Wednesday, October 4, 2023

ಎಂಇಎಸ್ ಕಾಲೇಜಿಗೆ ಡಬಲ್ ಕಿರೀಟ

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಅಂತರ್ ಕಾಲೇಜು ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಎಂಇಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ಮಹಿಳಾ ಹಾಗೂ ಪುರುಷರ ವಿಭಾಗದಲ್ಲಿ ಪ್ರಭುತ್ವ ಸಾಧಿಸಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ಸೌಂದರ್ಯ ಶಿಕ್ಷಣ ಸಂಸ್ಥೆಯು ಆಯೋಜಿಸಿದ ಚಾಂಪಿಯನ್‌ಷಿಪ್‌ನಲ್ಲಿ  ಎಂಇಎಸ್ ಪುರುಷರ ತಂಡ 45 ಅಂಕಗಳಲ್ಲಿ 34 ಅಂಕಗಳನ್ನು ಗೆದ್ದು ಅಗ್ರ ಸ್ಥಾನ ತನ್ನದಾಗಿಸಿಕೊಂಡಿತು. ವನಿತೆಯರ ವಿಭಾಗದಲ್ಲಿ ಎಂಇಎಸ್ ತಂಡ 45 ಅಂಕಗಳಲ್ಲಿ 30 ಅಂಕಗಳನ್ನು ಗೆದ್ದು ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ಮೂರನೇ ವರ್ಷದ ಬಿಎಸ್‌ಸಿ ವಿದ್ಯಾರ್ಥಿ ಸುಜಯ್ ಬಿ.ಎಂ. 9 ಅಂಕಗಳಲ್ಲಿ 8 ಅಂಕಗಳನ್ನು ಗೆದ್ದು ವೈಯಕ್ತಿಕ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದರು. ವನಿತೆಯರ ವಿಭಾಗದಲ್ಲಿ ಮೂರನೇ ವರ್ಷದ ಬಿಕಾಂ ವಿದ್ಯಾರ್ಥಿನಿ ಊರ್ವಿ 7.5 ಅಂಕಗಳನ್ನು ಗೆದ್ದು ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ.
ಕಾಲೇಜು ತಂಡದಲ್ಲಿ ಹರ್ಷಿತಾ ವಾಸುದೇವನ್, ತೇಜಸ್ವಿನಿ ಕೆ.ಎಸ್. ಊರ್ವಿ ಯು, ಪವನ್ ಕುಮಾರ್, ಸುಜಯ್ ಬಿ.ಎಂ., ಭರತ್ ಬಿ. ಹಾಗೂ ಸುಮನ್ ಜೆ.ಕೆ. ಸೇರಿದ್ದಾರೆ.
ಈ ಸಾಧನೆಯಲ್ಲಿ ಕಾಲೇಜಿನ ಫಿಸಿಕ್ಸ್ ವಿಭಾಗದ ಮುಖ್ಯಸ್ಥ ಹಾಗೂ ಕ್ರೀಡಾ ಸಮಿತಿಯ ಸದಸ್ಯ ಪ್ರೊ. ಕೆ.ಎಂ. ರಾಘವೇಂದ್ರ, ಫಿಸಿಕ್ಸ್ ಉಪನ್ಯಾಸಕ ಹಾಗೂ ಕ್ರೀಡಾ ಸಮಿತಿಯ ಸದಸ್ಯ ಪ್ರೊ. ನರಸಿಂಹ ಮೂರ್ತಿ, ಎಂಇಎಸ್, ಡಿಎಸಿಎಸ್‌ನ ಉಪ ಪ್ರಾಂಶುಪಾಲ ಪ್ರೊ. ಶಂಶ್ಯ ರಿಜ್ವಾನಿ, ಎಂಇಎಸ್, ಡಿಎಸಿಎಸ್‌ನ ಪ್ರಾಂಶುಪಾಲೆ ಡಾ. ಡಿ. ಲೀಲಾವತಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕಿ ಮೀನಾಕ್ಷಿ ಎಂ. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಗಿರೀಶ್ ಸಿ. ಅವರ ಪಾತ್ರ ಪ್ರಮುಖವಾಗಿದೆ.

Related Articles