Saturday, October 12, 2024

ಯುವ ಪಲ್ಟಾನ್‌ನಲ್ಲಿ ಪಳಗಿದ “ಮಂಡ್ಯದ ಗಂಡು” ವಿಶ್ವಾಸ್‌ ಪೈರೇಟ್ಸ್‌ಗೆ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಓದುತ್ತಿದ್ದ ಮಂಡ್ಯ ಸಾತನೂರಿನ ಯುವ ಕಬಡ್ಡಿ ಆಟಗಾರ ವಿಶ್ವಾಸ್‌ ಮಂಗಳೂರಿನ ಉಳ್ಳಾಲದಲ್ಲಿ ನಡೆಯುತ್ತಿದ್ದ ಟೂರ್ನಿಯೊಂದರಲ್ಲಿ ಉತ್ತಮ ಪ್ರದರ್ಶನ ತೋರಿದರು. ಈ ಟೂರ್ನಿಯನ್ನು ನೋಡಲು ಮಂಗಳೂರಿಗೆ ಆಗಮಿಸಿದ್ದ ಪುಣೇರಿ ಪಲ್ಟನ್‌ ತಂಡದ ಅಂದಿನ ಕೋಚ್‌ ರವಿ ಶೆಟ್ಟಿ ವಿಶ್ವಾಸ್‌ ಅವರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಯುವ ಪಲ್ಟಾನ್‌ಗೆ ಸೇರಿಸಿಕೊಂಡರು. ಒಂದು ವರ್ಷಗಳ ಕಾಲ ಯುವ ಪಲ್ಟಾನ್‌ನಲ್ಲಿ ತರಬೇತಿ ಪಡೆದ ವಿಶ್ವಾಸ್‌ 9ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ನಲ್ಲಿ ಪಾಟ್ನಾ ಪೈರೇಟ್ಸ್‌ ತಂಡವನ್ನು ನವ ಯುವ ಆಟಗಾರನಾಗಿ ಸೇರಿಕೊಂಡಿದ್ದಾರೆ.

ಬಡ ರೈತ ಕುಟುಂಬದಿಂದ ಬಂದ ವಿಶ್ವಾಸ್‌ ಇತ್ತೀಚಿಗೆ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡವರು. ಬದುಕಿನ ಸಂಕಷ್ಟಗಳ ನಡುವೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಕಬಡ್ಡಿಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡರು. ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಪ್ರೋತ್ಸಾಹ , ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಗುರು ರವಿ ಶೆಟ್ಟಿ ಅವರ ನೆರವಿನಿಂದ ಇಂದು ವಿಶ್ವಾಸ್‌ ಪ್ರೋ ಕಬಡ್ಡಿ ಲೀಗ್‌ನಲ್ಲಿ ಯುವ ಆಟಗಾರನಾಗಿ ಪದಾರ್ಪಣೆ ಮಾಡಲಿದ್ದಾರೆ.

“ಆಳ್ವಾಸ್‌ ಕಾಲೇಜಿನಲ್ಲಿ ಓದುತ್ತಿರುವಾಗ ಅಲ್ಲಿ ಉತ್ತಮ ಪ್ರೋತ್ಸಾಹ ಸಿಕ್ಕಿತ್ತು. ಉಳ್ಳಾಲದಲ್ಲಿ ನಡೆದ ಟೂರ್ನಿಯಲ್ಲಿ ರವಿ ಶೆಟ್ಟಿ ಅವರು ನನ್ನನ್ನು ಗಮನಿಸುತ್ತಿದ್ದಾರೆ ಎಂದು ಗೊತ್ತಿರಲಿಲ್ಲ. ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದೆ. ಪಂದ್ಯ ಮುಗಿದ ನಂತರ ಅವರು ನನ್ನನ್ನು ಕರೆದು ಪುಣೇರಿ ಪಲ್ಟನ್‌ ತಂಡದ ಯುವ ಪಡೆ ಯುವ ಪಲ್ಟಾನ್‌ ಸೇರುವಂತೆ ಆಹ್ವಾನವಿತ್ತರು. ನಾನು ಒಪ್ಪಿ ಒಂದು ವರ್ಷ ಕಾಲ ಉತ್ತಮ ತರಬೇತಿ ಪಡೆದೆ. ರೈಡಿಂಗ್‌ನಲ್ಲಿ ಹೊಸ ತಂತ್ರಗಳನ್ನು ಕಲಿತುಕೊಂಡೆ. ಮುಂದಿನ ಲೀಗ್‌ನಲ್ಲಿ ಅವಕಾಶ ಸಿಕ್ಕಾಗ ನನ್ನ ನೈಜ ಆಟವನ್ನು ಪ್ರದರ್ಶಿಸುವೆ,” ಎಂದು ವಿಶ್ವಾಸ್‌ sportsmail ಗೆ ತಿಳಿಸಿದರು.

“ತಂದೆಯನ್ನು ಕಳೆದುಕೊಂಡಾಗ ನಾನು ಬಹಳ ಖಿನ್ನತೆಗೆ ಒಳಗಾಗಿದ್ದೆ. ಆಗ ರವಿ ಶೆಟ್ಟಿ ಅವರು, ನಿನ್ನೊಂದಿಗೆ ನಾನಿದ್ದೇನೆ, ಎಂದು ಆತ್ಮವಿಶ್ವಾಸ ತುಂಬಿದರು. ಇದು ನನ್ನನ್ನು ಕಬಡ್ಡಿಯಲ್ಲಿ ಮುಂದುವರಿಯುವಂತೆ ಮಾಡಿತು. ಆಡುವಾಗ ಸಿಕ್ಕ ಅನುಭವ ಮತ್ತು ಒಂದು ವರ್ಷ ಪಲ್ಟಾನ್‌ನಲ್ಲಿ ಸಿಕ್ಕ ಅನುಭವ ಇವೆರಡೂ ನನ್ನನ್ನು ಇಂದು ಒಬ್ಬ ಆಟಗಾರನನ್ನಾಗಿ ಮಾಡಿದೆ. ತಂಡಕ್ಕಾಗಿ ನನ್ನಿಂದಾದ ಉತ್ತಮ ಪ್ರಯತ್ನವನ್ನು ಮಾಡುವೆ,” ಎಂದು ವಿಶ್ವಾಸ್‌ ಆತ್ಮವಿಶ್ವಾಸದಿಂದ ನುಡಿದರು.

ಬಿಡುವಿದ್ದಾಗ ಕುರಿ ಕಾಯುವೆ:

ಕೃಷಿ ಕುಟುಂಬದಿಂದ ಬಂದ ವಿಶ್ವಾಸ್‌ ಯಾವ ಕೆಲಸಕ್ಕೂ ಹಿಂಜರಿಯುವವರಲ್ಲ. ಬದುಕು ನೀಡುವ ಯಾವುದೇ ಕೆಲಸವನ್ನು ನಾನು ಮಾಡುತ್ತಿರುವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. “ಅಭ್ಯಾಸ ನಿರಂತರವಾಗಿ ಸಾಗಿದೆ. ಮನೆಯಲ್ಲಿ ಯಾವುದೇ ಕೆಲಸವಿದ್ದರೂ ನೆರವಾಗುತ್ತೇನೆ. ಕುರಿ, ದನಗಳನ್ನು ಸಾಕುವುದರಿಂದ ಸಾಕಷ್ಟು ಕೆಲಸವಿರುತ್ತದೆ. ಕೆಲವೊಮ್ಮೆ ಕುರಿ ಮೇಯಿಸುತ್ತೇನೆ. ನನ್ನಣ್ಣ ವಿವೇಕ್ ಮಂಡ್ಯದಲ್ಲಿ ಕೆಲಸ ಮಾಡಿಕೊಂಡು ಕಾಲೇಜು ಓದುತ್ತಿದ್ದಾನೆ. ಆತನೇ ನನಗೆ ಸ್ಫೂರ್ತಿ,” ಎನ್ನುತ್ತಾರೆ ವಿಶ್ವಾಸ್‌.

ಕೋವಿಡ್‌ ವೇಳೆ ತರಬೇತಿ:

ದೇಶವನ್ನು ಕೋವಿಡ್‌ ಸಾಂಕ್ರಾಮಿಕ ರೋಗ ಕಾಡಿದಾಗ ಜನಸಾಮಾನ್ಯರ ಬದುಕಿನೊಂದಿಗೆ ಕ್ರೀಡಾಪಟುಗಳ ಬದುಕು ಕೂಡ ತತ್ತರಿಸಿತ್ತು. ಈ ಸಂದರ್ಭದಲ್ಲಿ ರವಿ ಶೆಟ್ಟಿ ಅವರು ಮಾಡಿದ ಸಹಾಯವನ್ನು ವಿಶ್ವಾಸ್‌ ಸ್ಮರಿಸಿದ್ದಾರೆ. “ಕೋವಿಡ್‌ ವೇಳೆ ರವಿ ಸರ್‌ 7-8  ತಿಂಗಳ ಕಾಲ ಅವರ ಮಗನಂತೆ ನಮ್ಮನ್ನು ಕಂಡುಕೊಂಡರು. ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಮಾಡುತ್ತಿದ್ದರು. ಕೇವಲ ಕಬಡ್ಡಿ ಮಾತ್ರವಲ್ಲದೆ ಬದುಕಿಗೂ ನೆರವಾದರು. ಇಂಥ ಗುರುವಿನಲ್ಲಿ ತರಬೇತಿ ಪಡೆದ ನಾನು ಧನ್ಯ. ಅವರು ನಮಗೆ ಪಟ್ಟ ಶ್ರಮಕ್ಕಾಗಿ ಉತ್ತಮವಾಗಿಯೇ ಆಡುವೆ,” ಎಂದರು.

ಹಿರಿಯ ಆಟಗಾರ ರಾಕಿ ನೆರವು: ರಾಷ್ಟ್ರೀಯ ಹಿರಿಯ ಆಟಗಾರ ರಾಕಿ ಸೇರಿದಂತೆ ಮಂಡ್ಯದ ಹಲವು ಆಟಗಾರರು ಕಬಡ್ಡಿ ಆಡುವುದನ್ನು ನೋಡಿ ಕಲಿತೆ ಎನ್ನುತ್ತಾರೆ ವಿಶ್ವಾಸ. “ಮಂಡ್ಯದ ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಕಬಡ್ಡಿ ಬಗ್ಗೆ ಬಹಳ ಆಸಕ್ತಿ. ರಾಷ್ಟ್ರೀಯ ಹಿರಿಯ ಆಟಗಾರ ರಾಕಿ ಅವರ ಆಟವನ್ನು ಹತ್ತಿರದಿಂದ ನೋಡಿದ್ದೆ. ಅದೇ ರೀತಿ ಮಂಡ್ಯದ ಅನೇಕ ಆಟಗಾರರ ಆಟ ನನಗೆ ಪ್ರೇರಣೆ ನೀಡಿದೆ. ಮಂಡ್ಯದಲ್ಲಿ ಕಬಡ್ಡಿ ಆಟ ಉತ್ತಮವಾಗಿದೆ. ಈ ನೆಲದ ಮಗನಾಗಿ ಪ್ರೋ ಲೀಗ್‌ನಲ್ಲಿ ಆಡಲು ಹೆಮ್ಮೆ ಅನಿಸುತ್ತಿದೆ,” ಎಂದು ವಿಶ್ವಾಸ್‌ ಖುಷಿಯಿಂದ ಹೇಳಿದರಲ್ಲದೆ, ತಮ್ಮ ಕಬಡ್ಡಿ ಬದುಕಿನ ಹಾದಿಯಲ್ಲಿ ನೆರವಾದವರನ್ನು ಸ್ಮರಿಸಲು ಮರೆತಿಲ್ಲ.

ಉತ್ತಮ ರೈಡರ್‌ ಆಗಿರುವ ವಿಶ್ವಾಸ್‌ ಈಗ ಮಂಡ್ಯದ ಯುವ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಮಂಡ್ಯದಲ್ಲಿ ಉತ್ತಮ ಮ್ಯಾಟ್‌ ಕಬಡ್ಡಿ ಅಂಗಣದ ಅಗತ್ಯವಿದ್ದು, ಇದು ಸಾಧ್ಯವಾದರೆ ಇನ್ನೂ ಹೆಚ್ಚಿನ ಯುವ ಆಟಗಾರರು ರಾಷ್ಟ್ರ ಮಟ್ಟದಲ್ಲಿ ಮಿಂಚಲು ಸಾಧ್ಯ ಎಂದರು.

ಯುವ ಆಟಗಾರ ವಿಶ್ವಾಸ್‌ ಅವರ ಬಗ್ಗೆ ಮಾತನಾಡಿದ ಕೋಚ್‌ ರವಿ ಶೆಟ್ಟಿ,”ಟೂರ್ನಿಯೊಂದರಲ್ಲಿ ಇಬ್ಬರು ಆಟಗಾರರನ್ನು ಗುರುತಿಸಿದೆ, ಇಬ್ಬರೂ ಪಾಟ್ನಾ ಪೈರೇಟ್ಸ್‌ ತಂಡದಲ್ಲಿ ಇರುವುದು ಖುಷಿಯ ಸಂಗತಿ. ಯುವ ಪಲ್ಟಾನ್‌ ಅಕಾಡೆಮಿಯಲ್ಲಿ ತರಬೇತಿ ನೀಡುವ ಅವಕಾಶ ಸಿಕ್ಕಿದಾಗ ವಿಶ್ವಾಸ್‌ ಅವರನ್ನು ಕ್ಯಾಂಪ್‌ನಲ್ಲಿ ಸೇರಿಸಿಕೊಂಡೆ. ಪಲ್ಟಾನ್‌ ಅಕಾಡೆಮಿಯಲ್ಲಿ ವಿಶ್ವಾಸ್‌ ಉತ್ತಮ ರೀತಿಯಲ್ಲಿ ತರಬೇತಿ ಪಡೆದರು. ಪ್ರಾಮಾಣಿಕ ಆಟಗಾರನಾಗಿದ್ದ ಅವರು ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆಂಬ ನಂಬಿಕೆ ಇದೆ. ಪ್ರೋ ಕಬಡ್ಡಿಯಿಂದ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿರುವುದು ಉತ್ತಮ ಬೆಳವಣಿಗೆ. ಕಬಡ್ಡಿ ಜೀವಂತವಾಗಿರುವುದೇ ಗ್ರಾಮೀಣ ಪ್ರದೇಶದಲ್ಲಿ. ಮುಂದಿನ ದಿನಗಳಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದಿಂದ ಮತ್ತಷ್ಟು ಕ್ರೀಡಾಪಟುಗಳು ರಾಷ್ಟ್ರ ತಂಡದಲ್ಲಿ ಮತ್ತು ಪ್ರೋ ಕಬಡ್ಡಿಯಲ್ಲಿ ಕಾಣಿಸಿಕೊಳ್ಳಲಿ ಎಂಬುದೇ ಆಶಯ,” ಎಂದು ಪಾಟ್ನಾ ಪೈರೇಟ್ಸ್‌ನ ಪ್ರಧಾನ ಕೋಚ್‌ ರವಿ ಶೆಟ್ಟಿ ಹೇಳಿದರು.

Related Articles