sportsmail
ಪುದುಚೇರಿಯಲ್ಲಿ ನಡೆದ ದಕ್ಷಿಣ ವಲಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಕರ್ನಾಟಕ ಪುರುಷರ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡರೆ ಮಹಿಳೆಯರ ತಂಡ ರನ್ನರ್ ಅಪ್ ಸ್ಥಾನ ಗಳಿಸಿದೆ.
ರಾಜ್ಯ ಪುರುಷರ ತಂಡ ಫೈನಲ್ ಪಂದ್ಯದಲ್ಲಿ ಕೇರಳ ವಿರುದ್ಧ 25-24 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು. ಲೀಗ್ ಹಂತದ ಪಂದ್ಯಗಳಲ್ಲೂ ಕರ್ನಾಟಕ ತಂಡ ಅದ್ಭುತ ಮೇಲುಗೈ ಸಾಧಿಸಿತ್ತು. ಆಂಧ್ರಪ್ರದೇಶದ ವಿರುದ್ಧ ನಡೆದ ಮೊದಲ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ 35-14 ಅಂತರದಲ್ಲಿ ಜಯ ಗಳಿಸಿತು. ನಂತರ ತಮಿಳುನಾಡು ವಿರುದ್ಧ ನಡೆದ ಪಂದ್ಯದಲ್ಲಿ 30-21 ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿತು.
ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ತೆಲಂಗಾಣ ವಿರುದ್ಧ 23-01 ಬೃಹತ್ ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲಿ ಕೇರಳ ವಿರುದ್ಧ 25-24 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಮಹಿಳಾ ತಂಡವು ಫೈನಲ್ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರುವಲ್ಲಿ ವಿಫಲವಾಗಿ 13-28 ಅಂತರದಲ್ಲಿ ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.
ಲೀಗ್ ಹಂತದ ಪಂದ್ಯಗಳಲ್ಲಿ ಕರ್ನಾಟಕ ಮಹಿಳಾ ತಂಡ ಉತ್ತಮ ಪ್ರದರ್ಶನ ತೋರಿ ಫೈನಲ್ ಹಂತ ತಲುಪಿತ್ತು. ಮೊದಲ ಪಂದ್ಯದಲ್ಲಿ ಆಂಧ್ರಪ್ರದೇಶದ ವಿರುದ್ಧ 24-09 ಅಂತರದಲ್ಲಿ ಜಯ ಗಳಿಸಿತು. ಲೀಗ್‌ನ ಎರಡನೇ ಪಂದ್ಯದಲ್ಲಿ ತಮಿಳುನಾಡು ತಂಡವನ್ನು 17-08 ಅಂತರದಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್‌ನಲ್ಲಿ ತೆಲಂಗಾಣ ವಿರುದ್ಧ 20-10 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತ್ತು.
ಪುದುಚೇರಿಯ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ನೆಟ್‌ಬಾಲ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರಿಓಂ ಕೌಶಿಕ್ ಹಾಜರಿದ್ದರು.
ಕರ್ನಾಟಕ ಪುರುಷರ ತಂಡ:
ಚೇತನ್ ಸಿ, ಮನೋಜ್ ಕೆ, ಗಜೇಂದ್ರ ಸಿ.ಎನ್., ವಿನೋದ್ ಕುಮಾರ್ ಬಿ, ಆಕಾಶ್ ಎಸ್, ರೋಹಿತ್ ಪಿ.ಡಿ, ವರುಣ್ ಟಿ.ಡಿ, ಸಾತ್ವಿಕ್ ಯು,ಆರ್, ಚಿರಂತ್ ಗೌಡ ಸಿ, ಚಂದ್ರಶೇಖರ, ಸೌರಭ್ ತಿಪ್ಪೆ, ಸುದೀಪ್ ನಾಯಕ.
ಕೋಚ್: ಸುಜಿತ್ ಸಿ.
ಮಹಿಳಾ ತಂಡ:
ಗಗನಾ ಕೆ.ಎಸ್, ದಿಶಾ ಎ ಗೌಡ, ಲಿಕಿತಾ, ಚೈತ್ರಾ ಬಿ, ಸುಶ್ಮಿತಾ ವಿ, ಶರಣ್ಯ ಕೆ, ನಂದಿನಿ ಕೆ, ಸ್ವಾತಿ ಜಿ, ಚಂದು ಬಿ,ಎಸ್, ಅಕ್ಷತಾ ಘಟೇಕರಿ, ಹರ್ಷಿನಿ,ವಿ. ಚೈತನ್ಯ ಎಚ್,
ಕೋಚ್: ಶಿಫಾಲಿ ಎಂ.
ತಂಡದ ಯಶಸ್ಸಿನಲ್ಲಿ ತರಬೇತುದಾರರಾದ ಸುಜಿತ್ ಹಾಗೂ ಶಿಫಾಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕರ್ನಾಟಕ ನೆಟ್‌ಬಾಲ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಭಾರತೀಯ ನೆಟ್‌ಬಾಲ್ ಫೆಡರೇಷನ್‌ನ ರಾಷ್ಟ್ರೀಯ ಅಭಿವೃದ್ಧಿ ಸಮನ್ವಯಕಾರ ಡಾ. ಗಿರೀಶ್ ಸಿ. ಕರ್ನಾಟಕ ರಾಜ್ಯದಲ್ಲಿ ನೆಟ್‌ಬಾಲ್ ಕ್ರೀಡೆ ಸಾಕಷ್ಟು ವೃತ್ತಿಪರತೆಯನ್ನು ಕಾಣುವಲ್ಲಿ ಶ್ರಮಿಸಿರುತ್ತಾರೆ.