ದಕ್ಷಿಣ ವಲಯ ನೆಟ್‌ಬಾಲ್: ಕರ್ನಾಟಕಕ್ಕೆ ಬೆಳ್ಳಿ ಸಂಭ್ರಮ

0
278
ಸ್ಪೋರ್ಟ್ಸ್ ಮೇಲ್ ವರದಿ

ತ್ರಿಶೂರಿನ ಡಾನ್ ಬಾಸ್ಕೋ ಎಚ್‌ಎಸ್‌ಎಸ್ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ನಡೆದ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪುರುಷ ಹಾಗೂ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ.

ಫೈನಲ್ ಪಂದ್ಯದಲ್ಲಿ ಪುರುಷರ ತಂಡ ಕೇರಳ ವಿರುದ್ಧ 14-24 ಅಂಕಗಳ ಅಂತರದಲ್ಲಿ ಸೋಲನುಭವಿಸಿತು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ರಾಜ್ಯ ಪುರುಷರ ತಂಡ 28-20 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತ್ತು. ಲೀಗ್ ಹಂತದ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಆಂಧ್ರಪ್ರದೇಶದ ವಿರುದ್ಧ 26-13 ಅಂತರದಲ್ಲಿ ಗೆದ್ದಿತ್ತು. ಲೀಗ್‌ನ ಎರಡನೇ ಪಂದ್ಯದಲ್ಲಿ ರಾಜ್ಯ ತಂಡ ಪಾಂಡಿಚೇರಿ ತಂಡವನ್ನು 17-14 ಅಂತರದಲ್ಲಿ ಮಣಿಸಿತ್ತು.
ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡ ಫೈನಲ್ ಪಂದ್ಯದಲ್ಲಿ ಕೇರಳ ವಿರುದ್ಧ 21-24 ಅಂತರದಲ್ಲಿ ಉತ್ತಮ ಹೋರಾಟ ನೀಡಿ ಬೆಳ್ಳಿಗೆ ತೃಪ್ತಿಪಟ್ಟಿತ್ತು. ಸೆಮಿಫೈನಲ್ ಪಂದ್ಯದಲ್ಲಿ ರಾಜ್ಯ ತಂಡ 19-06 ಅಂತರದಲ್ಲಿ ತೆಲಂಗಾಣ ವಿರುದ್ಧ ಸುಲಭವಾದ ಜಯ ಗಳಿಸಿತ್ತು.
ಲೀಗ್ ಹಂತದ ಮೊದಲ ಪಂದ್ಯದಲ್ಲಿ ಕರ್ನಾಟಕ ಮಹಿಳೆಯರ ತಂಡ ತಮಿಳುನಾಡು ವಿರುದ್ಧ 32-12 ಅಂತರದಲ್ಲಿ ಗೆದ್ದಿತ್ತು. ನಂತರ ಆಂಧ್ರಪ್ರದೇಶದ ವಿರುದ್ಧ ನಡೆದ ಪಂದ್ಯದಲ್ಲಿ 28-08 ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿತ್ತು.