Saturday, October 12, 2024

47 ಎಸೆತ, 17 ಬೌಂಡರಿ, 07 ಸಿಕ್ಸರ್‌, 112* , ಒಂದೇ ಓವರ್‌ನಲ್ಲಿ 32 ರನ್‌.. ನಾನು ರೋಹನ್‌ ಪಾಟೀಲ್‌!

ಮೈಸೂರು, ಆಗಸ್ಟ್‌, 11, 2022:

6,6,4,6,6,4 ಇದು ವಿದ್ಯಾಧರ ಪಾಟೀಲ್‌ಗೆ…. 4, 6, 4, 4, ಇದು  ಪ್ರತೀಕ್‌ ಜೈನ್‌ಗೆ ಹೀಗೆ ಮೈಸೂರು ತಂಡಕ್ಕೆ ಫೀಲ್ಡಿಂಗ್‌ ಮಾಡಲು ಅವಕಾಶ ಕೊಡದೆ ಆಕಾಶ ನೋಡುವಂತೆ ಮಾಡಿದ ಯುವ ಆಟಗಾರ ರೋಹನ್‌ ಪಾಟೀಲ್‌ (112*) ಮಹಾರಾಜ ಟ್ರೋಫಿಯಲ್ಲಿ ಅತ್ಯಂತ ವೇಗದ ಅರ್ಧಶತಕ, ಮೊದಲ ಶತಕ, ಅತ್ಯಂತ ವೇಗದ ಶತಕ ಹಾಗೂ ವೈಯಕ್ತಿಕ ಅತಿ ಹೆಚ್ಚು ರನ್‌ ಗಳಿಕೆ….ಅತಿ ಹೆಚ್ಚು ಬೌಂಡರಿ ಗಳಿಕೆಯ ಸಾಧನೆ…  ಗುಲ್ಬರ್ಗ ಮೈಸ್ಟಿಕ್ಸ್‌ಗೆ ಗೆಲ್ಲಲು ಇನ್ನೇನು ಬೇಕು?

161 ರನ್‌ ಜಯದ ಗುರಿ ಹೊತ್ತ ಗುಲ್ಬರ್ಗ ಮೈಸ್ಟಿಕ್ಸ್‌ ಇನ್ನೂ 29 ಎಸೆತ ಬಾಕಿ ಇರುವಾಗಲೇ 9 ವಿಕೆಟ್‌ ಜಯ ಗಳಿಸಿ ಸಂಭ್ರಮಿಸಿತು.

15 ಎಸೆತಗಳಲ್ಲಿ ಅರ್ಧ ಶತಕವನ್ನು ಪೂರ್ಣಗೊಳಿಸಿದ ರೋಹನ್‌ ಪಾಟೀಲ್‌ ಮಹಾರಾಜ ಟ್ರೋಫಿಯಲ್ಲಿ ಅತ್ಯಂತ ವೇಗದ ಶತಕ ದಾಖಲಿಸಿದ ಮೊದಲ ಆಟಗಾರ ಎನಿಸಿದರು. ವಿದ್ಯಾಧರ ಪಾಟೀಲ್‌ ಅವರ ಒಂದೇ ಓವರ್‌ನಲ್ಲಿ 32 ರನ್‌ ಸಿಡಿಸುವ ಮೂಲಕ ರೋಹನ್‌ ಪಾಟೀಲ್‌ ಐತಿಹಾಸಿಕ ಇನ್ನಿಂಗ್ಸ್‌ಗೆ ನಾಂದಿ ಹಾಡಿದರು. ನಂತರ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 7 ಅಬ್ಬರದ ಸಿಕ್ಸರ್‌ ಸಿಡಿಸಿ ಅಜೇಯ  112 ರನ್‌ಗಳ ಮೂಲಕ ತಂಡಕ್ಕೆ ಅಮೂಲ್ಯ ಜಯ ತಂದಿತ್ತರು.

ಇನ್ನೊಂದೆಡೆ ಕೃಷ್ಣನ್‌ ಶ್ರೀಜಿತ್‌ ಅಜೇಯ 49 ರನ್‌ ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೈಸೂರು ಸವಾಲಿನ ಮೊತ್ತ: ಶಿಸ್ತಿನ ಬ್ಯಾಟಿಂಗ್‌ ಪ್ರದರ್ಶಿಸಿದ ಮೈಸೂರು ವಾರಿಯರ್ಸ್‌ ತಂಡ ಗುಲ್ಬರ್ಗ ಮೈಸ್ಟಿಕ್ಸ್‌ ವಿರುದ್ಧ 4 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿ ಮೈಸ್ಟಿಕ್ಸ್‌ಗೆ 161 ರನ್‌ಗಳ ಸವಾಲು ನೀಡಿತು. ಗುಲ್ಬರ್ಗ ಮೈಸ್ಟಿಕ್ಸ್‌ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿತು. ಆರಂಭದಲ್ಲೇ ಪಂದ್ಯಕ್ಕೆ ಮಳೆಯ ಅಡ್ಡಿಯಾದ ಕಾರಣ ಪಂದ್ಯವನ್ನು 19 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

ಭರವಸೆಯ ಆರಂಭಿಕ ಜೋಡಿ ನಾಯಕ ಕರುಣ್‌ ನಾಯರ್‌ ಹಾಗೂ ನಿಹಾಲ್‌ ಉಳ್ಳಾಲ್‌ ಆತ್ಮವಿಶ್ವಾಸಲ್ಲೇ ಹೆಜ್ಜೆ ಇಟ್ಟರು. 45 ರನ್‌ಗಳ ಜೊತೆಯಾಟವಾಡಿ ಸುಸ್ಥಿತಿಯಲ್ಲಿದ್ದಾಗ ನಾಯರ್‌ ರನೌಟ್‌ಗೆ ಬಲಿಯಾದರು. ಕಾರ್ತಿಕ್‌ ಮೈಸೂರು ನಾಯಕನನ್ನು ಪೆವಿಲಿಯನ್‌ ಹಾದಿ ತೋರಿಸುವಲ್ಲಿ ಯಶಸ್ವಿಯಾರು. 12 ಎಸೆತಗಳನ್ನೆದುರಿಸಿದ ನಾಯರ್‌, 2 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 18 ರನ್‌ ಗಳಿಸಿದರು. ನಂತರ ನಿಹಾಲ್‌ ಉಳ್ಳಾಲ್‌ ಕೂಡ ಹೆಚ್ಚು ಸಮಯ ಕ್ರೀಸಿನಲ್ಲಿ ಉಳಿಯಲಿಲ್ಲ. ಅಬ್ಬರದ ಹೊಡೆತಗಳಿಗೆ ಮನ ಮಾಡಿ  23 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 27 ರನ್‌ ಗಳಿಸಿ ತಂಡಕ್ಕೆ ನೆರವಾದರು. ಹಿಂದಿನ ಪಂದ್ಯದಲ್ಲಿ ಈ ಜೋಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ನಂತರ ನಾಗ ಭರತ್‌ (35) ಹಾಗೂ ಪವನ್‌ ದೇಶಪಾಂಡೆ (41) 63 ರನ್‌ಗಳ ಜೊತೆಯಾಟವಾಡಿ ತಂಡದ ರನ್‌ ಗಳಿಕೆಗೆ ಚುರುಕು ನೀಡಿದರು. ದೇಶಪಾಂಡೆ ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 1  ಸಿಕ್ಸರ್‌ ಸೇರಿತ್ತು. ಶಿವರಾಜ್‌ ಕೊನೆಯ ಕ್ಷಣದಲ್ಲಿ 9 ಎಸೆತಗಳನ್ನು ಎದುರಿಸಿ 2 ಸಿಕ್ಸರ್‌ ನೆರವಿನಿಂದ ಅಜೇಯ 17 ರನ್‌ ಸಿಡಿಸುವ ಮೂಲಕ ಮೈಸೂರು ವಾರಿಯರ್ಸ್‌ 19 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿತು.

ಗುಲ್ಬರ್ಗ ಮೈಸ್ಟಿಕ್ಸ್‌ ಪರ ಅಭಿಲಾಶ್‌ ಶೆಟ್ಟಿ, ಅಜಿತ್‌ ಕಾರ್ತಿಕ್‌ ,ಮನೋಜ್‌ ಭಾಂಡಗೆ ತಲಾ 1 ವಿಕೆಟ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌:

ಮೈಸೂರು ವಾರಿಯರ್ಸ್‌ 19 ಓವರ್‌ಗಳಲ್ಲಿ 4 160 (ನಿಹಾಲ್‌ ಉಳ್ಳಾಲ್‌ 27, ಕರುಣ್‌ ನಾಯರ್‌ 18, ನಾಗ ಭರತ್‌ 35, ಪವನ್‌ ದೇಶಪಾಂಡೆ 41, ಶಿವರಾಜ್‌ 17* , ಅಭಿಲಾಶ್‌ ಶೆಟ್ಟಿ 40ಕ್ಕೆ 1)

ಗುಲ್ಬರ್ಗ ಮೈಸ್ಟಿಕ್ಸ್‌: 14.1 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 162 (ರೋಹನ್‌ ಪಾಟೀಲ್‌ 112*, ಕೃಷ್ಣನ್‌ ಶ್ರೀಜಿತ್‌ 46* ಶುಭಾಂಗ್‌ ಹೆಗ್ಡೆ 22ಕ್ಕೆ 1. ವಿದ್ಯಾಧರ್‌ ಪಾಟೀಲ್‌ 47ಕ್ಕೆ 0)

Related Articles