Saturday, July 27, 2024

ವಿಶ್ವಕಪ್‌ ಗೆದ್ದ ಆಸೀಸ್‌ ಆಟಗಾರರನ್ನು ಸ್ವಾಗತಿಸುವವರೇ ಇಲ್ಲ!

ಸಿಡ್ನಿ: ಭಾರತ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಜಯ ಗಳಿಸಿ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ಆಟಗಾರರಿಗೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸಿಕ್ಕ ಸ್ವಾಗತವನ್ನು ಗಮನಿಸಿದಾಗ ಮಿಚೆಲ್‌ ಮಾರ್ಶ್‌ ಟ್ರೋಫಿ ಮೇಲೆ ಕಾಲಿಟ್ಟಿದ್ದು ಯಾಕೆ ಎಂಬುದು ಸ್ಪಷ್ಟವಾಗುತ್ತದೆ. No one to welcome world cup winning Australian Cricket Players.

ನವೆಂಬರ್‌ 22 ರಂದು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಹಾಗೂ ಕೆಲವು ಆಟಗಾರರು ಸಿಡ್ನಿ ಅಂತಾರಾಷ್ಟ್ರೀಯ ವಿಮಾ ನಿಲ್ದಾಣದಲ್ಲಿ ಬಂದಿಳಿದಾಗ ಕೆಲವು ಮಾಧ್ಯಮ ಪ್ರತಿನಿಧಿಗಳನ್ನು ಹೊರತುಪಡಿಸಿದರೆ ಬೇರೆ ಯಾರೂ ಅವರ ಸ್ವಾಗತಕ್ಕೆ ಇರಲಿಲ್ಲ. ಅವರು ಸಾಮಾನ್ಯ ಪ್ರಯಾಣಿಕರಂತೆ ಹೊರ ನಡೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌‌ ಆಗಿದೆ.

ಭಾರತದಲ್ಲಿ ಒಂದು ವೇಳೆ ಹೀಗೆ ನಡೆದಿರುತ್ತಿದ್ದರೆ ಕತೆಯೇ ಬೇರೆ ಇರುತ್ತಿತ್ತು. ಈ ಬಗ್ಗೆ ಅನೇಕ ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿಯ ಪರಿಸ್ಥಿತಿಯನ್ನು ತಮಾಷೆ ಮಾಡಿದ್ದಾರೆ. “ನಮ್ಮಲ್ಲಿ ಜೆಸಿಬಿಯಿಂದ ಹೊಂಡ ತೆಗೆಯುವಾಗಲಾದರೂ ಒಂದಿಷ್ಟು ಜನ ಸೇರುತ್ತಾರೆ,” ಎಂದು ತಮಾಷೆ ಮಾಡಲಾಗಿದೆ.

ಪ್ಯಾಟ್‌ ಕಮಿನ್ಸ್‌, ಜೋಷ್‌ ಹ್ಯಾಸಲ್‌ವುಡ್‌ ಹಾಗೂ ಶಾನ್‌ ಮಾರ್ಷ್‌ ಬಿ ಗೇಟ್‌ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಹೊರ ನಡೆದಿರುವುದು ಕ್ರಿಕೆಟ್‌ ಜಗತ್ತಿಗೆ ಅಚ್ಚರಿಯನ್ನುಂಟು ಮಾಡಿದೆ. ಆರು ಬಾರಿ ವಿಶ್ವಕಪ್‌ ಗೆದ್ದಿರುವ ಆಸ್ಟ್ರೇಲಿಯಾದ ಸಾಧನೆ ಬಗ್ಗೆ ಅಲ್ಲಿಯ ಜನರಿಗೆ ಇದು ಸಾಮಾನ್ಯ ಕಾರ್ಯ ಎಂದೆನಿಸಿರಬಹುದು. ಒಂದು ವೇಳೆ ಭಾರತ ತಂಡ ವಿದೇಶದಲ್ಲಿ ವಿಶ್ವಕಪ್‌ ಗೆದ್ದು ಭಾರತದ ವಿಮಾನ ನಿಲ್ದಾಣಕ್ಕೆ ಆಗಮಿಸಿರುತ್ತಿದ್ದರೆ ಅಲ್ಲಿ ಕಾಣುವ ದೃಶ್ಯವೇ ಬೇರೆ.

ಹೈದರಾಬಾದ್‌ನಲ್ಲಿ ಕರ್ನಾಟಕ ತಂಡ ರಣಜಿ ಗೆದ್ದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅಲ್ಲಿ ಸಾವಿರಾರು ಕ್ರಿಕೆಟ್‌ ಅಭಿಮಾನಿಗಳು ತಂಡದ ಆಟಗಾರರನ್ನು ಸುತ್ತುವರಿದು ಸಂಭ್ರಮಿಸಿದ್ದರು.

ಆಸ್ಟ್ರೇಲಿಯನ್ನರಿಗೆ ಕ್ರಿಕೆಟ್‌ ಪಂದ್ಯವೇ ಮುಖ್ಯ ಹೊರತು ಕ್ರಿಕೆಟ್‌ ಆಟಗಾರರು ಮತ್ತು ಟ್ರೋಫಿ ಮುಖ್ಯವಲ್ಲ. ನಮ್ಮಲ್ಲಿ ಸಚಿನ್‌ ಫ್ಯಾನ್‌, ಕೊಹ್ಲಿ ಫ್ಯಾನ್‌, ರೋಹಿತ್‌ ಫ್ಯಾನ್‌, ರಾಹುಲ್‌ ಫ್ಯಾನ್‌ ಹೀಗೆ ಒಂದೊಂದು ಆಟಗಾರನಿಗೆ ಒಂದೊಂದು ಫ್ಯಾನ್‌ಗಳ ಗುಂಪು ಇರುತ್ತದೆ. ವಿಶ್ವಕಪ್‌ನಲ್ಲಿ ಭಾರತದ ಬೌಲರ್‌ಗಳು ಮ್ಯಾಕ್ಸ್‌ವೆಲ್‌ ಅವರ ವಿಕೆಟ್‌ ಗಳಿಸಿದರೆ ಸಂಭ್ರಮ. ಅದೇ ಮ್ಯಾಕ್ಸ್‌ವೆಲ್‌ ಶತಕ ಗಳಿಸಿದೆ, “ನಮ್‌ ಆರ್‌ಸಿಬಿ ಹುಡುಗ, ನಮ್‌ ಆರ್‌ಸಿಬಿ ಆಟಗಾರರೇ ಹಾಗೆ,” ಎಂದು ಸಂಭ್ರಮಿಸುತ್ತಾರೆ. ಆಸ್ಟ್ರೇಲಿಯಾದಲ್ಲಿ ಈ ರೀತಿಯ ದೃಶ್ಯ ಕಾಣಸಿಗದು.

ಆಸ್ಟ್ರೇಲಿಯಾಲ್ಲಿ ಕ್ರಿಕೆಟ್‌ ಆಟಗಾರರಿಗೆ ಸಿಗುವ ಗೌರವ ನೋಡಿಯೇ ಮಿಚೆಲ್‌ ಮಾರ್ಷ್‌ ಟ್ರೋಫಿಯ ಮೇಲೆ ಕಾಲಿಟ್ಟಿರಬಹುದೇ ಎಂದು ಕ್ರಿಕೆಟ್‌ ಅಭಿಮಾನಿಗಳು ಯೋಚಿಸುವಂತಾಗಿದೆ.

Related Articles