Wednesday, November 13, 2024

ಗೆದ್ದಾಗ ಹೊತ್ತು ತಿರುಗುತ್ತಾರೆ, ಸೋತಾಗ ನಡೆದೇ ಹೋಗಬೇಕು!

ಸೋಲು ಬದುಕಿಗೆ ಪಾಠ ಕಲಿಸುತ್ತದೆ… ಫೈನಲ್‌ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಆಸ್ಟ್ರೇಲಿಯಾ ತಂಡ ಗೆದ್ದು ಸಂಭ್ರಮಿಸಿತು. ಸತತ ಹತ್ತು ಪಂದ್ಯಗಳಲ್ಲಿ ಜಯ ಗಳಿಸಿ ಕೊನೆಯ ಪಂದ್ಯದಲ್ಲಿ ಸೋತ ಭಾರತ ತಂಡದ ಬಗ್ಗೆ ಬೇಸರವಾಗುವುದು ಸಾಮಾನ್ಯ. ಆದರೆ ತಂಡವನ್ನು ಟೀಕಿಸುವುದು ಸೂಕ್ತವಲ್ಲ. When you won the trophy they lift you when lost you are alone.

2011ರಲ್ಲಿ ಭಾರತ ವಿಶ್ವಕಪ್‌‌ ಗೆದ್ದಾಗ ಇದೇ ವಿರಾಟ್‌ ಕೊಹ್ಲಿ ಅವರು ಸಚಿನ್‌ ತೆಂಡೂಲ್ಕರ್‌ ಅವರನ್ನು ಹೊತ್ತು ಕ್ರೀಡಾಂಗಣದಲ್ಲಿ ಸಂಭ್ರಮಿಸಿದ್ದರು. ಕೋಚ್‌ ಗ್ಯಾರಿ ಕರ್ಸ್ಟನ್‌ ಅವರನ್ನು ಮೇಲಕ್ಕೆ ಚಿಮ್ಮಿ ಖುಷಿ ವ್ಯಕ್ತಪಡಿಸಿದ್ದರು. ಆದರೆ ಇಂದು ಸರಣಿ ಶ್ರೇಷ್ಠ ವಿರಾಟ್‌ ಕೊಹ್ಲಿ ಆಗಸ ನೋಡುತ್ತ ಪೆವಿಲಿಯನ್‌ ಕಡೆ ನಡೆದು ಹೋಗುವಾಗ, ನಾಯಕ ರೋಹಿತ್‌ ಶರ್ಮಾ ತಲೆ ಕೆಳಗೆ ಹಾಕಿ ಸಾಗುವಾಗ, ಕೋಚ್‌ ರಾಹುಲ್‌ ದ್ರಾವಿರ್‌ ಕುಳಿತಲ್ಲೇ ಮೌನಿಯಾಗಿರುವುದನ್ನು ಕಂಡಾಗ ಹೃದಯ ಭಾರವಾಗುತ್ತದೆ.

ಭಾರತ ತಂಡ ಸೋತರೂ ಕ್ರಿಕೆಟಿಗರು ಶ್ರೀಮಂತರಾಗುತ್ತಾರೆ. ಈ ಒಂದು ವಿಶ್ವಕಪ್‌ನಲ್ಲೇ ಸಾಕಷ್ಟು ಹಣ ಅವರು ಗಳಿಸಿರುತ್ತಾರೆ. ವ್ಯಾವಹಾರಿಕ ಜಗತ್ತಿನಲ್ಲಿ ಸೋಲು ಬೇಗನೆ ಮರೆಯಾಗುತ್ತದೆ. ಆದರೆ ಬಡತನದ ನಡುವೆಯೂ ಭಾರತ ಗೆಲ್ಲಬೇಕೆಂಬ ಹಾತೊರೆಯವ ನೈಜ ಕ್ರಿಕೆಟ್‌ ಪ್ರೇಮಿಗೆ ನೋವಾಗುತ್ತದೆ. ಅದು ಕ್ರಿಕೆಟಿಗಿರುವ ಶಕ್ತಿ. ಇವುಗಳ ನಡುವೆ ಸೋಲು ಅನಾಥವಾಗುತ್ತದೆ. ಕ್ರೀಡೆಯಲ್ಲಿ ಇದು ಸಹಜ. ಇಂಥ ಪರಿಸ್ಥಿತಿಗಳು ಕೇವಲ ಕ್ರೀಡಾಪಟುಗಳ ಬದುಕಿನಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರ  ಬದುಕಿನಲ್ಲೂ ಬಂದೇ ಬರುತ್ತದೆ.

ಬದುಕಿನ ಅಂಗಣದಲ್ಲಿ ನಾವು ಜಯದಿಂದ ಕಲಿತ ಪಾಠಕ್ಕಿಂತ ಸೋಲಿನಿಂದ ಹೆಚ್ಚು ಪಾಠ ಕಲಿಯುತ್ತೇವೆ. ಕ್ರೀಡೆಯಲ್ಲಿಯೂ ಹಾಗೆ. ಆಸ್ಟ್ರೇಲಿಯಾ ಆರಂಭಿಕ ಎರಡು ಸೋಲುಗಳಿಂದ ಪಾಠ ಕಲಿತು ಮತ್ತೆ ಹಿಂದಿರುಗಿ ನೋಡಲಿಲ್ಲ. ಅಲ್ಲಿ ಆಟಗಾರರಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಕ್ರೀಡೆಯಲ್ಲಿ ಇತರ ವಿಷಯಗಳು ಬಾರದಂತೆ ನೋಡಿಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ರನ್‌ ಹೊಡೆದರೆ, ವಿಕೆಟ್‌ ಗಳಿಸಿದರೆ ಮಾತ್ರ ಗೌರವ. ರನ್‌ ಗಳಿಸಿ ಫೀಲ್ಡಿಂಗ್‌ನಲ್ಲಿ ಕ್ಯಾಚ್‌ ಕೈ ಚೆಲ್ಲಿದರೂ ಟೀಕೆ ತಪ್ಪಿದ್ದಲ್ಲ. 24 ವಿಕೆಟ್‌ ಗಳಿಸಿದ ಮೊಹಮ್ಮದ್‌ ಶಮಿ ತಪ್ಪಿನಿಂದ ಒಂದು ಕ್ಯಾಚ್‌ ಕೈ ಚೆಲ್ಲಿದರೂ ಅವರಿಗೂ ನಿಂದನೆಯ ಮಾತು ತಪ್ಪಿದ್ದಲ್ಲ.

ಸೋಲಿನಿಂದ ಪಾಠ ಕಲಿಯೋಣ, ಜಯವನ್ನು ಸವಿಯೋಣ, ತಪ್ಪುಗಳನ್ನು ಅಂಗಣದಲ್ಲೇ ಬಿಟ್ಟು ಒಪ್ಪುಗಳನ್ನು ಬದುಕಿಗೆ ಅಳವಡಿಸಿಕೊಂಡಲ್ಲಿ ಮತ್ತೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ.

Related Articles