Saturday, July 27, 2024

IND vs PAK Match: ವಿಶ್ವಕಪ್‌ “ಅನಧಿಕೃತ” ಆರಂಭ?

ಬೆಂಗಳೂರು: ನಾಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವ ಮೂಲಕ 2023ರ ವಿಶ್ವಕಪ್‌ಗೆ ICC Cricket World Cup “ಅನಧಿಕೃತ” ಚಾಲನೆ ದೊರೆಯಲಿದೆ.

ಅಕ್ಟೋಬರ್‌ 5 ರಂದು ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವೆ ಮೊದಲ ಪಂದ್ಯ ನಡೆದಿತ್ತು. ನಿಜವಾಗಿಯೂ ಅಂದು ವಿಶ್ವಕಪ್‌ ಉದ್ಘಾಟನೆ ಅಗಬೇಕಾಗಿತ್ತು. ಈ ಹಿಂದೆ ಯೋಜಿಸಿದಂತೆ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕಾಗಿತ್ತು. ಆದರೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ BCCI ಯಾವುದೇ ಕಾರಣ ಕೊಡದೆ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು. ಕೇವಲ ನಾಯಕರು ಒಟ್ಟು ಸೇರಿ ಒಂದು ಗ್ರೂಪ್‌ ಫೋಟೋ ತೆಗೆಸಿಕೊಳ್ಳುವುದೇ ದೊಡ್ಡ ಮನರಂಜನಾ ಕಾರ್ಯಕ್ರಮವಾಗಿತ್ತು. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯ ಎಂದಾಕ್ಷಣ ಅನಗತ್ಯ ಪ್ರಚಾರ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಅದು ಹಾಕಿ ಇರಲಿ ಅಥವಾ ಇನ್ನಾವುದೇ ಪಂದ್ಯವಿರಲಿ ಪಾಕಿಸ್ತಾನದ ವಿರುದ್ಧ ಎಂದಾಕ್ಷಣ ವಾತಾವರಣವೇ ಬದಲಾಗುತ್ತದೆ. ಮೊನ್ನೆ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಯಾವುದೇ ಪಂದ್ಯಗಳ ಫಲಿತಾಂಶ ಹಾಗೂ ವಿವರಗಳನ್ನು ಕಳುಹಿಸದ ಪಿಆರ್‌ಒ ಗಳು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೆ ಮುನ್ನ ದಿನ ವರದಿ ಕಳುಹಿಸುತ್ತಾರೆ. ಅದಕ್ಕೊಂದು “ಹೈ ಓಲ್ಟೇಜ್‌” ಎಂಬ ವಿಶೇಷಣವನ್ನೂ ನೀಡುತ್ತಾರೆ.

ಬಿಸಿಸಿಐ BCCI ಯೋಚಿಸಬೇಕು:

ಬಿಸಿಸಿಐ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಯೋಚಿಸಬೇಕು. ಒಂದು ವಿಶ್ವಕಪ್‌ ಎಂದಾಕ್ಷಣ ಆರಂಭದಲ್ಲೇ ಉದ್ಘಾಟನಾ ಕಾರ್ಯಕ್ರಮವಿರುತ್ತದೆ. ಆದರೆ 11 ಕಾರ್ಯಕ್ರಮಗಳ ನಂತರ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸುವುದನ್ನು ಇತರ ಸದಸ್ಯ ರಾಷ್ಟ್ರಗಳೂ ಪ್ರಶ್ನಿಸಬೇಕು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಅಸಹಾಯಕ ಸದಸ್ಯ ರಾಷ್ಟ್ರಗಳು ಈ ಡ್ರಾಮಗಳಿಗೆ ಬೆಲೆ ಕೊಡುವುದಿಲ್ಲ. ಮೊದಲ ಪಂದ್ಯದಲ್ಲಿ ಗುಜರಾತ್‌ ಬಿಜೆಪಿ ಪಕ್ಷ ಮಹಿಳೆಯರಿಗೆ 30 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳನ್ನು ಉಚಿತವಾಗಿ ನೀಡಿತ್ತು ಜೊತೆಯಲ್ಲಿ ಊಟೋಪಚಾರದ ವ್ಯವಸ್ಥೆಯನ್ನೂ ಕಲ್ಪಿಸಿತ್ತು. ಆದರೆ ಯಾರೂ ಕ್ರೀಡಾಂಗಣದ ಕಡೆಗೆ ತಿರುಗಿ ನೋಡಲಿಲ್ಲ. ಸಂಜೆ ಹೊತ್ತು ಒಂದಿಷ್ಟು ಜನ ಆಗಮಿಸಿದ್ದರು. ಗೋಲ್ಡನ್‌ ಟಿಕೆಟ್‌ಗಳಿಗೂ ಶ್ರೀಂತರು, ಗೌರವಾನ್ವಿತರು ಆಗಮಿಸಲಿಲ್ಲ. ಬಿಸಿಸಿಐ ಯೋಜನೆ ಮಾಡಿದ್ದೇ ಬೇರೆ, ಆದರೆ ಆದೇಶ ಆದದ್ದೇ ಬೇರೆ. ಬಿಸಿಸಿಐ ಕಾರ್ಯದರ್ಶಿ ಜೆ ಶಾ ಅವರು ಕೇಳುವುದು ಇಬ್ಬರ ಮಾತನ್ನು ಮಾತ್ರ. ಅವರಿಗೆ ಐಸಿಸಿ ಹಾಗೂ ಇತರ ರಾಷ್ಟ್ರಗಳ ನಿಲುವುಗಳು ಮುಖ್ಯವೇ ಅಲ್ಲ,

ಒಂದು ಜಾಗತಿಕ ಮಟ್ಟದ ಕ್ರೀಡಾಕೂಟದಲ್ಲಿ ಬಿಸಿಸಿಐನ ಈ ವರ್ತನೆ ಕ್ರೀಡಾಸ್ಫೂರ್ತಿಗೆ ವಿರುದ್ಧವಾದುದು. ಜನ ಬರಲಿಲ್ಲ ಅಂದ ಕಾರಣಕ್ಕೆ ಆ ಪಂದ್ಯ ಮುಖ್ಯವಲ್ಲ ಎಂದಲ್ಲ. ಜನ ಯಾಕೆ ಬರಲಿಲ್ಲ? ಉಚಿತ ಕೊಟ್ಟರೂ ಯಾಕೆ ಬರಲಿಲ್ಲ? ಜನರು ಸ್ವಇಚ್ಛೆಯಿಂದ ಬರುವುದು ಬೇರೆ ಅವರಿಗೆ ಉಚಿತ ಭರವಸೆಗಳನ್ನು ನೀಡಿ ಕರೆದುಕೊಂಡು ಬರುವುದೇ ಬೇರೆ. ಜನರು ಸೇರುವುದೇ ಬೇರೆ, ಜನರನ್ನು ಸೇರಿಸುವುದೇ ಬೇರೆ. ಜನರಿಗೆ ಕ್ರಿಕೆಟ್‌ ಬಗ್ಗೆ ಆಸಕ್ತಿ ಮೊದಲಿನಂತೆ ಉಳಿದಿಲ್ಲ. ಜನ ಮನರಂಜನೆಗಾಗಿ ಕ್ರೀಡಾಂಗಣಲ್ಲಿ ಸೇರುತ್ತಾರೆ. ಐಪಿಎಲ್‌ ನೀಡುವ ಥ್ರಿಲ್‌ ವಿಶ್ವಕಪ್‌ ನೀಡುತ್ತಿಲ್ಲ. ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಾದರೂ ಜನ ಸೇರಲಿ ಎಂದು ಕಸರತ್ತು ನಡೆಸುತ್ತಾರೆ. ಕ್ರಿಕೆಟ್‌ ಪಂದ್ಯಗಳು ಎಲ್ಲರನ್ನೂ ಖುಷಿ ಪಡಿಸುವುದಕ್ಕಾಗಿ ನಡೆಸಬೇಕೇ ವಿನಃ ಯಾರೋ ಒಂದಿಬ್ಬರನ್ನು, ಒಂದು ಸಮುದಾಯವನ್ನು ಖುಷಿ ಪಡಿಸುವ ಉದ್ದೇಶದಿಂದ ನಡೆಯಬಾರದು.

ನಾಳೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏನೇ ನಡೆದರೂ ಅದು ನಾಟಕ. ನಾಳೆ ನಡೆಯುವ ಮನರಂಜನಾ ಕಾರ್ಯಕ್ರಮ ಹಳಸಿದ ಅನ್ನವನ್ನು ಮತ್ತೊಮ್ಮೆ ಬಿಸಿ ಮಾಡಿ ತಿಂದಂತೆ. ಈಗಾಗಲೇ ಉದ್ಘಾಟನೆ ನಡೆದಿರುವ ವಿಶ್ವಕಪ್‌ ನಾಳೆ ಮತ್ತೊಮ್ಮೆ ಅನಧಿಕೃತವಾಗಿ ಉದ್ಘಾಟನೆಗೊಳ್ಳಲಿದೆಯೇ ವಿನಃ ಅದನ್ನು ಉದ್ಘಾಟನೆ ಎಂದು ಕರೆಯಲಾಗದು.

Related Articles