Saturday, October 12, 2024

ಕಿಟ್‌ ಇಲ್ಲದೆ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಸ್ಪರ್ಧಿಸುತ್ತಿರುವ ರಾಜ್ಯದ ಕ್ರೀಡಾಪಟುಗಳು!!

ಇದು ಸಂಘಟಕರಾದ ಗೋವಾದ ಪ್ರಮಾದವೋ, ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಬೇಜವಾಬ್ದಾರಿಯೋ, ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆಯ ನಿರ್ಲಕ್ಷ್ಯವೋ, ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆಯ ತಾತ್ಸಾರವೋ ಅಥವಾ ಕರ್ನಾಟಕ ಕ್ರೀಡಾ ಇಲಾಖೆಯ ಅರಿವಿನ ಕೊರತೆಯೋ, ಅಥವಾ ರಾಜ್ಯ ಸರ್ಕಾರಕ್ಕೆ ಕ್ರೀಡೆಯ ಬಗ್ಗೆ ಇರುವ ನಿರ್ಲಕ್ಷ್ಯವೋ ಗೊತ್ತಿಲ್ಲ. ಆದರೆ ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು ಕಿಟ್‌ ಇಲ್ಲದೆಯೇ ಸ್ಪರ್ಧಿಸಿ ಪದಕಗಳ ಸಾಧನೆ ಮಾಡುತ್ತಿದ್ದಾರೆ. Karnataka athletes participating in Goa National Games without official Kit.

ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆಯನ್ನು ಈ ಕುರಿತು ಪ್ರಶ್ನಿಸಿದಾಗ ಈ ಬಗ್ಗೆ ನಮಗೆ ಅರಿವಿಲ್ಲ ಎಂಬ ಉತ್ತರ ನೀಡಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಮೊದಲೇ ಇಮೇಲ್‌ ಮೂಲಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆಗೆ ತಿಳಿಸಿದ್ದೇವೆ ಎನ್ನುತ್ತಾರೆ ಹಿರಿಯ ಅಥ್ಲೀಟ್‌ಗಳು. ಆದರೆ ನಮ್ಮ ರಾಜ್ಯದ ಕ್ರೀಡಾಪಟುಗಳಿಗೆ ಕಿಟ್‌ ಸಿಗಲಿಲ್ಲ.

ಕರ್ನಾಟಕದ ಸ್ನೇಹಾ ಎಸ್‌. ಅವರು 100 ಮೀ. ಓಟದಲ್ಲಿ ಚಿನ್ನ ಗೆದ್ದು ದೇಶದ ಅತ್ಯಂತ ವೇಗದ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರಾದರು. ಆದರೆ ವಿಕ್ಟರಿ ಸ್ಟ್ಯಾಂಡ್‌ನಲ್ಲಿ ಅವರನ್ನು ನೋಡಿದಾಗ ನಿಜವಾಗಿಯೂ ಬೇಸರ ಅನಿಸಿತು. ಯಾವುದೋ ಕೆಂಪು ಟಿ ಶರ್ಟ್‌ ಧರಿಸಿ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೂ ಕಿಟ್‌ ಸಿಕ್ಕಿರಲಿಲ್ಲ. ಇದು ಈ ರಾಜ್ಯದ ಕ್ರೀಡಾ ದುರಂತ.

ಕ್ರೀಡಾಪಟುಗಳು ಸಾಧನೆ ಮಾಡಿದಾಗ ಅವರ ಫೋಟೋ ಜೊತೆಗೆ ತಮ್ಮದೂ ಒಂದು ಫೋಟೋ ಹಾಕಿ ಅಭಿನಂದನೆ ಸಲ್ಲಿಸುವವರಿಗೆ ಇಲ್ಲಿ ಕೊರತೆ ಇಲ್ಲ. ಖುಷಿಯ ವಿಚಾರ. ಗೆದ್ದು ಬಂದಾಗ ಗುಂಪಿನಲ್ಲಿ ನಿಂತು ತಾವೇ ಸಾಧನೆ ಮಾಡಿದಂತೆ ಫೋಸು ಕೊಡುವವರಿಗೂ ಇಲ್ಲಿ ಕೊರತೆ ಇಲ್ಲ. ಖುಷಿಯ ವಿಚಾರ. ಆದರೆ ಈ ರೀತಿ ಕ್ರೀಡಾಪಟುಗಳಿಗೆ ಅವಮಾನವಾದಾಗ ಮಾತ್ರ ಎಲ್ಲರೂ ಇನ್ನೊಬ್ಬರ ಕಡೆಗೆ ಕೈ ತೋರಿಸುವ ಕೆಲಸ ಮಾಡುತ್ತಾರೆ.

ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ರಾಜಕಾರಣಿಗಳ ಹಿಡಿತದಲ್ಲಿದೆ. ಎಂಟು ತಂಡಗಳನ್ನು ರಚಿಸಲಾಗದೆ ವಾಲಿಬಾಲ್‌ ಕ್ರೀಡೆಯನ್ನೇ ಕ್ರೀಡಾಕೂಟದಿಂದ ಕೈ ಬಿಟ್ಟಿರುವುದು ಬೇಸರದ ಸಂಗತಿ. ರಾಷ್ಟ್ರೀಯ ಕ್ರೀಡಾಕೂಟವೆಂದರೆ ಅದು ದೇಶದ ಒಲಿಂಪಿಕ್ಸ್‌ ಇದ್ದಂತೆ. ತಾವು ಪಡೆದ ತರಬೇತಿ, ವ್ಯಯಿಸಿದ ಶ್ರಮ ಇವುಗಳಿಗೆಲ್ಲ ಒಂದು ಬೆಲೆ ಸಿಗುತ್ತದೆ ಎಂದು ಕ್ರೀಡಾಪಟುಗಳು ಕಾದುಕೊಂಡಿರುತ್ತಾರೆ. ಆ ಕ್ರೀಡೆಯೇ ಇಲ್ಲ ಎಂದಾಗ ಅವರಿಗೆ ಎಷ್ಟು ನೋವಾಗಿರಲಿಕ್ಕಿಲ್ಲ?

Related Articles