Thursday, October 10, 2024

ಪ್ಯಾರಾಲಿಂಪಿಕ್ಸ್‌: ಹೆಣ್‌ ಮಕ್ಳೇ ಸ್ಟ್ರಾಂಗ್‌ ಗುರು!

Sportsmail Desk: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಗುರುವಾರದ ತನಕ 24 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ವನಿತೆಯರು 11 (ಮಿಶ್ರ ಡಬಲ್ಸ್‌ ಸೇರಿ) ಪದಕಗಳನ್ನು ಗೆದ್ದಿರುವುದು ವಿಶೇಷ. ಬುಧವಾರ 30 ನಿಮಿಷಗಳ ಅಂತರದಲ್ಲಿ 4 ಪದಕಗಳನ ಸಾಧನೆ ಮಾಡಿರುವುದು ಅಪೂರ್ವ. ಕಷ್ಟಗಳ ಮೆಟ್ಟಿನಿಂತ ಈ ಮಹಿಳಾ ಸಾಧಕರು ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಬಾನೆತ್ತರಕ್ಕೆ ಹಾರಿಸಿರುವುದು ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡುವಂಥ ವಿಚಾರ. 9 ಮಹಿಳೆತರು ಇದುವರೆಗೂ 10 ಪದಕಗಳನ್ನು ಗೆದ್ದಿದ್ದಾರೆ. Women Para athletes shown their power at Paris Paralympics

ದಿವ್ಯಾಂಗರನ್ನು ಈ ಸಮಾಜ ನಿರೀಕ್ಷಿತ ಮಟ್ಟದಲ್ಲಿ ಗೌರವಿಸುತ್ತಿಲ್ಲ. ಭಾರತಕ್ಕೆ ಮೊದಲ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದು ಕೊಟ್ಟ ದೀಪಾ ಮಲಿಕ್‌ ಅವರೇ ಹೇಳುವಂತೆ, “ದಿವ್ಯಾಂಗರನ್ನು ಈ ಸಮಾಜ ಕಡೆಗಣಿಸಿದೆ. ಅವರು ಕೆಲಸಕ್ಕೆ ಬಾರದವರು ಎಂದು ಹಂಗಿಸಲಾಗುತ್ತಿದೆ.” ಈ ಮಾತು ನಿಜವಾಗಿಯೂ ನಮ್ಮ ಸಮಾಜ ಯೋಚಿಸುವಂತೆ ಮಾಡಿದೆ. ಅವನಿ ಲೆಖಾರ, ಮೋನಾ ಅಗರ್ವಾಲ್‌, ಪ್ರೀತಿ ಪಾಲ್‌ (ಎರಡು ಪದಕ), ರುಬಿನಾ ಫ್ರಾನ್ಸಿಸ್‌, ತಳಸಿಮತಿ ಮುರುಗೇಶನ್‌, ಮನಿಶಾ ರಾಮ್‌ದಾಸ್‌, ದೀಪ್ತಿ ಜೀವನ್‌ಜೀ, ಶೀತಲ್‌ ದೇವಿ ಇಂದಿನವರೆಗೆ ಭಾರತದ ಪರ ಪದಕ ಗೆದ್ದ ಮಹಿಳಾ ಕ್ರೀಡಾಪಟುಗಳು.

ದೀಪಾ ಮಲಿಕ್‌ ಅವರು ಒಂದು ಮಾತು ಹೇಳಿದ್ದಾರೆ, “ವಿಮಾನದಲ್ಲಿ ದೂರದ ಪ್ರಯಾಣ ಮಾಡುವಾಗ ಮೂತ್ರ ಬಂದರೆ ನಾವೆಷ್ಟು ಕಷ್ಟಪಡುತ್ತೇವೆ ಎಂಬುದು ನಮಗೆ ಮಾತ್ರ ಗೊತ್ತು,” ಇದು ಮಹಿಳಾ ದಿವ್ಯಾಂಗ ಅಥ್ಲೀಟ್‌ಗಳ ದೊಡ್ಡ ಕಷ್ಟ. ಇನ್ನು ಪದಕ ಗೆಲ್ಲುವುದು ಎಷ್ಟು ಕಷ್ಟ ಎಂಬುದನ್ನು ನಾವು ಊಹಿಸಿಕೊಳ್ಳಬೇಕು. 400ಮೀ ಓಟದಲ್ಲಿ ಕಂಚಿನ ಪದಕ ಗೆದ್ದ ಆಂಧ್ರಪ್ರದೇಶದ ದೀಪ್ತಿ ಜೀವನ್‌ಜೀ ಅವರನ್ನು ಊರಿನ ಜನ ಒಂದು ಕಾಲದಲ್ಲಿ “ಕೋತಿ” ಎಂದು ಹೀಗಳೆಯುತ್ತಿದ್ದರಂತೆ. ಆ ನಿಂದನೆಯ ಮಾತು ಆಕೆಗೆ ಮತ್ತು ಆಕೆಯ ಹೆತ್ತವರಿಗೆ ಎಷ್ಟು ನೋವನ್ನು ಉಂಟು ಮಾಡಿರಲಿಕ್ಕಿಲ್ಲ? ಇಂದು ಅದೇ ಊರಿನ ಜನ ದೀಪ್ತಿಯನ್ನು ಕೊಂಡಾಡುತ್ತಿದ್ದಾರೆ. ನಿಂದಿಸಿದವರೇ ಹೊಗಳುತ್ತಿದ್ದಾರೆ.

ಭಾರತದಲ್ಲಿ ದಿವ್ಯಾಂಗರಿಗಾಗಿಯೇ ಪ್ರತ್ಯೇಕವಾದ ತರಬೇತಿ ಕೇಂದ್ರಗಳಿಲ್ಲ, ಅವರು ಸಾಮಾನ್ಯರಿಗಿರುವ ಸೌಲಭ್ಯಗಳನ್ನು ಬಳಸಿಕೊಂಡೇ ಅಭ್ಯಾಸ ನಡೆಸುತ್ತಿದ್ದಾರೆ. ಅನೇಕ ಕ್ರೀಡಾಂಗಣಗಳಲ್ಲಿ ವ್ಹೀಲ್‌ ಚೇರ್‌ ಹೋಗಲಿಕ್ಕೂ ಅವಕಾಶ ಇರುವುದಿಲ್ಲ. ಇಂಥ ಕಷ್ಟಗಳ ನಡುವೆ ಅವರು ಕ್ರೀಡಾ ಬದುಕು ಕಟ್ಟಿಕೊಂಡು ಯಶಸ್ಸಿನ ಹಾದಿ ತುಳಿದಿದ್ದಾರೆ.

Related Articles