Friday, October 4, 2024

ಮೈಸೂರು ವಾರಿಯರ್ಸ್‌ಗೆ ಯುವ ಯೋಧ ಆದಿತ್ಯ ಮಣಿ

ಮಹಾರಾಜ ಟ್ರೋಫಿ Maharaja Trophy T20 ಕರ್ನಾಟಕ ಪ್ರೀಮಿಯರ್‌ ಲೀಗ್‌ಗೆ ದಿನಗಣನೆ ಆರಂಭಗೊಂಡಿದೆ. ಯಾವಾಗಲೂ ಯುವ ಆಟಗಾರರಿಗೆ ಪ್ರೋತ್ಸಾಹ ನೀಡುವ ಮೈಸೂರು ವಾರಿಯರ್ಸ್‌ Mysore Warriors ಈ ಬಾರಿಯೂ ಯುವ ಆಟಗಾರರಿಗೆ ಅವಕಾಶ ನೀಡಿದೆ. ಅವರಲ್ಲಿ ಭವಿಷ್ಯದ ಆಲ್ರೌಂಡರ್‌ ಎಂಬುದನ್ನು ಈಗಾಗಲೇ ಸಾಬೀತುಪಡಿಸಿರುವ ಮಾಗಡಿ ಕ್ರಿಕೆಟ್‌ ಅಕಾಡೆಮಿಯ Magadi Cricket Academy ಪ್ರತಿಭೆ ಆದಿತ್ಯ ಮಣಿ Aditya Mani ಕೂಡ ಒಬ್ಬರು.

ಮೈಸೂರು ವಾರಿಯರ್ಸ್‌ ತಂಡ ಒಬ್ಬ ಯುವ ಆಟಗಾರನಿಗೆ ಅವಕಾಶ ನೀಡಿದೆ ಎಂದರೆ ಆತನಲ್ಲಿ ನಿಜವಾಗಿಯೂ ಸಾಮರ್ಥ್ಯ ಇದೆ ಎಂಬುದನ್ನು ಮನಗಾಣಬೇಕು. ಈ ಹಿಂದೆ ನಿಕಿನ್‌ ಜೋಸ್‌ಗೆ ಇದೇ ತಂಡ ಅವಕಾಶ ನೀಡಿದ್ದು ಈಗ ಆತ ಭಾರತದ ಎಮರ್ಜಿಂಗ್‌ ಆಟಗಾರನಾಗಿ ಬೆಳೆದಿದ್ದಾರೆ.

ಕಷ್ಟದಲ್ಲಿ ಬೆಳೆದ ಟೈಲರ್‌ ಮಗ ಆದಿತ್ಯ: ಆದಿತ್ಯ ಮಣಿ ಅವರ ತಂದೆ ಮಣಿ ಪಿ. ಬೆಂಗಳೂರಿನಲ್ಲಿ ಟೈಲರ್‌. ತಾಯಿ ಜಯ. ಚಿಕ್ಕಂದಿನಲ್ಲಿ ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡುತ್ತಿದ್ದ ಆದಿತ್ಯ ಮಣಿಗೆ ಉತ್ತಮ ತರಬೇತಿ ನೀಡಿದವರು ಬನಶಂಕರಿಯಲ್ಲಿರುವ ಮಾಗಡಿ ಕ್ರಿಕೆಟ್‌ ಅಕಾಡೆಮಿಯ ಕೋಚ್‌ ಮಂಜುನಾಥ್‌. 8ನೇ ವರ್ಷದಿಂದ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಆದಿತ್ಯಗೆ ಈಗ 21 ವರ್ಷ. ಜಯನಗರ ಕೋಲ್ಟ್ಸ್‌ ತಂಡದ ಪರ 14 ವರ್ಷ ವಯೋಮಿತಿಯ ಕ್ರಿಕೆಟ್‌ನಲ್ಲಿ ಕೆಎಸ್‌ಸಿಎ ಪಂದ್ಯಗಳಲ್ಲಿ ಆಡಿ ಮಿಂಚಿದ್ದ ಆದಿತ್ಯ ಮಣಿ 16 ಮತ್ತು 19 ವರ್ಷ ವಯೋಮಿತಿಯಲ್ಲೂ ಉತ್ತಮ ಪ್ರದರ್ಶನ ತೋರಿದ್ದರು. ಈಗ ಕೆಎಸ್‌ಸಿಎ 2ನೇ ಡಿವಿಜನ್‌ನಲ್ಲಿ ಹೆರಾನ್ಸ್‌ ಕ್ರಿಕೆಟ್‌ ಕ್ಲಬ್‌ ಪರ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

2021ರಲ್ಲಿ 2ನೇ ಡಿವಿಜನ್‌ನಲ್ಲಿ 27 ವಿಕೆಟ್‌ ಗಳಿಸಿ ಅತ್ಯಂತ ಗರಿಷ್ಠ ವಿಕೆಟ್‌ ಗಳಿಸಿದ ವೇಗದ ಬೌಲರ್‌ ಎನಿಸಿದ್ದಾರೆ. 2022ರಲ್ಲಿ ಹೆರಾನ್ಸ್‌ ಪರ 26 ವಿಕೆಟ್‌ ಹಾಗೂ 300 ರನ್‌ ಗಳಿಕೆಯ ಸಾಧನೆ ಮಾಡಿದ್ದಾರೆ. ಪ್ರಸಕ್ತ ಋತುವಿನಲ್ಲಿ ಸದ್ಯ ಮುಗಿದಿರುವ 7 ಪಂದ್ಯಗಳಲ್ಲಿ 16 ವಿಕೆಟ್‌ ಹಾಗೂ 300 ರನ್‌ ಗಳಿಸಿದ್ದಾರೆ.

ಶತಕ ಸಿಡಿಸಿ ಪಂದ್ಯ ಗೆಲ್ಲಿಸಿದ ಆದಿತ್ಯ: ಕಳೆದ ಕೆಲವು ದಿನಗಳ ಹಿಂದೆ ಹೆರಾನ್ಸ್‌ ಕ್ರಿಕೆಟ್‌ ಕ್ಲಬ್‌ ಹಾಗೂ ಬೆಂಗಳೂರು ಕ್ರಿಕೆಟರ್ಸ್‌ ನಡುವೆ ಪಂದ್ಯ ನಡೆಯುತ್ತಿತ್ತು. ಹೆರಾನ್ಸ್‌ಗೆ ಜಯ ಗಳಿಸಲು 210 ರನ್‌ ಗಳಿಸಬೇಕಾಗಿತ್ತು. ಆದರೆ ತಂಡ 86 ರನ್‌ಗೆ 8 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆದಿತ್ಯ ಮಣಿ ಇರುವ ತನಕ ಹೆರಾನ್ಸ್‌ ಪಂದ್ಯ ಸೋಲುತ್ತದೆ ಎಂದು ಹೇಳಲಾಗದು. ಶತಕ ಸಿಡಿಸಿದ ಆದಿತ್ಯ ಮಣಿ ಹೆರಾನ್ಸ್‌ಗೆ ಜಯ ತಂದುಕೊಟ್ಟರು.ಕ್ರೀಡೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿರುವ ಬೆಂಗಳೂರಿನ ಸುರಾನ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಆದಿತ್ಯ ಮಣಿ ಮಧ್ಯಮಕ್ರಮಾಂಕದ ಆಟಗಾರ ಹಾಗೂ ಬಲಗೈ ವೇಗದ ಬೌಲರ್‌. ರಾಜ್ಯಕ್ಕೆ ಅಗತ್ಯವಿರುವ ಉತ್ತಮ ಆಲ್ರೌಂಡರ್‌. ಈ ಬಾರಿ ಒಂದು ಶತಕ ಹಾಗೂ 95 ರನ್‌ ಗಳಿಕೆ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.

ಮೈಸೂರು ವಾರಿಯರ್ಸ್‌ಗೆ ಚಿರಋಣಿ: “ಮೈಸೂರು ವಾರಿಯರ್ಸ್‌ ಫ್ರಾಂಚೈಸಿ ನನ್ನ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದೆ. ಹಿರಿಯ ಆಟಗಾರರೊಂದಿಗೆ ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಳ್ಳುವುದೇ ದೊಡ್ಡ ಭಾಗ್ಯ. ತಂಡದ ಹಿರಿಯರು ಮತ್ತು ಮಾಲೀಕರಿಗೆ ನಾನು ಚಿರಋಣಿಯಾಗಿದ್ದೇನೆ. ಮಹಾರಾಜ ಟ್ರೋಫಿ ಅದೊಂದು ಉತ್ತಮ ಅವಕಾಶ. ಈ ಅವಕಾಶದ ಪ್ರಾಮುಖ್ಯತೆ ಎಷ್ಟೆಂಬುದುರ ಅರಿವಿದೆ. ಆಡುವ ಅವಕಾಶ ಸಿಕ್ಕರೆ  ಅದಕ್ಕೆ ನ್ಯಾಯ ಒದಗಿಸುತ್ತೇನೆಂಬ ಆತ್ಮವಿಶ್ವಾಸವಿದೆ,” ಎಂದು ಆದಿತ್ಯ ಮಣಿ ಹೇಳಿದ್ದಾರೆ.

ಬದುಕು ನೀಡಿದ ಮಂಜುನಾಥ್‌: ಮಾಗಡಿ ಕ್ರಿಕೆಟ್‌ ಅಕಾಡೆಮಿಯ ಸ್ಥಾಪಕ ಹಾಗೂ ಪ್ರಧಾನ ಕೋಚ್‌ ಆಗಿರುವ ಮಂಜುನಾಥ್‌ ಅವರು ಆಸಕ್ತ ಚಿಕ್ಕಮಕ್ಕಳಿಗೆ ತರಬೇತಿ ನೀಡಿ ಅವರನ್ನು ಉತ್ತಮ ಕ್ರಿಕೆಟಿಗರನ್ನಾಗಿ ಮಾಡುತ್ತಿದ್ದಾರೆ. ಅವರಲ್ಲಿ ತರಬೇತಿ ಪಡೆದ ಯುವ ಆಟಗಾರರು ವಿವಿಧ ಕ್ಲಬ್‌ಗಳಲ್ಲಿ ಲೀಗ್‌ ಆಡುತ್ತಿದ್ದಾರೆ. ಆದಿತ್ಯ ಮಣಿ ಅವರು ತಮಗೆ ತರಬೇತಿ ನೀಡಿದ ಕೋಚ್‌ ಮಂಜುನಾಥ್‌ ಅವರನ್ನು ಸದಾ ಸ್ಮರಿಸುತ್ತಾರೆ, “ಕ್ರಿಕೆಟ್‌ನಲ್ಲಿ ಯಾವುದೇ ಹಂತವನ್ನು ತಲುಪಲಿ ನನ್ನ ಗುರುಗಳಾದ ಮಂಜುನಾಥ್‌ ಅವರನ್ನು ಜೀವನದುದ್ದಕ್ಕೂ ಮರೆಯೊಲ್ಲ. ಅತ್ಯಂತ ಶಿಸ್ತಿನಲ್ಲಿ ತರಬೇತಿ ನೀಡುವ ಅವರು ಕ್ರಿಕೆಟಿಗರ ಬಗ್ಗೆ ವಹಿಸುತ್ತಿರುವ ಕಾಳಜಿ ಅಪಾರವಾದುದು. ಅವರು ಹಾಕಿಕೊಟ್ಟ ಆದರ್ಶದ ಹೆಜ್ಜೆಯಲ್ಲೇ ಮುಂದೆ ಸಾಗುವೆ,” ಎಂದಿದ್ದಾರೆ ಆದಿತ್ಯ ಮಣಿ.

ಭವಿಷ್ಯದ ಆಲ್ರೌಂಡರ್‌: ಆದಿತ್ಯ ಮಣಿಯ ಕ್ರಿಕೆಟ್‌ ಯಶಸ್ಸಿನ ಬಗ್ಗೆ ಮಾತನಾಡಿದ ಕೋಚ್‌ ಮಂಜುನಾಥ್‌, “ಆದಿತ್ಯ ಒಬ್ಬ ಶಿಸ್ತಿನ ಆಟಗಾರ. ಬದ್ಧತೆಯ ಆಟಗಾರ. ಹವಲು ಬಾರಿ ಸೋಲುವ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುವ ಆಲ್ರೌಂಡರ್.‌ ಇದೇ ರೀತಿಯ ಶಿಸ್ತು ಹಾಗೂ ಬದ್ಧತೆಯನ್ನು ಮುಂದುವರಿಸಿದರೆ ಅವರು ರಾಜ್ಯ ತಂಡವನ್ನು ಮಾತ್ರವಲ್ಲ ಭಾರತ ತಂಡದಲ್ಲೂ ಆಡುವ ಸಾಮರ್ಥ್ಯ ಹೊಂದಿರುವ ಆಟಗಾರನಾಗುತ್ತಾನೆ,” ಎಂದು ಮಂಜುನಾಥ್‌ ಅತ್ಯಂತ ಖುಷಿಯಿಂದ ಹೇಳಿದ್ದಾರೆ.

ಆರ್‌. ಅಶೋಕ್‌ ಪ್ರೋತ್ಸಾಹ: ಮಾಗಡಿ ಕ್ರಿಕೆಟ್‌ ಅಕಾಡೆಮಿಗೆ ಪದ್ಮನಾಭನಗರ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌ ಅವರು ಎಲ್ಲ ರೀತಿಯ ನೆರವನ್ನು ನೀಡುತ್ತಿದ್ದು ಇದರಿಂದಾಗಿ ಸ್ಥಳೀಯ ಕ್ರಿಕೆಟಿಗರಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಲು ಸಾಧ್ಯವಾಯಿತು ಎನ್ನುತ್ತಾರೆ ಅಕಾಡೆಮಿಯ ಕೋಚ್‌ ಮಂಜುನಾಥ್‌.

Related Articles