2 ಓವರ್ 0 ರನ್ 6 ವಿಕೆಟ್: ಇದು ಪುಟ್ಟ ಸಂವ್ರಿತ್ ಕುಲಕರ್ಣಿಯ ಸಾಧನೆ
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 12 ವರ್ಷ ವಯೋಮಿತಿಯವರಿಗಾಗಿ ನಡೆಸುತ್ತಿರುವ ಅಂತರ್ ಕ್ಲಬ್ ಟೂರ್ನಿಯ ಫಲಿತಾಂಶವನ್ನು ಕಂಡಾಗ ಅಚ್ಚರಿ ಕಾದಿತ್ತು. ಒಬ್ಬ ಹುಡುಗ 2 ಓವರ್‌ಗಳಲ್ಲಿ ರನ್ ನೀಡದೆಯೇ 6 ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದ. ಸಂಪರ್ಕ ಮಾಡಿದಾಗ ಖುಷಿಯಾಯಿತು. 2-2-0-6 this is 11 years old boy Samvrith Kulkarni spin Magic.
ಸಂವ್ರಿತ್ ಕುಲಕರ್ಣಿ ಹೆಸರಿನ ಮಂದೆ 2-2-0-6 ಎಂದು ಬರೆದಿತ್ತು. ಅಚ್ಚರಿ. ಸಂಪರ್ಕ ಮಾಡಿದಾಗ ಪುಟ್ಟ ಪ್ರತಿಭೆಯ ಸಾಧನೆಯ ಬಗ್ಗೆ ಮತ್ತಷ್ಟು ವಿವರ ಸಿಕ್ಕಿತು.
ಮೂಲತಃ ರಾಯಚೂರಿನ ಗುರುರಾಜ ಕುಲಕರ್ಣಿ ಹಾಗೂ ಗೀತಾ ಕುಲಕರ್ಣಿಯವರ ಹಿರಿಯ ಮಗು 11 ವರ್ಷದ ಸಂವ್ರಿತ್ ಕುಲಕರ್ಣಿ ಈ ಸಾಧನೆ ಮಾಡಿದ ಬಾಲಕ, ಆರ್‌ವಿ ಎಂಜಿನಿಯರಿಂಗ್ ಕಾಲೇಜಿನ ಜಿಮ್ಖಾನ ತಂಡದ ಪರ ಆಡುತ್ತಿರುವ ಸಂವ್ರಿತ್ ಕುಲಕರ್ಣಿ ಕೆಎಸ್‌ಸಿಎ ಆಲೂರಿನಲ್ಲಿರುವ ಮೂರನೇ ಗ್ರೌಂಡ್‌ನಲ್ಲಿ ಸಿಟಿಜನ್ ಕಲ್ಚರಲ್ ಕ್ರಿಕೆಟ್ ಸಂಸ್ಥೆಯ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾನೆ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ವಿ ಎಂಜಿನಿಯರಿಂಗ್ ಕಾಲೇಜು ಜಿಮ್ಖಾನ ತಂಡ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 116 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಸಿಟಿಜನ್ ತಂಡ 11.3 ಓವರ್‌ಗಳಲ್ಲಿ 14 ರನ್‌ಗೆ ಆಲೌಟ್ ಆಗಿತ್ತು, ಸಂವ್ರಿತ್ ಕುಲಕರ್ಣಿ ಶೂನ್ಯ ರನ್ನಿಗೆ 6 ವಿಕೆಟ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಹಿಂದಿನ ಪಂದ್ಯದಲ್ಲೂ ವಲ್ಚರ್ ಕ್ರಿಕೆಟರ್ಸ್ ವಿರುದ್ಧ 3-1-4-2 ಸಾಧನೆ ಮಾಡಿದ್ದರು. ಎಡಗೈ ಸ್ಪಿನ್ ಬೌಲರ್ ಸಂವ್ರಿತ್ ಟೈಗರ್ ಕಪ್‌ನಲ್ಲಿ ಕಪಿಲ್ ಕ್ರಿಕೆಟ್ ಕ್ಲಬ್ ಪರ ಆಡಿ ಬ್ಯಾಟಿಂಗ್‌ನಲ್ಲೂ ಮಿಂಚಿ ಮೂರು ಪಂದ್ಯಗಳಲ್ಲಿ 190 ರನ್ ಗಳಿಸಿದ್ದ. ವಿವಿಧ ಪಂದ್ಯಗಳಲ್ಲಿ ಒಟ್ಟು 65 ವಿಕೆಟ್ ಗಳಿಸಿರುವ ಸಂವ್ರಿತ್ 1112 ರನ್ ಗಳಿಕೆಯನ್ನೂ ಮಾಡಿದ್ದಾನೆ. ಪ್ರಸಕ್ತ ನಡೆಯುತ್ತಿರುವ ಕೆಎಸ್‌ಸಿಎ U12 ಅಂತರ್ ಕ್ಲಬ್ ಟೂರ್ನಿಯಲ್ಲಿ ಸಂವ್ರಿತ್, ಆಡಿರುವ 2 ಪಂದ್ಯಗಳಲ್ಲಿ 5 ಓವರ್ ಎಸೆದು, 4 ರನ್ ನೀಡಿ, 3 ಮೇಡನ್ ಮೂಲಕ 8 ವಿಕೆಟ್ ಗಳಿಸಿದ್ದಾನೆ.
ಬೆಂಗಳೂರಿನ ವಿಜಯನಗರದ ಎಂಸಿ ಲೇಔಟ್‌ನಲ್ಲಿರುವ ಶಾರದಾ ಕ್ರಿಕೆಟ್ ಅಕಾಡೆಮಿಯ ಕೋಚ್ ರಾಜೇಶ್ ಕೃಷ್ಣನ್ ಅವರ ಗರಡಿಯಲ್ಲಿ ಪಳಗಿದ್ದ ಸಂವ್ರಿತ್ ಆರ್‌ವಿ ಎಂಜಿನಿಯರಿಂಗ್ ಕಾಲೇಜಿನ ಜಿಮ್ಖಾನ ಕ್ಲಬ್ ಪರ ಆಡುವಾಗ ವಿಶ್ವನಾಥ್ ಎಚ್ ಕೆ ಅವರಿಂದ ತರಬೇತಿ ಪಡೆಯುತ್ತಿದ್ದಾನೆ. ಬೆಂಗಳೂರಿನ ಆರ್‌ಪಿಸಿ ಲೇಔಟ್‌ನಲ್ಲಿರುವ The New Cambridge English School ನ ವಿದ್ಯಾರ್ಥಿಯಾಗಿರುವ ಸಂವ್ರಿತ್ ಸಾಧನೆ ಇತರರಿಗೂ ಮಾದರಿಯಾಗಲಿ. “ನಮ್ಮ ಅಕಾಡೆಮಿಗೆ ಬಂದಾಗ ಸಂವ್ರಿತ್‌ಗೆ ಎಂಟು ವರ್ಷ, ಅಷ್ಟು ಬೆಳವಣಿಗೆ ಕಂಡಿರಲಿಲ್ಲ. ನಂತರ ತರಬೇತಿ ಸಿಕ್ಕ ಕೂಡಲೇ ಶಿಸ್ತು, ಬದ್ಧತೆ ಎಲ್ಲವೂ ಕಂಡು ಬಂತು. ಆತನಲ್ಲರುವ ಪ್ರತಿಭೆ ನೋಡಿ ಉತ್ತಮ ತರಬೇತಿ ಸಿಗುವಲ್ಲಿಗೆ ಕಳುಹಿಸಿದರೆ ಉಪಯೋಗವಾಗುತ್ತದೆ ಎಂದು ತಿಳಿದು, ಆತ್ಮೀಯರಾದ ವಿಶ್ವನಾಥ್ ಎಚ್,ಕೆ ಅವರಲ್ಲಿ ವಿನಂತಿಸಿಕೊಂಡೆ. ಅವರು U12 ವಿಭಾಗದಲ್ಲಿ ಎಲ್ಲ ಪಂದ್ಯಗಳನ್ನು ಆಡಿಸಿದರು. ಈಗ ಸಂವ್ರಿತ್ ಯಶಸ್ಸಿನ ಹಾದಿ ನೋಡಿ ಖುಷಿಯಾಗುತ್ತದೆ., ʼ ಎಂದು ರಾಜೇಶ್ ಕೃಷ್ಣನ್ ಹೇಳಿದ್ದಾರೆ.
“ಕ್ರಿಕೆಟ್ ಆಡಿಕೊಂಡಿರಲಿ, ಸಾಧನೆಗಳು ಖುಷಿ ಕೊಡುತ್ತವೆ. ಈ ಯಶಸ್ಸು ಆತನ ಬದುಕಿನ ಹಾದಿಯಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಹೆಜ್ಜೆಗಳಾಗಲಿ. ಕ್ರೀಡೆ ಶಿಸ್ತು ಹಾಗೂ ಉತ್ತಮ ಆರೋಗ್ಯ ನೀಡಿದರೆ ಸಾಕು. ಆತನಿಗೆ ಯಾವುದೇ ಒತ್ತಡವನ್ನು ಹೇರುತ್ತಿಲ್ಲ. ಓದಿನಲ್ಲೂ ಉತ್ತಮವಾಗಿದ್ದಾನೆ. ಅವನಲ್ಲಿ ಉತ್ತಮ ಆತ್ಮವಿಶ್ವಾಸವಿದೆ ಎಂದಷ್ಟೇ ಹೇಳಬಲ್ಲೆ,” ಎಂದು ಸಂವ್ರಿತ್ ತಂದೆ ಗುರುರಾಜ ಕುಲಕರ್ಣಿ ಅವರು sportsmail ಗೆ ತಿಳಿಸಿದ್ದಾರೆ. ಈ ಪುಟ್ಟ ಸಂವ್ರಿತ್ ಮುಂದೊಂದು ದಿನ ರಾಜ್ಯ ತಂಡಕ್ಕೆ ಕಾಲಿಟ್ಟು ಅಲ್ಲಿಂದ ಮುಂದಿನ ಹಂತ ತಲುಪಲಿ.