಜೇಯ 50 ರನ್‌ ಗಳಿಸಿರುವುದು ವಿಶೇಷವಾಗಿತ್ತು.

Related Articles