Friday, December 13, 2024

ಚಾಂಪಿಯನ್ನರಿಗೇ ಸೈಕಲ್ ನೀಡದ ಕ್ರೀಡಾ ಇಲಖೆ

ಸ್ಪೋರ್ಟ್ಸ್ ಮೇಲ್ ವರದಿ

ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆ ರಾಜ್ಯದ ಸೈಕ್ಲಿಸ್ಟ್‌ಗಳಿಗೆ ಅತ್ಯಂತ ಉತ್ತಮ ಗುಣಮಟ್ಟದ ಸೈಕಲ್‌ಗಳನ್ನು ವಿತರಿಸಿದೆ. ಇನ್ನೂ ರಾಜ್ಯಮಟ್ಟದಲ್ಲಿ ಮಿಂಚದ ಸೈಕ್ಲಿಸ್ಟ್‌ಗಳೂ ಇದರ ಪ್ರಯೋಜನ ಪಡೆದಿದ್ದಾರೆ. ಆದರೆ ಸೈಕ್ಲಿಂಗ್‌ನಲ್ಲಿ ರಾಷ್ಟ್ರರಮಟ್ಟದಲ್ಲಿ ಮಿಂಚಿ ರಾಜ್ಯಕ್ಕೆ ಕೀರ್ತಿ ತಂದ ರಾಷ್ಟ್ರೀಯ ಚಾಂಪಿಯನ್ನರು ಮಾತ್ರ ಇದರಿಂದ ವಂಚಿತರಾಗಿದ್ದಾರೆ.

ಹಲವು ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದಿರುವ ನವೀನ್ ರಾಜ್, ರಾಷ್ಟ್ರೀಯ ಚಾಂಪಿಯನ್ ನವೀನ್ ಜಾನ್, ರಾಷ್ಟ್ರೀಯ ಚಾಂಪಿಯನ್ ಮೈಸೂರಿನ ಲೋಕೇಶ್ ಹಾಗೂ ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದು ಶುಕ್ರವಾರ ಪುಣೆಯಲ್ಲಿ ನಡೆದ ಎಂಟಿಬಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಕಿರಣ್ ಕುಮಾರ್ ಅವರಿಗೆ ಕ್ರೀಡಾ ಇಲಾಖೆ ಸೈಕಲ್‌ಒದಗಿಸಲಿಲ್ಲ.
ರಾಜ್ಯ ಸೈಕ್ಲಿಂಗ್ ಸಂಸ್ಥೆ ಕ್ರೀಡಾ ಇಲಾಖೆಗೆ ಅರ್ಹ ಸೈಕ್ಲಿಸ್ಟ್‌ಗಳ ಹೆಸರನ್ನು ನೀಡುವಾಗ ಈ ನಾಲ್ವರು ಚಾಂಪಿಯನ್ನರ ಹೆಸರನ್ನು ಬಿಟ್ಟಿರುವುದು ಸ್ಪಷ್ಟವಾಗಿದೆ. ಇವರು ಬೆಂಗಳೂರಿನಲ್ಲಿರುವ ಚಾಂಪಿಯನ್ನರು. ಸೈಕ್ಲಿಂಗ್ ಎಂದಾಗ ಉತ್ತರ ಕರ್ನಾಟಕಕ್ಕೇ ಹೆಚ್ಚಿನ ಉತ್ತೇಜನ ನೀಡುತ್ತಿರುವುದು ಸ್ಪಷ್ಟ. ಆದರೆ ರಾಜ್ಯದ ಇತರ ಭಾಗಗಳಲ್ಲೂ ಸೈಕ್ಲಿಸ್ಟ್‌ಗಳಿದ್ದಾರೆ. ಅವರೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದನ್ನು ಮರೆಯಬಾರದು.
ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಪ್ರಮುಖರು ತಮ್ಮ ಇಬ್ಬರೂ ಮಕ್ಕಳಿಗೆ ಅತ್ಯಂತ ದುಬಾರಿ ಸೈಕಲ್ ನೀಡಿರುವುದು ಬೆಳಕಿಗೆ ಬಂದಿದೆ. ಅವರು ರಾಷ್ಟ್ರಮಟ್ಟದಲ್ಲಿ ಇನ್ನೂ ಸಾಧನೆ ಮಾಡಬೇಕಷ್ಟೆ. ಪ್ರಭಾವದಿಂದ ಸರಕಾರದ ಸೌಲಭ್ಯಗಳನ್ನು ಪಡೆಯುವುದು ಸಾಮಾನ್ಯವಾಗಿದೆ. ಆದರೆ ನೈಜ ಚಾಂಪಿಯನ್ನರಿಗೆ ಸೈಕಲ್ ಸಿಗದಿರರುವುದು ಬೇಸರದ ಸಂಗತಿ.

ಕಿರಣ್‌ಗೆ ಬೆಳ್ಳಿ ಪದಕ

ಪುಣೆಯಲ್ಲಿ ನಡೆದ ರಾಷ್ಟ್ರೀಯ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಕಿರಣ್ ಕುಮಾರ್ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದಿದ್ದಾರೆ.
1 ಗಂಟೆ 03 ನಿಮಿಷ 26 ಸೆಕೆಂಡುಗಳಲ್ಲಿ ಗುರಿ ತಲುಪಿದ ಕಿರಣ್ ಕುಮಾರ್ ಬೆಳ್ಳಿ ಗೆದ್ದರು. ಸೇನೆಯ ಮುಖೇಶ್ ಕುಮಾರ್  1 ಗಂಟೆ 01 ನಿಮಿಷ 43 ಸೆಕೆಂಡುಗಳಲ್ಲಿ ಗುರಿ ತಲುಪಿದ ಮುಖೇಶ್ ಚಿನ್ನ ಗೆದ್ದರು.  ಸೇನೆಯ ಇನ್ನೋರ್ವ ಸ್ಪರ್ಧಿ ರಮೇಶ್ ಅಲೆ ಮೂರನೇ ಸ್ಥಾನ ಗಳಿಸಿದರು.

Related Articles