Saturday, October 12, 2024

ಕಬಡ್ಡಿಗೆ ಬೇಕಿದೆ ಸ್ವಂತ ಕ್ರೀಡಾಂಗಣ!

ಸೋಮಶೇಖರ್‌ ಪಡುಕರೆ, ಬೆಂಗಳೂರು

ಭಾರತದ ಕಬಡ್ಡಿ ಕ್ರೀಡೆ ಈಗ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಪ್ರಭುತ್ವವನ್ನು ಸಾಧಿಸಿದೆ. ಅನೇಕ ರಾಷ್ಟ್ರಗಳು ಈಗ ಕಬಡ್ಡಿ ಆಟವನ್ನು ಆಡಲು ಮುಂದಾಗಿವೆ. ಪ್ರೋ ಕಬಡ್ಡಿ ಲೀಗ್‌ ಆರಂಭಗೊಂಡು ಈಗ 9ನೇ ಆವೃತ್ತಿಗೆ ಕಾಲಿಟ್ಟಿದೆ. ತಂಡಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಬಡ್ಡಿಯ ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆಟಗಾರರ ಮೌಲ್ಯವೂ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ, ಲೀಗ್‌ನ ಮೌಲ್ಯ ಈಗ 1000 ಕೋಟಿ ದಾಟಿದೆ….ಆದರೆ ಈ ದೇಶೀಯ ಕ್ರೀಡೆಗೆ ಅದರದ್ದೇ ಆದ ಕ್ರೀಡಾಂಗಣ ಇಲ್ಲದಿರುವುದು ಬೇಸರದ ಸಂಗತಿ.

ಪ್ರತಿ ಬಾರಿ ಪ್ರೋ ಕಬಡ್ಡಿ ಲೀಗ್‌ ಆರಂಭವಾದಾಗ ಕ್ರೀಡಾಂಗಣಗಳನ್ನು ಅಣಿಗೊಳಿಸುವುದು ಸಂಘಟಕರಾದ ಮಶಾಲ್‌ ಸ್ಪೋರ್ಟ್ಸ್‌ಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಅಭ್ಯಾಸಕ್ಕೆ ಯಾವುದೋ ಸರಕಾರಿ ಕ್ರೀಡಾಂಗಣಗಳನ್ನು ವಿನಂತಿ ಮೇರೆಗೆ ಪಡೆದುಕೊಳ್ಳಬೇಕಾಗುತ್ತದೆ. ಕ್ರಿಕೆಟ್‌ನಲ್ಲಿ ಹಣ ಹರಿದು ಬರುತ್ತದೆ ಆದ್ದರಿಂದ ಎಷ್ಟು ಕ್ರೀಡಾಂಗಣಗಳನ್ನೂ ಕಟ್ಟಬಹುದು. ಇದ್ದ ಕ್ರೀಡಾಂಗಣಳನ್ನೇ ಅಳಿದು ಮತ್ತೆ ಹೊಸದಾಗಿ ಕಟ್ಟಿ ಹೆಸರು ಬದಲಾಯಿಸುವುದೋ ಅಥವಾ ಹೊಸ ಹೆಸರಿಡುವ ಕೆಲಸ ನಡೆಯುತ್ತಿದೆ. ಆದರೆ ಕಬಡ್ಡಿ ಅನಾಥವಾಗಿ ಇನ್ನೊಂದು ಕ್ರೀಡೆಯ ಆಟ ನಿಂತ ಬಳಿಕ ಆಡಬೇಕಾದ ಪರಿಸ್ಥಿತಿ ದೇಶದಲ್ಲಿದೆ.

ಮೊದಲು ಮಣ್ಣಿನ ಕಬಡ್ಡಿ ಆಡುವಾಗ ಯಾವುದಾದರೂ ತೆರೆದ ಜಾಗದಲ್ಲಿ ಆಡಬಹುದಾಗಿತ್ತು. ಆದರೆ ಈಗ ನಡೆಯುತ್ತಿರುವುದು ಮ್ಯಾಟ್‌ ಕಬಡ್ಡಿ, ಆಟಗಾರರು ಶೂ ಧರಿಸಿ ಆಡಬೇಕಾಗುತ್ತದೆ. ಆದ್ದರಿಂದ ಅದಕ್ಕೆ ಸೂಕ್ತವಾದ ಒಳಾಂಗಣ ಕ್ರೀಡಾಂಗಣ ಬೇಕಾಗುತ್ತದೆ. 13 ಮೀ ಉದ್ದ ಹಾಗೂ 10 ಮೀಟರ್‌ ಅಗಲ ವಿಸ್ತೀರ್ಣದ ಕಬಡ್ಡಿ ಅಂಗಣಕ್ಕೆ ಕ್ರಿಕೆಟ್‌ ರೀತಿಯ ದೊಡ್ಡ ಕ್ರೀಡಾಂಗಣದ ಅವತ್ಯ ಇರುವುದಿಲ್ಲ. ಪ್ರೇಕ್ಷಕರ ಗ್ಯಾಲರಿ ಉತ್ತಮವಾಗಿದ್ದರೆ ಸಾಕು. ಕಬಡ್ಡಿ ಪಂದ್ಯಗಳನ್ನು ನೇರವಾಗಿ ಕ್ರಿಕೆಟ್‌ ವೀಕ್ಷಿಸಿದಂತೆ ದೂರದಿಂದ ವೀಕ್ಷಿಸಿದರೆ ಅದರಲ್ಲಿ ಕುತೂಹಲವಿರುವುದಿಲ್ಲ. ಈ ಕಾರಣಕ್ಕಾಗಿ ಚಿಕ್ಕ ಒಳಾಂಗಣ ಕ್ರೀಡಾಂಗಣದ ಅಗತ್ಯ ಇರುತ್ತದೆ.

“ಕಬಡ್ಡಿ ಇಂದು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಭಾರತ ಈ ಕ್ರೀಡೆಯಲ್ಲಿ ಪ್ರಭುತ್ವ ಸಾಧಿಸಿದೆ. ಇದು ನಮ್ಮ ದೇಶದ ಕ್ರೀಡೆ ಈ ಕ್ರೀಡೆಗೆ ತನ್ನದೇ ಆದ ಕ್ರೀಡಾಂಗಣ ಇರಬೇಕಾದ ಅನಿವಾರ್ಯತೆ ಇದೆ. ತರಬೇತಿ ಸಂದರ್ಭದಲ್ಲಿ ನಾವು ಸರಕಾರದ ಕ್ರೀಡಾಂಗಣಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಲೀಗ್‌ ಕೂಡ ಅಲ್ಲಿಯೇ ನಡೆಯಬೇಕಾದ ಅನಿವಾರ್ಯತೆ ಇದೆ. ಒಳಾಂಗಣ ಕ್ರೀಡಾಂಗಣಗಳಲ್ಲಿ ಬೇರೆ ಕ್ರೀಡೆಗಳು ನಡೆಯುವಾಗ ಕಬಡ್ಡಿಗೆ ಸ್ಥಳಾವಕಾಶ ಕೇಳುವುದು ಸಮ್ಮತವಲ್ಲ. ಆದ್ದರಿಂದ ದೇಶದ ಪ್ರಮುಖ ನಗರಗಳಲ್ಲಿ ಕಬಡ್ಡಿಗಾಗಿಯೇ ಪ್ರತ್ಯೇಕ ಕ್ರೀಡಾಂಗಣ ನಿರ್ಮಿಸಬೇಕಾದ ಅಗತ್ಯ ಇದೆ,” ಎಂದು ಕರ್ನಾಟಕದ ಹಿರಿಯ ಕಬಡ್ಡಿ ಕೋಚ್‌ ರವಿ ಶೆಟ್ಟಿ ಅವರು ಹೇಳಿದ್ದಾರೆ.

“ಕಬಡ್ಡಿ ಭಾರತದ್ದೇ ಆದ ಜನಪ್ರಿಯ ಕ್ರೀಡೆ. ಈ ಕ್ರೀಡೆಯಿಂದ ಇಂದು ಉತ್ತಮ ರೀತಿಯಲ್ಲಿ ಆದಾಯ ಬರುತ್ತಿದೆ. ಕೊಟ್ಯಂತರ ಹಣ ಹರಿದಾಡುತ್ತಿದೆ. ಕಬಡ್ಡಿ ಆಟಗಾರರೂ ಕೂಡ ಕಬಡ್ಡಿಯಲ್ಲಿ ವೃತ್ತಿಯನ್ನು ಕಂಡುಕೊಳ್ಳುತ್ತಿದ್ದಾರೆ. ನಮ್ಮ ಗ್ರಾಮೀಣ ಕ್ರೀಡೆ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ. ಇಂಥ ಕ್ರೀಡೆಗೆ ತನ್ನದೇ ಆದ ಕ್ರೀಡಾಂಗಣ ಇಲ್ಲವೆಂದಾಗ ನೋವಾಗುತ್ತದೆ. ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ಒಳಾಂಗಣ ಕಬಡ್ಡಿ ಅಂಗಣವನ್ನು ಕಬಡ್ಡಿಗಾಗಿಯೇ ನಿರ್ಮಿಸಬೇಕಾಗಿದೆ. ಸರಕಾರ ಮತ್ತು ಕ್ರೀಡಾ ಸಂಸ್ಥೆಗಳು ಈ ಬಗ್ಗೆ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಸಂಸ್ಥೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ,” ಎಂದು ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷ ಪುರುಷೋತ್ತಮ ಪೂಜಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಕಬಡ್ಡಿ ಒಂದು ಅದ್ಭುತವಾದ ಆಟ. ಈ ಕ್ರೀಡೆಯಲ್ಲಿ ಹಲವು ಕ್ರೀಡೆಗಳು ಸೇರಿಕೊಂಡಿವೆ. ಭಾರತ ಈ ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡಿದೆ. ಈಗ ಕಬಡ್ಡಿಯನ್ನು ಜಗತ್ತಿನ ಇತರ ರಾಷ್ಟ್ರಗಳಲ್ಲಿಯೂ ಆಡುತ್ತಾರೆ. ಅವುಗಳಲ್ಲಿ ಭಿನ್ನ ಮಾದರಿಗಳಿದ್ದರೂ ಕಬಡ್ಡಿಗೆ ಮೂಲ ಭಾರತವೇ ಆಗಿರುತ್ತದೆ. ಪ್ರೋ ಕಬಡ್ಡಿ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಜಗತ್ತಿನ ಇತರ ರಾಷ್ಟ್ರಗಳ ಆಟಗಾರರು, ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ರಾಷ್ಟ್ರಗಳ ಸಂಖ್ಯೆಯನ್ನು ಗಮನಿಸಿದಾಗ ಕಬಡ್ಡಿಗೆ ಸಿಕ್ಕ ಮಾನ್ಯತೆಯನ್ನು ಗಮನಿಸಬಹುದು. ಹಿಂದೆಲ್ಲ ಕಬಡ್ಡಿ ಆಡುವವರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಈಗ 2 ಕೋಟಿ ವರೆಗೂ ಆಟಗಾರರ ಮೌಲ್ಯ ಹೆಚ್ಚಿದೆ. ಇಂಥ ಕ್ರೀಡೆ ತನ್ನದೇ ಆದ ಕ್ರೀಡಾಂಗಣವನ್ನು ಹೊಂದಿಲ್ಲ ಎಂದಾಗ ಮನಸ್ಸಿಗೆ ನೋವಾಗುತ್ತದೆ. ಕ್ರೀಡೆ ನಮಗೇನು ಕೊಡುತ್ತಿದೆಯೋ ಅದಕ್ಕೆ ಪೂರಕವಾಗಿ ನಾವು ಆ ಕ್ರೀಡೆಯ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕು. ಕ್ರಿಕೆಟ್‌ಗೆ ಕ್ರೀಡಾಂಗಣ ಕಟ್ಟುವ ನಾವು ಕಬಡ್ಡಿಗೆ ಅದರದ್ದೇ ಆದ ಕ್ರೀಡಾಂಗಣವನ್ನು ಯಾಕೆ ಕಟ್ಟ ಬಾರದು? ದೇಶದ ಪ್ರಮುಖ ನಗರಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಕಬಡ್ಡಿ ಕ್ರೀಡಾಂಗಣದ ಅಗತ್ಯವಿದೆ. ಈಗ ಮಣ್ಣಿನಲ್ಲಿ ಆಡವು ಕಬಡ್ಡಿ ದೂರವಾಗುತ್ತಿದ್ದು ಮ್ಯಾಟ್‌ ಕಬಡ್ಡಿ ಎಲ್ಲ ಕಡೆ ಆಡಲಾಗುತ್ತಿದೆ. ಆದ್ದರಿಂದ ಕಬಡ್ಡಿಗೆ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ,” ಎಂದು ಮಾಜಿ ಕಬಡ್ಡಿ ಆಟಗಾರ, ಕೋಚ್‌, ಡಾ. ಎಂ.ಜೆ. ಸುಂದರ್‌ ರಾಮ್‌ ಹೇಳಿದ್ದಾರೆ.

Related Articles