Thursday, October 10, 2024

ಅಸಹಾಯಕ ಹೆಣ್ಣು ಮಕ್ಕಳಿಗೆ ಪ್ರೀತಿಯ ಸ್ಫೂರ್ತಿ!

ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪ್ರೀತಿ ಪಾಲ್‌ ಸಿಂಗ್‌ ಎರಡು ಪದಕಗಳನ್ನು ಗೆದ್ದು ಭಾರತದ ಕ್ರೀಡಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. 100 ಮತ್ತು 200 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದು ಒಂದೇ ಪ್ಯಾರಾಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. “ಈ ಮಗು ದೊಡ್ಡವಳಾದ ಮೇಲೆ ಯಾರು ಈಕೆಯನ್ನು ಮದುವೆಯಾಗುತ್ತಾರೆ?” ಎಂದು ಮಾತನಾಡಿಕೊಂಡ ಊರವರು ಇಂದು ಅಭಿನಂದನೆ ಸಲ್ಲಿಸುತ್ತಿದ್ದಾರೆ. Paralympian Preeti Pal life saying girls are not a marriage material.

ದಿಲ್ಲಿಯಿಂದ 80 ಕಿಮೀ ದೂರದಲ್ಲಿರುವ ಮುಝಾಫರ್‌ನಗರದ ಹಳ್ಳಿಯೊಂದರಲ್ಲಿ ಹುಟ್ಟಿರುವ ಪ್ರೀತಿ ಪಾಲ್‌ ಹುಟ್ಟಿನಿಂದ ಸೆರೆಬ್ರಾಲ್‌ ಪಾಲ್ಸಿಗೆ ತುತ್ತಾಗಿ ಸರಿಯಾಗಿ ನಡೆಯಲಾಗುತ್ತಿಲ್ಲ. ಈಗ ಉದ್ಯೋಗದ ನಿಮಿತ್ತ ಮೀರತ್‌ ಜಿಲ್ಲೆಯ ಕಸೆರು ಬಕ್ಸಾರ್‌ನಲ್ಲಿ ಅಜ್ಜಿಯ ಮನೆಯಲ್ಲಿದ್ದಾರೆ. ಹುಟ್ಟಿದ ಮಗುವಿಗೆ ದೈಹಿಕ ನ್ಯೂನ್ಯತೆ ಇರುವುದು ಕಂಡಾಗ ಊರಿನ ಜನ ಟೀಕಿಸಲಾರಂಭಿಸಿದರು. “ದೊಡ್ಡವಳಾದರೆ ಈಕೆಯನ್ನು ಮದುವೆ ಮಾಡುವವರು ಯಾರು?” ಎಂದು ಜನ ಮಾತನಾಡಿಕೊಳ್ಳಲಾರಂಭಿಸಿದರು. ಪ್ರೀತಿ ಅವರ ತಂದೆ ಅನಿಲ್‌ ಕುಮಾರ್‌ ಪಾಲ್‌ಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು. ಪ್ರೀತಿ ಬಗ್ಗೆ ಜನರು ಆಡಿಕೊಳ್ಳುತ್ತಿರುವ ಮಾತು ಅವರಿಗೆ ಬಹಳ ನೋವನ್ನುಂಟು ಮಾಡುತ್ತಿತ್ತು. ಆದರೂ ಸಹಿಸಿಕೊಂಡು ಮಗಳಿಗೆ ಉತ್ತಮ ಶಿಕ್ಷಣ ನೀಡಿದರು.

ಪ್ರೀತಿ ಯೂಟ್ಯೂಬ್‌ ಮತ್ತು ಆನ್‌ಲೈನ್‌ನಲ್ಲಿ ದಿವ್ಯಾಂಗರಿಗೆ ಇರುವ ಕ್ರೀಡೆಗಳ ಬಗ್ಗೆ ಅರಿತುಕೊಂಡರು, ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸದ ಪ್ರೀತಿ, ಕ್ರೀಡೆಯನ್ನೇ ಉಸಿರಾಗಿಸಿಕೊಂಡರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಂಡರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿದರು. 23 ವರ್ಷ ಪ್ರಾಯದ ಪ್ರೀತಿಗೆ ಮದುವೆಯ ಬಗ್ಗೆ ಯೋಚನೆ ಇಲ್ಲವಂತೆ, ಇನ್ನಷ್ಟು ಸಾಧನೆ ಮಾಡಬೇಕೆಂಬ ಹಂಬಲ. “ಯಾರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ, ಪ್ರತಿಯೊಬ್ಬರಲ್ಲೂ ಒಂದು ಶಕ್ತಿ ಇದೆ, ಅದೇ ನಿಮ್ಮನ್ನು ರಕ್ಷಿಸುತ್ತಿದೆ,” ಎಂದು ಪ್ರೀತಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅನೇಕ ಹೆತ್ತವರಲ್ಲಿ ಇಂದು ಹೆಣ್ಣು ಮಕ್ಕಳು ಜನಿಸಿದ ದಿನದಿಂದಲೇ ಅವರ ಮದುವೆಯ ಬಗ್ಗೆ ಮಾತನಾಡುತ್ತಾರೆ. ಮದುವೆ ಒಂದು ಕಾಲಘಟ್ಟದಲ್ಲಿ ಆಗುತ್ತದೆ. ಆದರೆ ಅಲ್ಲಿಯ ತನಕ ಬದುಕನ್ನು ಕಟ್ಟಿಕೊಳ್ಳಲು, ಸಾಧನೆ ಮಾಡಲು ಅವಕಾಶವಿದೆ. ಪ್ರೀತಿಯನ್ನು ಅವರ ತಂದೆ ಜನರ ಮಾತು ಕೇಳಿ ಮದುವೆ ಮಾಡುವ ಚಿಂತೆಯಲ್ಲೇ ಮುಂದುವರಿದಿರುತ್ತಿದ್ದರೆ ಇಂದು ಭಾರತಕ್ಕೆ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕಗಳು ಸಿಗುತ್ತಿರಲಿಲ್ಲ. ಪ್ರೀತಿ ತಾನು ಕೈಗೊಂಡ ತೀರ್ಮಾನದಿಂದಾಗಿ ಇಂದು ಜಗತ್ತು ಆಕೆಯನ್ನು ಅಚ್ಚರಿಯಿಂದ ನೋಡುತ್ತಿದೆ. ಕ್ರೀಡೆಯಲ್ಲಿ ಆಕೆ ತನ್ನನ್ನು ತೊಡಗಿಸಿಕೊಳ್ಳದೆ, ಶಿಕ್ಷಣದಿಂದಲೂ ವಂಚಿತರಾಗಿರುತ್ತಿದ್ದರೆ ಇಂದು ಭಾರತದ ಸಾಮಾನ್ಯ ದಿವ್ಯಾಂಗ ಮಹಿಳೆಯಾಗಿ ಇರುತ್ತಿದ್ದರು. ಕ್ರೀಡೆಗೆ ಇರುವ ಶಕ್ತಿಯೇ ಅಂಥದ್ದು. ನಮ್ಮೆಲ್ಲ ದೈಹಿಕ, ಮಾನಸಿಕ ನ್ಯೂನ್ಯತೆಗಳನ್ನು ಹೊಡೆದು ಹಾಕುವ ಶಕ್ತಿ ಕ್ರೀಡೆಗಿದೆ. ನಿಮ್ಮ ಅಕ್ಕ ಪಕ್ಕ ಇರುವ ದಿವ್ಯಾಂಗರನ್ನು ಗೌರವಿಸಿ, ಅವರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ. ಅವರಿಗೆ ಸಾಧನೆ ಮಾಡಲು ಇರುವ ಅವಕಾಶಗಳ ಬಗ್ಗೆ ತಿಳಿಸಿ. ನಮ್ಮಂತೆಯೇ ಅವರು ಎಂದು ಗೌರವಿಸಿದರೆ ಇಲ್ಲಿ ಅಸಮಾನತೆ ದೂರವಾಗುತ್ತದೆ.

Related Articles