ಜೆಎಸ್‌ಡಬ್ಲ್ಯು, ಸಾಯ್ ತಂಡಗಳಿಗೆ ಜಯ

0
179
ಸ್ಪೋರ್ಟ್ಸ್ ಮೇಲ್ ವರದಿ

ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಯ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ವಾಜಪೇಯಿ ಕಪ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಜೆಎಸ್‌ಡಬ್ಲ್ಯು ಹಾಗೂ ವನಿತೆಯರ ವಿಭಾಗದಲ್ಲಿ  ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತಂಡಗಳು ಜಯ ಗಳಿಸಿ ಮುನ್ನಡೆದಿವೆ.

ಉತ್ತಮ ಆಟಗಾರರರಿಂದ ಕೂಡಿದ್ದ ಬಿಎಸ್‌ಎನ್‌ಎಲ್ ತಂಡ ಉತ್ತಮ ಹೋರಾಟದ ನಡುವೆಯೂ 20-25 ಅಂತರದಲ್ಲಿ ಮೊದಲ ಸೆಟ್‌ನಲ್ಲಿ ಪರಾಭವಗೊಂಡಿತು. ಜೆಎಸ್‌ಡಬ್ಲ್ಯು ಉತ್ತಮ ಆಟ ಪ್ರದರ್ಶಿಸಿ 25-15 ಅಂತರದಲ್ಲಿ ದ್ವಿತೀಯ ಸೆಟ್ ಗೆದ್ದುಕೊಂಡಿತು. ಮೂರನೇ ಸೆಟ್‌ನಲ್ಲಿ ಬಿಎಸ್‌ಎನ್‌ಎಲ್ ಉತ್ತಮ ಪೈಪೋಟಿ ನೀಡುವಲ್ಲಿ ವಿಲವಾಯಿತು, ಪರಿಣಾಮ  25-17 ಅಂತರದಲ್ಲಿ ಜೆಎಸ್‌ಡಬ್ಲ್ಯು ಪಂದ್ಯ ಗೆದ್ದುಕೊಂಡಿತು. ಜೆಎಸ್‌ಡಬ್ಲ್ಯು ಪರ ಆಕಾಶ್ ಹಾಗೂ ಭರತ್ ಉತ್ತಮ ಆಟ ಪ್ರದರ್ಶಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಬಿಎಸ್‌ಎನ್‌ಎಲ್ ಪರ ರವಿ ಕುಮಾರ್ ಹಾಗೂ ಸುಜಿತ್ ಆಚಾರ್ಯ ಉತ್ತಮ ಆಟ ಪ್ರದರ್ಶಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ವನಿತೆಯರ ವಿಭಾಗದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಎಸ್‌ಡಿಎಂ ಉಜಿರೆ ತಂಡಗಳು ಮುಖಾಮುಖಿಯಾದವು. ದಸರಾ ಕ್ರೀಡಾಕೂಟದಲ್ಲಿ ನಡೆದ ಸಿಎಂ ಕಪ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬಲಿಷ್ಠ ತಂಡವಾಗಿ ಮೂಡಿ ಬಂದಿದ್ದ ಎಸ್‌ಡಿಎಂ ಉಜಿರೆ ಸಾಯ್ ವಿರುದ್ಧ ಉತ್ತಮ ಪೈಪೋಟಿಯ ನಡುವೆಯೂ ಸೋಲಿಗೆ ಶರಣಾಯಿತು. ಮೊದಲ ಸೆಟ್‌ನಲ್ಲಿ ಜಯ ಗಳಿಸಿದ ಉಜಿರೆ ತಂಡ ನಂತರದ ಎರಡೂ ಸೆಟ್‌ಗಳಲ್ಲಿ ಸೋಲನುಭವಿಸಿತು. ಉತ್ತಮ ಪೈಪೋಟಿಯ ನಡುವೆಯೂ 25-21 ಅಂತರದಲ್ಲಿ ಉಜಿರೆ ತಂಡ ಮೊದಲ ಸೆಟ್ ಗೆದ್ದುಕೊಂಡಿತು. ಎರಡನೇ ಸೆಟ್‌ನಲ್ಲಿ ಸಾಯ್ ತಂಡ 25-21 ಅಂತರದಲ್ಲಿ ಸೆಟ್ ತನ್ನದಾಗಿಸಿಕೊಂಡಿತು. ಮೂರನೇ ಸೆಟ್‌ನಲ್ಲಿ ಸಾಯ್ ತಂಡ 15=09ರಲ್ಲಿ ಗೆದ್ದು ಪಂದ್ಯ ತನ್ನದಾಗಿಸಿಕೊಂಡಿತು. ಭಾರತೀಯ ಕ್ರೀಡಾ ಪ್ರಾಧಿಕಾರದ ತಂಡದ ಪರ ನಮ್ರತಾ ಹಾಗೂ ಮೇಘನಾ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಎಸ್‌ಡಿಎಂ ಪರ ಸಲಿಯಾತ್ ಹಾಗೂ ಅಕ್ಷಿತಾ ಉತ್ತಮವಾಗಿ ಆಡಿದರು.