Wednesday, July 24, 2024

ಆರು ಹಿತವರು ನಿಮಗೆ ಈ ಮೂವರೊಳಗೆ?

ಸಂಭ್ರಮವನ್ನು ಆಚರಿಸುವಾಗ ಕೆಲವೊಮ್ಮೆ ಸಂವೇದನೆಯನ್ನೇ ಕಳೆದುಕೊಳ್ಳುತ್ತೇವೆ. ಒಂದೊಂದು ಕಡೆ ಒಂದೊಂದು ಅಂಗಕ್ಕೆ ಗೌರವ ಕೊಡುತ್ತಾರೆ. ಯಾವುದೋ ಸ್ವಾಮೀಜಿ ಭಕ್ತನ ತಲೆಯ ಮೇಲೆ ಕಾಲಿಟ್ಟು ಆಶೀರ್ವಾದ ಮಾಡುತ್ತಾನೆ. ಕೈ ಕುಲುಕುವುದು ಹೆಚ್ಚಿನ ದೇಶಗಳಲ್ಲಿ ಗೌರವ, ಇನ್ನು ಕೆಲವೆಡೆ ಅಪ್ಪಿಕೊಳ್ಳುವುದೇ ಗೌರವ. ಕೆಲವೆಡೆ ಹಿರಿಯರ ಮುಂದೆ ಕಾಲಮೇಲೆ ಕಾಲು ಹಾಕುವಂತಿಲ್ಲ, ಕೆಲವೆಡೆ ಕಿಸ್‌ ಕೊಟ್ಟು ಸ್ವಾಗತಿಸುತ್ತಾರೆ, ಇನ್ನು ಕೆಲವೆಡೆ ಕಿಸ್‌ ಕೊಟ್ರೆ ಪೆಟ್ಟು ಬೀಳ್ತದೆ. ಸಮಯ ಸಂದರ್ಭ ಮುಖ್ಯ. ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರ ಮಿಚೆಲ್‌ ಮಾರ್ಷ್‌ ಕ್ರಿಕೆಟ್‌‌ ಜಗತ್ತಿನಿಂದ ಟೀಕೆಗೆ ಗುರಿಯಾಗಿದ್ದಾರೆ. ಕಾರಣ ವಿಶ್ವಕಪ್‌ ಟ್ರೋಫಿಯ ಮೇಲೆ ಕಾಲಿಟ್ಟಿದ್ದಕ್ಕೆ. ಮಿಚೆಲ್‌ ಮಾರ್ಷ್‌ ತಲೆಯಲ್ಲಿ ಏನಿದೆಯೋ ಯಾರಿಗೆ ಗೊತ್ತು? Mitchell Marsh rests his leg on the World Cup Trophy!

ಭಾರತದ ಕ್ರಿಕೆಟ್‌ ಅಭಿಮಾನಿಗಳು ವಿಶ್ವಕಪ್‌ ಫೈನಲ್‌ನಲ್ಲಿ ಸೋತ ನೋವಲ್ಲಿದ್ದಾರೆ. ಆಸ್ಟ್ರೇಲಿಯಾ ಸಂಭ್ರಮಾಚರಣೆಯಲ್ಲಿದೆ. ಆಸ್ಟ್ರೇಲಿಯಾದ ಆಟಗಾರ ಮಿಚೆಲ್‌ ಮಾರ್ಷ್‌ ಟ್ರೋಫಿಯ ಮೇಲೆ ಕಾಲಿಟ್ಟ ಚಿತ್ರವನ್ನು ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿರುವುದು ಕ್ರಿಕೆಟ್‌ ಜಗತ್ತಿನಲ್ಲಿ ಸಾಕಷ್ಟು ಟೀಕೆಗೆ ಗುರಿ ಮಾಡಿದೆ.

1983ರಲ್ಲಿ ಭಾರತ ವಿಶ್ವಕಪ್‌ ಗೆದ್ದಾಗ ತಂಡದ ನಾಯಕ ಕಪಿಲ್‌ ದೇವ್‌ ಟ್ರೋಫಿಯನ್ನು ತಲೆಯ ಮೇಲಿಟ್ಟು ಕುಣಿದಾಡಿದ್ದರು. ಅದು ಭಾರತೀಯರಾದ ನಾವು ಕೊಡುವ ಗೌರವ. 2022 ವಿಶ್ವಕಪ್‌ನಲ್ಲಿ ಉತ್ತಮ ಗೋಲ್‌ಕೀಪರ್‌ ಪ್ರಶಸ್ತಿ ಗೆದ್ದ ಎಮಿಲಿಯಾನೋ ಮಾರ್ಟಿನೇಜ್‌ಗೆ ಚಿನ್ನದ ಗ್ಲೌಸ್‌ ನೀಡಲಾಗಿತ್ತು. ಅದನ್ನು ಸ್ವೀಕರಿಸಿದ ಮಾರ್ಟಿಜೇಜ್‌ ತನ್ನ ಮರ್ಮಾಂಗದ ಭಾಗದಲ್ಲಿ ಇರಿಸಿಕೊಂಡು ಫ್ರಾನ್ಸ್‌ನ ಪ್ರೇಕ್ಷಕರ ಕಡೆಗೆ ತೋರಿಸಿದ್ದು ವಿವಾವದಕ್ಕೆ ಗುರಿಯಾಗಿತ್ತು. ಹೀಗೆ ಮಾಡಲು ಕಾರಣ ಏನೆಂಬುದನ್ನು ಆ ಬಳಿಕ ಮಾರ್ಟಿನೇಜ್‌ ತಿಳಿಸಿದ್ದರು. “ಇಷ್ಟು ಸಾಧನೆ ಮಾಡಿದರೂ ಫ್ರಾನ್ಸ್‌ ಫುಟ್ಬಾಲ್‌ ಅಭಿಮಾನಿಗಳು ನನ್ನನ್ನು ಅವಮಾನ ಮಾಡುತ್ತಿದ್ದರು. ರೇಗಿಸುತ್ತಿದ್ದರು. ಹಾಗಾಗಿ ಅವರಿಗೋಸ್ಕ ಹೀಗೆ ಮಾಡಬೇಕಾಯಿತು,” ಎಂದಿದ್ದಾರೆ. ಮಿಚೆಲ್‌ ಮಾರ್ಷ್‌ ಆಸ್ಟ್ರೇಲಿಯಾ ತಂಡದ ಉತ್ತಮ ಆಟಗಾರ. ವಿಶ್ವಕಪ್‌ ಗೆಲ್ಲುವುದು ಪ್ರತಿಯೊಬ್ಬ ಕ್ರಿಕೆಟಿಗರ ಕನಸಾಗಿರುತ್ತದೆ. ಗೆದ್ದ ಬಳಿಕ ಸಂಭ್ರಮಿಸುವುದು ಅವರಿಗೆ ಬಿಟ್ಟಿದ್ದು. ಆದರೆ ನೋಡುವ ಜಗತ್ತೊಂದು ಇದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.

ದೇಹದ ಪ್ರತಿಯೊಂದು ಅಂಗಗಳೂ ಮುಖ್ಯವೇ. ಆದರೆ ಅವುಗಳ ಕೆಲಸವನ್ನು ನಾವು ಎಲ್ಲಿ ಯಾವಾಗ ಮಾಡುತ್ತೇವೆ ಎಂಬುದು ಮುಖ್ಯ. ಊಟ ಮಾಡುವಾಗ ಕಾಲಿನಿಂದ ಊಟ ಮಾಡುವುದಿಲ್ಲ. ಕೈ ಇಲ್ಲದವರು ಮಾಡಬಹುದು. ನಡೆಯುವಾಗ, ಆಡುವಾಗ ಕಾಲು ಮುಖ್ಯ. ನೋಡಲು ಕಣ್ಣು ಮುಖ್ಯ. ಅವುಗಳು ಬಳಕೆ ಅತ್ಯಂತ ಪ್ರಮುಖವಾದುದು. ಮಿಚೆಲ್‌ ಮಾರ್ಷ್‌ಗೆ ಈ ವಿಶ್ವಕಪ್‌ ಮುಖ್ಯವಲ್ಲದೇ ಇರಬಹುದು. ಆದರೆ ಅದಕ್ಕೊಂದು ಗೌರವವಿದೆ. ಅದನ್ನು ಅವರು ಗೆದ್ದಿರಬಹುದು, ಆದರೆ ಅದರ ಮೇಲೆ ಕಾಲಿಟ್ಟು, ಕೈಯಲ್ಲಿ ಪಿಂಟ್‌ ಹಿಡಿದು ಫೋಟೋ ತೆಗೆಸಿಕೊಳ್ಳುವಷ್ಟು ಮೌಲ್ಯವನ್ನು ಅದು ಕಳೆದುಕೊಂಡಿಲ್ಲ.

ಎಲ್ಲ ಫೋಟೋಗಳನ್ನೂ ತೆಗೆದುಕೊಳ್ಳಬೇಕು, ಆದರೆ ಯಾವುದನ್ನು ಶೇರ್‌ ಮಾಡಬೇಕು ಎನ್ನುವುದರ ಬಗ್ಗೆಯೂ ಅರಿವಿರಬೇಕು. ನಾಯಕ ಪ್ಯಾಟ್‌ ಕಮಿನ್ಸ್‌ ಈ ಬಗ್ಗೆ ಯೋಚಿಸಬೇಕಿತ್ತು. ಜಗತ್ತಿನ ನಾಗರಿಕತೆ ಭಿನ್ನವಾದುದು. ನಮಗೆ ಭಕ್ತಿ ಎನಿಸಿದ್ದು ಇನ್ನೆಲ್ಲಿಯೋ ಅದು ಭಕ್ತಿಯ ವ್ಯಾಪ್ತಿಯಲ್ಲಿ ಬಾರದೇ ಇರಬಹುದು. ನಾವು ಅಣುರೇಣು ತೃಣ ಕಾಷ್ಟಗಳಲ್ಲಿ ದೇವರನ್ನು ಕಾಣುವವರು. ಇನ್ನು ಕೆಲವರು ಇಂತಲ್ಲಿ ಮಾತ್ರ ದೇವರಿದೆ ಎಂದು ನಂಬುವವರು.

ವಿಶ್ವಕಪ್‌ ಗೆಲ್ಲಬೇಕೆಂದು ಕನಸು ಕಾಣುತ್ತಾರೆ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಆಸ್ಟ್ರೇಲಿಯಾಕ್ಕೆ ಇದು ಆರನೇ ವಿಶ್ವಕಪ್‌. ಹಿಂದೆ ರಿಕಿ ಪಾಂಟಿಂಗ್‌ ಕೂಡ ಪ್ರಶಸ್ತಿ ಸ್ವೀಕರಿಸುವಾಗ ಅಸಭ್ಯವಾಗಿ ವರ್ತಿಸಿದ್ದರು. ಅರ್ಜೆಂಟೀನಾದ ಫುಟ್ಬಾಲ್‌ ತಂಡದ ನಾಯಕ ಲಿಯೋನೆಲ್‌ ಮೆಸ್ಸಿ ತಾನು ಗೆದ್ದ ವಿಶ್ವಕಪ್‌ ಟ್ರೋಫಿಯನ್ನು ತನ್ನ ಬೆಡ್‌ರೂಮ್‌ಗೆ ತಂದು ಹೊದಿಸಿ, ಅದರೊಂದಿಗೆ ಮಲಗಿ ಫೋಟೋ ಹಾಕಿದ್ದರು. ಅದು ಪ್ರೀತಿಯನ್ನು ತೋರಿಸುವ ಬಗೆ.

ಇದು ಫೋಟೋ ಶಾಪ್‌ ಯುಗ. ಮಿಚೆಲ್‌ ಮಾರ್ಷ್‌ ಅವರ ಪ್ರತಿಕ್ರಿಯೆ ಬರುವವರೆಗೂ ಚಿತ್ರ ನಿಜವೋ, ನಕಲಿಯೋ ಎಂದು ತಿಳಿಯಲಾಗದು. ಪ್ರಧಾನಿ ನರೇಂದ್ರ ಮೋದಿಯವರು ಪ್ಯಾಟ್‌ ಕಮಿನ್ಸ್‌ಗೆ ಟ್ರೋಫಿ ನೀಡಿ ಅಭಿನಂದಿಸಿ ಹೋಗುವ ವೀಡಿಯೋವನ್ನು ಎಡಿಟ್‌ ಮಾಡಿ, ಅಭಿನಂದಿಸಿಲ್ಲ ಎಂದು ವೈರಲ್‌ ಮಾಡಲಾಗುತ್ತಿದೆ. ನಾವು ಒಂದು ಮಾಡಿದರೆ ಅದಕ್ಕೆ ಪ್ರತಿಯಾಗಿ ಹತ್ತು ಫೋಟೋ ಶಾಪ್‌ ಮಾಡುವ ಕಾಲ ಇದು. ಆದ್ದರಿಂದ ಯಾವುದನ್ನೂ ನಂಬುವ ಮೊದಲು ಯೋಚಿಸಬೇಕಾಗಿರುವುದು ಅತ್ಯಗತ್ಯ. ಚಿತ್ರ ನಿಜವೇ ಆಗಿದ್ದಲ್ಲಿ ಮಿಚೆಲ್‌ ಮಾರ್ಷ್‌ ಗೌರವ ಕಳೆದುಕೊಳ್ಳುತ್ತಾರೆ.

Related Articles